Wednesday, 11th December 2024

ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಕಿಚ್ಚ ಸಾಗಿ ಬಂದ ಹಾದಿ ನೆನೆದ ಸುದೀಪ್

ಕಿಚ್ಚ ಸುದೀಪ್ ಚಿತ್ರರಂಗದಲ್ಲಿ ಇಪ್ಪತೈದು ವಸಂತಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆ ದುಬೈನಲ್ಲಿ ಸಂಭ್ರಮ  ಆಚರಿಸಿಕೊಂಡಿ ದ್ದು, ಈ ವೇಳೆ ತಮ್ಮ ಮನದಿಂಗಿತ ಹಂಚಿಕೊಂಡ ಸುದೀಪ್, ಎಲ್ಲರ ಆಶೀರ್ವಾದದಿಂದ ನಾನು ಚಿತ್ರರಂಗದಲ್ಲಿ ಇಪ್ಪತೈದು ವರ್ಷ ಪೂರೈಸಿದ್ದೇನೆ.

ಇಂದಿನಿಂದ ಇಪ್ಪತ್ತಾರನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು. ತಾವು ಸಾಗಿ ಬಂದ ಚಿತ್ರ ರಂಗ ಪ್ರಯಾಣದ ಮೆಲುಕು ಹಾಕಿದರು. ಸುದೀಪ್ ನಟನಾ ಜೀವನದಲ್ಲಿ ಇಪ್ಪತೈದು ವರ್ಷ ಪೂರೈಸಿದ ಹಿನ್ನೆಲೆ ಇದೇ 31 ರಂದು, ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜಾ ಖಲೀಫಾದಲ್ಲಿ ವಿಕ್ರಾಂತ್ ರೋಣ ಚಿತ್ರದ ಲೋಗೋ ಅನಾವರಣ ಗೊಳ್ಳಲಿದೆ. ಕಿಚ್ಚನ ಕಟೌಟ್ ಕೂಡ ರಾರಾಜಿಸಲಿದೆ. ಆ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಕಾತರರಾಗಿದ್ದಾರೆ.

ಮಾಲಿವುಡ್‌ಗೂ ಎಂಟ್ರಿಕೊಟ್ಟ ಕಿಚ್ಚ: ಈಗಾಗಲೇ ನಾನು ಕನ್ನಡ ಸೇರಿದಂತೆ ತಮಿಳು, ತೆಲುಗು, ಹಾಗೂ ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದೇನೆ. ಆದರೆ ಮಲಯಾಳಂ ಚಿತ್ರದಲ್ಲಿ ಅಭಿನಯಿಸಿರಲಿಲ್ಲ. ಈಗ ಮಾಲಿವುಡ್‌ನಲ್ಲೂ ಅಭಿನಯಿಸುತ್ತಿರುವುದಾಗಿ
ಹೇಳಿದ್ದಾರೆ. ನಾನು ಇದುವರೆಗೂ ಯಾವುದೇ ಮಲಯಾಳಂ ಚಿತ್ರದಲ್ಲಿ ಅಭಿನಯಿಸಿರಲಿಲ್ಲ. ಇದಕ್ಕಾಗಿಯೇ ಪ್ರಿಯಾ ನನಗೆ ದಿನ ಕಾಟ ಕೊಡುತ್ತಿದ್ದಳು. ಮಲಾಯಾಳಂನಲ್ಲಿ ಯಾಕೆ ನಟಿಸುವುದಿಲ್ಲ ಎಂದು ಕೇಳುತ್ತಿದ್ದಳು. ನಾನು ಭಾಷೆ ಬರುವುದಿಲ್ಲ ಎಂದು ಹೇಳಿದ್ದೆ. ಈಗ ಅಲ್ಲಿಯೂ ನಟಿಸಲು ಅವಕಾಶ ಬಂದಿದೆ. ಇದು ನನಗೆ ತುಂಬಾ ಸಂತಸ ತಂದಿದೆ. ಯಾಕೆಂದರೆ ಮಲಯಾಳಂ ನಲ್ಲೂ ಅದ್ಭುತ ಕಲಾವಿದರಿದ್ದಾರೆ. ವಿಶೇಷ ಎಂದರೆ ಮಲಾಯಾಳಂ ಚಿತ್ರದಲ್ಲೂ ಕನ್ನಡದಲ್ಲಿಯೇ ಮಾತನಾಡುತ್ತೇನೆ ಎಂದ ಕಿಚ್ಚ, ತಮ್ಮ ಹೊಸ ಚಿತ್ರದ ಬಗ್ಗೆ ರಿವೀಲ್ ಮಾಡಿದ್ದಾರೆ.

ನನ್ನ ಸಿನಿಮಾವನ್ನು ಕಾಪಾಡಿಕೊಳ್ಳುತ್ತೇನೆ ರಾಬರ್ಟ್ ಸಿನಿಮಾದ ರಿಲೀಸ್‌ಗೆ ಅಡ್ಡಿಯಾಗಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಕಿಚ್ಚ, ನಾನು ಇನ್ನೊಂದು ಸಿನಿಮಾವನ್ನು ಹ್ಯಾಂಡಲ್ ಮಾಡುವಷ್ಟು ದೊಡ್ಡ ಕಲಾವಿದನಲ್ಲ. ನನ್ನ ಸಿನಿಮಾಕ್ಕೆ ಏನಾದರೂ ಸಮಸ್ಯೆಯಾದರೆ, ನಾನು ನನ್ನ ಸಿನಿಮಾವನ್ನು ಕಾಪಾಡಿಕೊಳ್ಳುತ್ತೇನೆ. ಅಂತೆಯೇ ಅವರವರ ಸಿನಿಮಾಗಳನ್ನು ಕಾಪಾಡಿ ಕೊಳ್ಳುವ ಶಕ್ತಿಯನ್ನು ದೇವರು ಎಲ್ಲರಿಗೂ ಕೊಟ್ಟಿರುತ್ತಾನೆ. ಅದರ ಬಗ್ಗೆ ನಾನು ಏನೂ ಹೇಳಲಿ ಎಂದರು.