Tuesday, 10th December 2024

BBK 11: ಬಿಗ್ ಬಾಸ್​ನಿಂದ ಹೊರಬಂದು ಮೊದಲ ಬಾರಿಗೆ ಕ್ಷಮೆಯಾಚಿಸಿದ ಜಗದೀಶ್

Jagadish and Kiccha Sudeep (1)

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಕಳೆದ ವಾರ ದೊಡ್ಡ ಹೈ-ಡ್ರಾಮ ನಡೆಯಿತು. ಹೆಣ್ಣು ಮಕ್ಕಳ ಮೇಲೆ ಅವಾಚ್ಯ ಶಬ್ದಗಳನ್ನು ಬಳಸಿದ ಕಾರಣಕ್ಕೆ ಜಗದೀಶ್ ಮನೆಯಿಂದ ಹೊರಬಿದ್ದರು. ಜಗದೀಶ್ ಅವರನ್ನು ತಳ್ಳಿದ ಕಾರಣಕ್ಕೆ ರಂಜಿತ್ ಕೂಡ ಮನೆಯಿಂದ ಹೊರಹೋಗಬೇಕಾಯಿತು. ಜಗದೀಶ್ ಅವರು ದೊಡ್ಮನೆಯಿಂದ ಹೊರಬಂದ ಬಳಿಕ ತಮ್ಮ ಕ್ಯಾಮೆರಾ ಮುಂದೆ ಬಂದು ಮೊದಲ ಬಾರಿಗೆ ಕ್ಷಮೆಯಾಚಿಸಿದ್ದಾರೆ.

ಭಾನುವಾರ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಮನೆಯಿಂದ ಹೊರಹೋಗಿರುವ ಲಾಯರ್ ಜಗದೀಶ್‌ ಅವರು ವಿಡಿಯೋ ಮೂಲಕ ಮಾತನಾಡಿದ್ದಾರೆ. ಕೆಲವೊಂದು ನನ್ನಿಂದ ತಪ್ಪು ಆಗಬಾರದಿತ್ತು. ಆದರೆ ಗೊತ್ತಾಗದೇ ತಪ್ಪಾಗಿದೆ. ದಯವಿಟ್ಟು ನನ್ನ ಕ್ಷಮಿಸಿ. ಸುದೀಪ್‌ ಸರ್ ನಿಮಗೂ ನನ್ನಿಂದ ಬೇಜಾರಾಗಿರಬಹುದು. ದಯವಿಟ್ಟು ಕ್ಷಮಿಸಿ ಎಂದು ಕೇಳಿದ್ದಾರೆ.

ಜಗದೀಶ್ ಹೇಳಿರುವುದೇನು?:

‘‘ಈ ಪ್ಲಾಟ್‌ಫಾರ್ಮ್ ನನಗೆ ಜೀವನದಲ್ಲಿ ಹೊಸ ದಿಕ್ಕನ್ನೇ ನೀಡಿದೆ. ಹೊಸ ಜಗದೀಶ್‌ನ ನೋಡೋದಕ್ಕೆ ನನಗೇ ಖುಷಿ ಆಯ್ತು. ನನ್ನ ಆಟದ ಬಗ್ಗೆ, ಬಿಗ್ ಬಾಸ್‌ ಶೋನಲ್ಲಿ ನಾನು ನೀಡಿದ ಪರ್ಫಾಮೆನ್ಸ್‌ ಬಗ್ಗೆ ನನಗೆ ಖುಷಿ ಇದೆ. ಆದರೆ ಕೆಲವೊಂದು ಘಟನೆಗಳು ಆಗಬಾರದಿತ್ತು. ನನ್ನ ಕಡೆಯಿಂದ ತಪ್ಪಾಗಿದೆ. ಈ ತಪ್ಪನ್ನು ನಾನು ಮಾಡಬಾರದಿತ್ತು. ಯಾವುದೇ ರೀತಿಯಲ್ಲೂ ಡ್ಯಾಮೇಜ್ ಮಾಡೋದಿಲ್ಲ ಅಂತ ನನ್ನ ಪತ್ನಿಗೆ ನಾನು ಪ್ರಾಮೀಸ್ ಮಾಡಿದ್ದೆ. ಆದರೆ ಅದು ಆಗಿಬಿಡ್ತು. ನನಗೆ ತುಂಬ ಬೇಸರ ಇದೆ. ಅವರೆಲ್ಲಾ ಇನ್ನೂ ಚಿಕ್ಕ ವಯಸ್ಸಿನವರು, ನನ್ನ ಅಣ್ಣ-ತಮ್ಮಂದಿರು. ಏನೋ ಸಣ್ಣ-ಪುಟ್ಟ ತಪ್ಪುಗಳಾಗುತ್ತದೆ, ನಾನೇ ಸಹಿಸಿಕೊಳ್ಳಬಹುದಿತ್ತು. ಅಲ್ಲಿರುವವರು ಎಲ್ಲಾ ಪುಟ್ಟ ಪುಟ್ಟ ಮನಸ್ಸಿನ ಮಕ್ಕಳು, ಪುಟ್ಟ ಪುಟ್ಟ ಕನಸನ್ನು ಹೊತ್ತುಕೊಂಡು ಬಂದವರು. ದೇವರು ನನಗೆ ಇಷ್ಟೊಂದು ಅನುಭವ ಕೊಟ್ಟಿದ್ದಾನೆ, ನಾನೇ ಸಂಭಾಳಿಸಬಹುದಿತ್ತು. ಆದರೆ ಅದು ಆಗಲಿಲ್ಲ,’’ ಎಂದು ಜಗದೀಶ್ ಹೇಳಿದ್ದಾರೆ.

“ರಂಜಿತ್‌ಗೆ ಆಗಿರುವುದರ ಬಗ್ಗೆ ನನಗೆ ನಿಜಕ್ಕೂ ತುಂಬ ಬೇಸರ ಇದೆ. ರಂಜಿತ್ ಮೊದಲ ಬಾರಿಗೆ ಬಿಗ್ ಬಾಸ್ ಶುರುವಾದಾಗ, ಎಲ್ಲೋ ಮೂಲೆಯಲ್ಲಿ ನಿಂತು ನೋಡಿರುತ್ತಾರೆ. 14 ವರ್ಷಗಳ ಶ್ರಮದ ನಂತರ ಅವರೀಗ ಸ್ಪರ್ಧಿಯಾಗಿ ಆಗಮಿಸಿದ್ದರು. ಕೂರ್ಗ್​ನ ಆ ಹುಡುಗ ಸಾಕಷ್ಟು ಕಷ್ಟಪಟ್ಟು ತನ್ನ ಕನಸನ್ನು ನನಸು ಮಾಡಿಕೊಂಡಿದ್ದ. ಆ ವಯಸ್ಸಿಗೆ ಆತನಲ್ಲಿದ್ದ ಆಕ್ರೋಶ ಸಹಜ. ಆದರೆ ಸ್ವಲ್ಪ ಎಚ್ಚರಿಕೆವಹಿಸಬಹುದಿತ್ತು. ನಾನು ಸೇರಿದಂತೆ ಎಲ್ಲಾ ಸೇರಿ ರಂಜಿತ್‌ನ ಬಲಿಪಶು ಮಾಡಿಬಿಟ್ರಲ್ಲ ಅಂತ ಬೇಜಾರು ಇದೆ. ಸುದೀಪ್ ಸರ್, ನಿಮ್ಮಿಂದ ನಾನು ಸಾಕಷ್ಟು ಕಲಿತಿದ್ದೇನೆ. ನೀವು ನಮಗೆ ಗುರುವಿನಂತೆ ಕಂಡಿದ್ದೀರಿ. ನಿಮ್ಮನ್ನು ನಾನು ತುಂಬ ಗಮನಿಸಿದ್ದೇನೆ. ನಿಮಗೆ ನಾನು ಕ್ಷಮೆ ಕೇಳುತ್ತಿದ್ದೇನೆ. ಸಾಧ್ಯವಾದರೆ, ನನ್ನನ್ನು ವಾಪಸ್‌ ಕರೆಸಿಕೊಳ್ಳಿ. ನನ್ನ ತಪ್ಪುಗಳು ನನಗೆ ಅರಿವಾಗಿದೆ,’’ ಎಂದು ಜಗದೀಶ್ ಹೇಳಿದ್ದಾರೆ.

BBK 11: ಬಿಗ್ ಬಾಸ್ ಮನೆಯಲ್ಲಿ ಬುಗಿಲೆದ್ದ ಅಸಮಾಧಾನ: ಎರಡೇ ದಿನಕ್ಕೆ ಸುಸ್ತಾದ ಹನುಮಂತ