Friday, 13th December 2024

ನಟ ಸಲ್ಮಾನ್ ಖಾನ್’ಗೆ ಶಸ್ತ್ರಾಸ್ತ್ರ ಪರವಾನಗಿ

ಮುಂಬೈ: ನಟ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಪತ್ರಗಳ ಹಿನ್ನೆಲೆಯಲ್ಲಿ ಸ್ವಯಂ ರಕ್ಷಣೆಗಾಗಿ ಅರ್ಜಿ ಸಲ್ಲಿಸಿದ ನಂತರ ಶಸ್ತ್ರಾಸ್ತ್ರ ಪರವಾನಗಿ ನೀಡಲಾ ಗಿದೆ.

ಮೇ 29 ರಂದು ಪಂಜಾಬ್‌ನ ಮಾನ್ಸಾ ಬಳಿ ಗಾಯಕ ಸಿಧು ಮೂಸ್ ವಾಲಾ ಅವರನ್ನು ಗುಂಡಿಕ್ಕಿ ಕೊಂದ ಕೆಲವೇ ದಿನಗಳ ಅಂತರದಲ್ಲಿ ಜೂನ್ ಆರಂಭ ದಲ್ಲಿ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆಗೆ ಕೊಲೆ ಬೆದರಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸಲ್ಮಾನ್ ಖಾನ್ ಮುಂಬೈ ಪೊಲೀಸ್ ಆಯುಕ್ತರನ್ನು ಭೇಟಿಯಾಗಿದ್ದರು.

ಗನ್ ಲೈಸೆನ್ಸ್‌ಗಾಗಿ ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರನ್ನು ಭೇಟಿ ಮಾಡಲು ಜೂನ್ ತಿಂಗಳ ಕೊನೆ ಯಲ್ಲಿ ಪೊಲೀಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು.

1998ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿ ಸಲ್ಮಾನ್ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ಜೀವ ಬೆದರಿಕೆ ಹಾಕಿದ್ದರು. ಇದರಲ್ಲಿ ಕೃಷ್ಣಮೃಗ ಬೇಟೆ ಪ್ರಕರಣದ ಆರೋಪಿಗಳಲ್ಲಿ ಸಲ್ಮಾನ್ ಖಾನ್‌ ಕೂಡ ಒಬ್ಬರಾಗಿದ್ದರು.

ನಟ ಸಲ್ಮಾನ್ ಖಾನ್ ಮತ್ತು ಚಿತ್ರ ಸಾಹಿತಿ, ಸಲ್ಮಾನ್ ತಂದೆ ಸಲೀಂ ಖಾನ್ ಅವರ ಹತ್ಯೆ ಬಗ್ಗೆ ಬೆದರಿಕೆ ಪತ್ರ ಬಂದಿತ್ತು. ಮೇ ತಿಂಗಳಲ್ಲಿ ಹತ್ಯೆಯಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ರೀತಿಯಲ್ಲೇ ತಂದೆ-ಮಗ ಇಬ್ಬರನ್ನು ಮುಗಿಸಲಾಗುತ್ತದೆ ಎಂದು ಬೆದರಿಕೆ ಪತ್ರದಲ್ಲಿ ಎಚ್ಚರಿಸಲಾಗಿತ್ತು.

ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರನ್ನು 2021 ರಲ್ಲಿ ಪೊಲೀಸರು ವಿಚಾರಣೆಗೊಳಪಡಿಸಿದಾಗ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದರು.