Wednesday, 11th December 2024

Milana Nagaraj: ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್‌; ಖುಷಿ ಹಂಚಿಕೊಂಡ ಡಾರ್ಲಿಂಗ್‌ ಕೃಷ್ಣ

Milana Nagaraj

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ಮಿಲನಾ ನಾಗರಾಜ್‌ (Milana Nagaraj) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯ ವಿಚಾರವನ್ನು ಅವರ ಪತಿ, ನಟ ಡಾರ್ಲಿಂಗ್‌ ಕೃಷ್ಣ (Darling Krishna) ಹಂಚಿಕೊಂಡಿದ್ದಾರೆ. ಜತೆಗೆ ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದೂ ತಿಳಿಸಿದ್ದಾರೆ. ಈ ಸ್ಟಾರ್‌ ದಂಪತಿಗೆ ಇದೀಗ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ.

ʼʼಮಿಲನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಈ ತಾಯ್ತನದ ಪ್ರಯಾಣದಲ್ಲಿ ಮಿಲನಾ ಹಲವು ನೋವು, ತ್ಯಾಗಳನ್ನು ಎದುರಿಸಿದ್ದಾಳೆ. ಅವಳ ಬಗ್ಗೆ ಹೆಮ್ಮೆ ಇದೆ. ಜೊತೆಗೆ ಎಲ್ಲ ತಾಯಂದಿರಿಗೂ ಬಿಗ್‌ ಸೆಲ್ಯೂಟ್‌. ಮಹಿಳೆಯರ ಮೇಲೆ ನನಗಿದ್ದ ಗೌರವ ಈಗ ಇನ್ನೂ ಹೆಚ್ಚಾಗಿದೆ. ಹೆಣ್ಣು ಮಗಳ ತಂದೆಯಾಗಿದ್ದಕ್ಕೆ ನನಗೆ ಹೆಮ್ಮೆ ಇದೆ. ನಾನೊಬ್ಬ ಅದೃಷ್ಟವಂತ ತಂದೆʼʼ ಎಂದು ಡಾರ್ಲಿಂಗ್‌ ಕೃಷ್ಣ ಅವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ನಾರ್ಮಲ್ ಡೆಲಿವರಿ ಮೂಲಕ ಮಿಲನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮೊದಲ ಮಗುವನ್ನು ಡಾರ್ಲಿಂಗ್ ಕೃಷ್ಣ ಕುಟುಂಬ ಸಂಭ್ರಮದಿಂದ ಬರಮಾಡಿಕೊಂಡಿದೆ. ಕೆಲವು ದಿನಗಳ ಹಿಂದೆ ಮಿಲನಾ ಮತ್ತು ಕೃಷ್ಣ ಫೋಟೋ ಶೂಟ್‌ ಮಾಡಿಸುವ ಮೂಲಕ ಸೆಳೆದಿದ್ದರು. ಕ್ಯಾಂಡಲ್ ಲೈಟ್ ಮತ್ತು ಕ್ವೀನ್ ಥೀಮ್‌ನಲ್ಲಿ ಈ ಫೋಟೋ ಶೂಟ್ ಮಾಡಲಾಗಿತ್ತು.

ಮೂರು ವಾರದ ಹಿಂದೆ ಅದ್ಧೂರಿಯಾಗಿ ಮಿಲನಾ ಅವರ ಸೀಮಂತ ಸಮಾರಂಭ ಕೂಡ ನಡೆದಿತ್ತು. ಈ ಫೋಟೊಗಳನ್ನು ಮಿಲನಾ ನಾಗರಾಜ್ ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡಿದ್ದರು. ಜೊತೆಗೆ ವರ್ಕ್ ಔಟ್ ಮಾಡುತ್ತಿರುವ ವೀಡಿಯೊಗಳನ್ನೂ ಕೂಡ ಆಗಾಗ ಶೇರ್‌ ಮಾಡುತ್ತಿದ್ದರು. ಮಿಲನಾ ನಾಗರಾಜ್, ತಾವು ಗರ್ಭಿಣಿ ಎಂಬ ಖುಷಿಯ ಸಂಗತಿಯನ್ನೂ ಇನ್‌ಸ್ಟಾಗ್ರಾಮ್‌ ಮೂಲಕವೇ ತಿಳಿಸಿದ್ದರು.

2013ರಲ್ಲಿ ʼನಮ್‌ ದುನಿಯಾ ನಮ್‌ ಸ್ಟೈಲ್‌ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಮಿಲನಾ 2021ರಲ್ಲಿ ಡಾರ್ಲಿಂಗ್‌ ಕೃಷ್ಣ ಅವರನ್ನು ವರಿಸಿದ್ದರು. ಇವರು 6 ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದರು.

ʼಲವ್‌ ಮಾಕ್‌ಟೆಲ್‌ʼ ಮೂಲಕ ಜನಪ್ರಿಯ

2020ರಲ್ಲಿ ತೆರೆಕಂಡ ʼಲವ್‌ ಮಾಕ್‌ಟೆಲ್‌ʼ ಸಿನಿಮಾ ಮೂಲಕ ಈ ಜೋಡಿ ಜನಪ್ರಿಯವಾಗಿದೆ. ಡಾರ್ಲಿಂಗ್‌ ಕೃಷ್ಣ ನಿರ್ದೇಶನದ ಈ ಮೊದಲ ಸಿನಿಮಾಕ್ಕಾಗಿ ಮಿಲನಾ ಕೂಡ ಕೆಲಸ ಮಾಡಿದ್ದರು. ಡಾರ್ಲಿಂಗ್‌ ಕೃಷ್ಣ, ಮಿಲನಾ ಜೊತೆಗೆ ಅಮೃತ ಅಯ್ಯರ್‌, ಅಭಿಲಾಷ್‌, ರಚನಾ ಇಂದರ್‌ ಮತ್ತಿತರರು ನಟಿಸಿದ್ದರು. ಕೃಷ್ಣ ಅವರ ಆದಿ ಪಾತ್ರದ ಜೊತೆಗೆ ಮಿಲನಾ ಅವರ ನಿಧಿ ಪಾತ್ರ ಪ್ರೇಕ್ಷಕರ ಗಮನ ಸೆಳೆದಿತ್ತು.

ಈ ಸುದ್ದಿಯನ್ನೂ ಓದಿ: Sandalwood News: ತೆರೆ ಮೇಲೆ ಶೀಘ್ರದಲ್ಲಿಯೇ ʼಭಗೀರಥʼ ಪ್ರಯತ್ನ ಅನಾವರಣ; ಪ್ರಮೋಷನಲ್ ಸಾಂಗ್ ಮೂಲಕ ಪ್ರಚಾರ

ಇದೇ ಜೋಡಿ 2022ರಲ್ಲಿ ʼಲವ್‌ ಮಾಕ್‌ಟೇಲ್‌ 2ʼ ಚಿತ್ರಕ್ಕಾಗಿ ಮತ್ತೆ ಒಂದಾಗಿತ್ತು. ಮೊದಲ ಭಾಗದ ಕಥೆ ಇಲ್ಲಿ ಮುಂದುವರಿದಿತ್ತು. ಇದಕ್ಕೂ ಕೃಷ್ಣ ಆ್ಯಕ್ಷನ್‌ ಕಟ್‌ ಹೇಳಿ ನಾಯಕನಾಗಿ ನಟಿಸಿದ್ದರು. ಜೊತೆಗೆ ಮೊದಲ ಭಾಗದಲ್ಲಿದ್ದ ಬಹುತೇಕರು ಇಲ್ಲೂ ಕಾಣಿಸಿಕೊಂಡಿದ್ದರು. ಈ ಚಿತ್ರವೂ ಸೂಪರ್‌ ಹಿಟ್‌ ಆಗಿತ್ತು. ಕೃಷ್ಣ-ಮಿಲನಾ ಈ ಚಿತ್ರದ 3 ಭಾಗ ತೆರೆಗೆ ತರಲು ಸಿದ್ದತೆ ನಡೆಸುತ್ತಿದ್ದಾರೆ. ಈ ಬಗ್ಗೆ ವಿವರ ಇನ್ನಷ್ಟೇ ಹೊರ ಬರಬೇಕಿದೆ.