Friday, 13th December 2024

Mission: Impossible 8: ‘ಮಿಷನ್‌ ಇಂಪಾಸಿಬಲ್‌ 8’ ಟ್ರೈಲರ್‌ ಔಟ್‌; ಟಾಮ್ ಕ್ರೂಸ್ ಆ್ಯಕ್ಷನ್‌ಗೆ ಫ್ಯಾನ್ಸ್‌ ಫಿದಾ

Mission: Impossible 8

ಹೊಸದಿಲ್ಲಿ: ಹಾಲಿವುಡ್‌ ಸ್ಟಾರ್‌ ಟಾಮ್ ಕ್ರೂಸ್ (Tom Cruise) ನಟನೆಯ ಮಿಷನ್‌ ಇಂಪಾಸಿಬಲ್‌ ಸಿನಿಮಾಕ್ಕೆ ಜಾಗತಿಕವಾಗಿ ಬಹುದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಬಹು ನಿರೀಕ್ಷಿತ ಈ ಸಿನಿಮಾದ 8ನೇ ಭಾಗದ ಟ್ರೈಲರ್‌ ಇದೀಗ ರಿಲೀಸ್‌ ಆಗಿದೆ (Mission: Impossible 8). ಇದಕ್ಕೆ ʼಮಿಷನ್‌: ಇಂಪಾಸಿಬಲ್‌- ದಿ ಫೈನಲ್‌ ರಕೂನಿಂಗ್‌ʼ (Mission: Impossible – The Final Reckoning) ಎಂದು ಹೆಸರಿಡಲಾಗಿದ್ದು, ಜಾಗತಿಕ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

ಟ್ರೈಲರ್‌ನಲ್ಲಿ ಎಥಾನ್‌ ಹಂಟ್‌ನ ಸಾಹಸವನ್ನು ರೋಚಕವಾಗಿ ಕಟ್ಟಿಕೊಡಲಾಗಿದೆ. ಚಿತ್ರ ತಯಾರಕ ಪ್ಯಾರಾಮೌಂಟ್ ಪಿಕ್ಚರ್ಸ್ ಸಂಸ್ಥೆ ಟ್ರೈಲರ್‌ ಅನ್ನು ಯೂಟ್ಯೂಬ್‌ನ ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ 12 ಮಿಲಿಯನ್ (1.2 ಕೋಟಿ) ವ್ಯೂಸ್‌ ಪಡೆದಿದೆ. ಪ್ರಮುಖ ಪಾತ್ರ ಎಥಾನ್ ಹಂಟ್ (ಟಾಮ್‌ ಕ್ರೂಸ್)ನ ಕೊನೆಯ ಮಿಷನ್ ಅನ್ನು ಸೂಚಿಸಲು ಶೀರ್ಷಿಕೆಗೆ ʼಫೈನಲ್ʼ ಎಂಬ ಪದವನ್ನು ಸೇರಿಸಲಾಗಿದೆ.

ಕ್ರಿಸ್ಟೋಫರ್ ಮೆಕ್ಕ್ವೇರಿ ನಿರ್ದೇಶನದ ಈ ಚಿತ್ರದಲ್ಲಿ ಟಾಮ್ ಕ್ರೂಸ್ ಅಪ್ರತಿಮ ಐಎಂಎಫ್ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್‌ ದೃಶ್ಯಗಳಿಗೆ ಜನಪ್ರಿಯರಾಗಿರುವ ಕ್ರೂಸ್ ಮತ್ತೊಮ್ಮೆ ಅಪಾಯಕಾರಿ ಸ್ಟಂಟ್‌ಗಳನ್ನು ಪ್ರದರ್ಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಸೀರಿಸ್‌ಗೆ ಅರ್ಥಪೂರ್ಣವಾಗಿ ಕೊನೆ ಹಾಡಲು ಚಿತ್ರತಂಡ ಮುಂದಾಗಿದೆ. ಕಳೆದ ವರ್ಷ ತೆರೆಕಂಡ ʼಮಿಷನ್‌ ಇಂಪಾಸಿಬಲ್‌ 7ʼ (ʼಮಿಷನ್ ಇಂಪಾಸಿಬಲ್ ಡೆಡ್ ರಕೂನ್ ಪಾರ್ಟ್ 1ʼ) ಬಾಕ್ಸ್‌ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು.

ಸದ್ಯ ರಿಲೀಸ್‌ ಆಗಿರುವ ʼಮಿಷನ್‌: ಇಂಪಾಸಿಬಲ್‌- ದಿ ಫೈನಲ್‌ ರಕೂನಿಂಗ್‌ʼ ಟ್ರೈಲರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಟ್ರೈಲರ್‌ ನೋಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ ಹಲವರಿಗೆ ನಿರಾಸೆಯಾಗಿದೆ. 2022ರಲ್ಲಿಯೇ ತೆರೆಗೆ ಬರಬೇಕಿದ್ದ ಚಿತ್ರ ಹಲವು ಬಾರಿ ಮುಂದೂಡಿಕೆಯಾಗಿದೆ. ಇದೀಗ ಚಿತ್ರತಂಡ 2025ರ ಮೇ 23ರಂದು ತೆರೆಗೆ ತರುವ ಯೋಜನೆಯಲ್ಲಿದೆ.

ಬಿಗ್‌ ಬಜೆಟ್‌

ಟಾಪ್ ಕ್ರೂಸ್ ಜತೆಗೆ ಹ್ಯಾತ್ಲಿ ಆಟ್ವೆಲ್, ವಿಂಗ್ ರಹಾಮಸ್, ಸಿಮೋನ್ ಪೆಗ್, ರೆಬೆಕಾ ಫರ್ಗೂಸನ್ ಇನ್ನಿತರರು ನಟಿಸಿದ್ದ ʼಮಿಷನ್‌ ಇಂಪಾಸಿಬಲ್‌ 7ʼ ಅನ್ನು ಬರೋಬ್ಬರಿ 2,390 ಕೋಟಿ ರೂ. ಬಜೆಟ್‌ನಲ್ಲಿ ತಯಾರಿಸಲಾಗಿತ್ತು. ಆದರೆ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡುವಲ್ಲಿ ವಿಫಲವಾಗಿತ್ತು. ಅದಾಗ್ಯೂ ʼಮಿಷನ್‌ ಇಂಪಾಸಿಬಲ್‌ 8ʼ ಅನ್ನು ಅದ್ಧೂರಿಯಾಗಿಯೇ ನಿರ್ಮಿಸಲಾಗುತ್ತಿದೆ. ರಿಲೀಸ್‌ ಆಗಿರುವ ಆ್ಯಕ್ಷನ್‌-ಪ್ಯಾಕ್ಡ್ ಟ್ರೈಲರ್‌ ಟಾಮ್ ಕ್ರೂಸ್ ಸ್ಕೂಬಾ ಡೈವಿಂಗ್ ಮಾಡುವುದು, ಧ್ವಂಸಗೊಂಡ ಜಲಾಂತರ್ಗಾಮಿ ನೌಕೆಯನ್ನು ಅನ್ವೇಷಿಸುವುದು ಮುಂತಾದ ಸಾಹಸ ದೃಶ್ಯಗಳಿಂದ ಕೂಡಿದೆ. ಏಂಜೆಲಾ ಬ್ಯಾಸೆಟ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ಸಿಐಎ ನಿರ್ದೇಶಕಿಯಾಗಿ ಕಾಣಿಸಿಕೊಂಡಿದ್ದಾರೆ. ಶಕ್ತಿಶಾಲಿ ಕೃತಕ ಬುದ್ಧಿಮತ್ತೆ ಎಂಟಿಟಿಯ ವಿರುದ್ಧ ಹಂಟ್‌ ನಡೆಸುವ ಹೋರಾಟವನ್ನು ಈ ಚಿತ್ರ ಒಳಗೊಂಡಿದೆ. ಕಳೆದ ಸಿರೀಸ್‌ನಲ್ಲಿ ಕಂಡು ಬಂದ ಥ್ರಿಲ್ಲಿಂಗ್‌-ಆ್ಯಕ್ಷನ್‌ ಅಂಶಗಳು ಇಲ್ಲೂ ಮುಂದುವರಿಯುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಈ ಬಾರಿ ಗೆಲ್ಲಲ್ಲೇ ಬೇಕೆಂದು ಪಣ ತೊಟ್ಟಿರುವ ಚಿತ್ರತಂಡ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುವ ಕಥಾ ಹಂದರದೊಂದಿಗೆ ಬರಲಿದೆ.

ಇದನ್ನೂ ಓದಿ: Ram Gopal Varma: ಚಂದ್ರಬಾಬು ನಾಯ್ಡು ಅವರ ತಿರುಚಿದ ಫೊಟೋ ಪೋಸ್ಟ್; ರಾಮ್ ಗೋಪಾಲ್ ವರ್ಮಾ ವಿರುದ್ಧ‍ FIR