Wednesday, 11th December 2024

ನಟ ಮಿಥುನ್ ಚಕ್ರವರ್ತಿಗೆ “ವೈ ಪ್ಲಸ್” ಭದ್ರತೆ

ನವದೆಹಲಿ: ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡ ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಕೇಂದ್ರ ಸರ್ಕಾರ ಗಣ್ಯ ವ್ಯಕ್ತಿಗಳಿಗೆ ನೀಡುವ “ವೈ ಪ್ಲಸ್” ಭದ್ರತೆ ನೀಡಿರುವುದಾಗಿ ವರದಿಯಾಗಿದೆ.

ಪಶ್ಚಿಮಬಂಗಾಳದ ಚುನಾವಣೆ ಹಿನ್ನೆಲೆಯಲ್ಲಿ ನಟ ಮಿಥುನ್ ಗೆ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ ಎಫ್) ಭದ್ರತೆ ನೀಡಲಿದ್ದು, ಇದನ್ನು ಎಸ್ ಎಸ್ ಜಿ(ಸ್ಪೆಷಲ್ ಸೆಕ್ಯುರಿಟಿ ಗ್ರೂಪ್) ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರ ನಡೆಸುವ ಸಂದರ್ಭದಲ್ಲಿ ನಟ ಮಿಥುನ್ ಗೆ ವೈ ಪ್ಲಸ್ ಹಾಗೂ ಸಿಐಎಸ್ ಎಫ್ ಕಮಾಂಡೋ ಭದ್ರತೆ ನೀಡಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

294 ಸದಸ್ಯ ಬಲದ ಪಶ್ಚಿಮಬಂಗಾಳ ವಿಧಾನಸಭೆಗೆ ಮಾ.27ರಿಂದ ಏಪ್ರಿಲ್ 29ರವರೆಗೆ ಒಟ್ಟು ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 2ರಂದು ಎಲ್ಲಾ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.