Saturday, 12th October 2024

ಸಾಹಸ ಚಿತ್ರೀಕರಣಕ್ಕಾಗಿ ಹೊಸ ನಿಯಮ: ನವೆಂಬರ್ 1ರಿಂದ ಜಾರಿ

ಬೆಂಗಳೂರು : ಮಾಸ್ತಿ ಗುಡಿ ಚಿತ್ರೀಕರಣದ ವೇಳೆ ಖಳನಾಯಕರ ಸಾವು, ಇತ್ತೀಚಿನ ಲವ್ ಯು ರಚ್ಚು ಸಿನಿಮಾ ಚಿತ್ರೀಕರಣದ ವೇಳೆ ಓರ್ವ ಸಹಾಯಕ ಫೈಟರ್ ಸಾವಿನ ಪ್ರಕರಣದ ನಂತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎಚ್ಚೆತ್ತುಕೊಂಡಂತಿದೆ.

ನವೆಂಬರ್ 1ರಿಂದ ರಾಜ್ಯದಲ್ಲಿ ಸ್ಯಾಂಡಲ್ ವುಡ್ ಚಿತ್ರಗಳ ಸಾಹಸ ಚಿತ್ರೀಕರಣಕ್ಕಾಗಿ ಹೊಸ ನಿಯಮ ಜಾರಿ ಗೊಳಿಸಲಾಗಿದೆ.

ಈ ಕುರಿತಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಇತ್ತೀಚಿಗೆ ಚಲನಚಿತ್ರ ಚಿತ್ರೀಕರಣ ಸಂದರ್ಭದಲ್ಲಿ ಸಂಭವಿಸಿರುವ ದುರಂತದ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಮತ್ತು ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ, ತಂತ್ರಜ್ಞರ ಒಕ್ಕೂಟ, ಫೈಟರ್ ಅಸೋಸಿಯೇಷನ್ ಸೇರಿದಂತೆ ಇನ್ನಿತರ ಎಲ್ಲಾ ಕ್ರಾಫ್ಟ್ಸ್ ಗಳ ಸಮ್ಮುಖದಲ್ಲಿ ಸಭೆ ನಡೆಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರು ಕಳಿಸದಂತೆ ಕೆಳಕಂಡ ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸ ಬೇಕೆಂದು ತೀರ್ಮಾನಿಸಲಾಯಿತು ಎಂದು ತಿಳಿಸಿದೆ.

ಸಾಹಸ ದೃಶ್ಯಗಳ ಚಿತ್ರೀಕರಣದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು

  • ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಫೈಟರ್ಸ್ ಸೇರಿದಂತೆ ಎಲ್ಲಾ ವಿಭಾಗಗಳ ಕಾರ್ಮಿಕರಿಗೂ ಆಯಾ ಸಂಘಗಳು ಆಯಾ ಸದಸ್ಯರಿಗೆ ಇನ್ಸೂರೆನ್ಸ್ ಕಡ್ಡಾಯವಾಗಿರಬೇಕು.
  • ಇನ್ಸೂರೆನ್ಸ್ ಪಡೆದಿರುವ ಕಾರ್ಮಿಕರನ್ನು ನಿರ್ಮಾಪಕರು ಚಿತ್ರೀಕರಣದಲ್ಲಿ ಬಳಸಿಕೊಳ್ಳಬೇಕು.
  • ಸಾಹಸ ದೃಶ್ಯ ಮತ್ತು ಇನ್ನಿತರೆ ರಿಸ್ಕಿ ಶಾಟ್ಸ್ ಗಳನ್ನು ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ನಿರ್ಮಾಪಕರು ಚಿತ್ರೀಕರಣ ಸ್ಥಳದಲ್ಲಿ ಆಂಬ್ಯುಲೆನ್ಸ್, ಡಾಕ್ಟರ್, ನರ್ಸ್, ಪ್ರಥಮ ಚಿಕಿತ್ಸೆಯ ಸೌಲಭ್ಯ ಒದಗಿಸುವುದು.
  • ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತಹ ಎಲ್ಲರಿಗೂ ನಿರ್ಮಾಪಕರು ಗ್ರೂಪ್ ಇನ್ಸೂರೆನ್ಸ್ ಮಾಡಿಸುವುದು.
  • ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಫೈಟರ್ಸ್, ಇತರೆ ವಿಭಾಗಗಳ ಸದಸ್ಯರು ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುವುದಾಗಿ ಒಪ್ಪಿ ಸಹಿ ಮಾಡಿರುವ ಒಪ್ಪಂದದ ಪತ್ರ ಮಾಡಿಕೊಳ್ಳುವುದು.
  • ಯಾವುದೇ ಹೀರೋ ಮತ್ತು ಇತರೆ ಕಲಾವಿದರುಗಳಿಗೆ ಸಂಬಂಧ ಪಟ್ಟಂತೆ ಸಾಹಸ ದೃಶ್ಯಗಳು ಮತತ್ ಇತರೆ ರಿಸ್ಕ್ ಶಾಟ್ಸ್ ಗಳ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ನುರಿತ ಫೈಟ್ ಮಾಸ್ಟರ್ ಅನ್ನು ನೇಮಿಸಿ ಕೊಂಡು, ಅವರ ಮಾರ್ಗದರ್ಶನದಲ್ಲಿ ಚಿತ್ರೀಕರಿಸತಕ್ಕದ್ದು.
  • ಚಿತ್ರೀಕರಣ ಸ್ಥಳದಲ್ಲಿ ಯಾವುದೇ ಸಂಘದ ಕಾರ್ಮಿಕರಿಗೆ ತೊಂದರೆಯುಂಟಾದ ಪಕ್ಷದಲ್ಲಿ ಆಯಾ ಸಂಘದ ಮುಖ್ಯಸ್ಥರೇ ನೇರ ಹೊಣೆ.