Friday, 13th December 2024

ರಾಜಕೀಯಕ್ಕೆ ಪ್ರವೇಶಿಸುವ ಆಸಕ್ತಿ ಹೊಂದಿಲ್ಲ, ಒತ್ತಡ ಹೇರಬೇಡಿ: ರಜನೀಕಾಂತ್‌

ಚೆನ್ನೈ: ನಟ ರಜನೀಕಾಂತ್ ಅವರ ತೀರ್ಮಾನದಿಂದ ಬೇಸತ್ತಿರುವ ಅವರ ಅಭಿಮಾನಿಗಳು, ರಜಿನಿ ಮಕ್ಕಳ್ ಮಂಡ್ರಮ್ ಸದಸ್ಯರು ಕಳೆದ ಮೂರು ವಾರಗಳಿಂದ ರಜನೀಕಾಂತ್​ ರಾಜಕೀಯಕ್ಕೆ ಪ್ರವೇಶಿಸಲೇಬೇಕು ಎಂದು ಎಲ್ಲೆಡೆ ಹೋರಾಟ ನಡೆಸು ತ್ತಿದ್ದಾರೆ. ಈ ಕುರಿತು ಮತ್ತೆ ಟ್ವೀಟ್ ಮಾಡಿರುವ ರಜನೀಕಾಂತ್​, “ನಾನು ಮತ್ತೆ ರಾಜಕೀಯಕ್ಕೆ ಪ್ರವೇಶಿಸುವ ಆಸಕ್ತಿ ಹೊಂದಿಲ್ಲ. ದಯವಿಟ್ಟು ಅಭಿಮಾನಿಗಳು ಒತ್ತಡ ಹೇರಬೇಡಿ” ಎಂದು ಮನವಿ ಮಾಡಿದ್ದಾರೆ.

ನಟ ರಜನಿಕಾಂತ್​ ಡಿಸೆಂಬರ್​ 31 ರಂದು ತಾವು ತಮಿಳುನಾಡು ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಡುತ್ತೇನೆ, ಹೊಸ ಪಕ್ಷವೊಂದನ್ನು ಸ್ಥಾಪಿಸುತ್ತೇನೆ ಎಂದು ತಮ್ಮ ಅಭಿಮಾನಿಗಳಿಗೆ ಹಲವು ದಿನಗಳ ಹಿಂದೆಯೇ ಆಶ್ವಾಸನೆ ನೀಡಿದ್ದರು. ಆದರೆ, ಡಿಸೆಂಬರ್​ ಕೊನೆ ವಾರದಲ್ಲಿ ರಾಜಕೀಯಕ್ಕೆ ಧುಮುಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

“ಪ್ರತಿಭಟನೆಯಲ್ಲಿ ಭಾಗವಹಿಸದಿದ್ದಕ್ಕಾಗಿ ನನ್ನ ಅಭಿಮಾನಿಗಳು, ರಜಿನಿ ಮಕ್ಕಳ್ ಮಂಡ್ರಮ್ ಸದಸ್ಯರನ್ನು ನಾನು ಪ್ರಶಂಸಿಸು ತ್ತೇನೆ. ಕಳೆದ ತಿಂಗಳು ನಾನು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ವಿವರಿಸಿದರೂ ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಬಗ್ಗೆ ನನಗೆ ಬೇಸರ ಮತ್ತು ಚಿಂತೆ ಇದೆ” ಎಂದು ರಜನಿಕಾಂತ್ ಹೇಳಿದ್ದಾರೆ.

ರಾಜಕೀಯಕ್ಕೆ ಮತ್ತೆ ಪ್ರವೇಶಿಸಿ ಎಂದು ಕೇಳುವ ಮೂಲಕ ನನ್ನ ಅಭಿಮಾನಿ ಸಂಘದ ಸದಸ್ಯರು ನನಗೆ ನೋವುಂಟು ಮಾಡು ತ್ತಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸದಿರುವ ಕಾರಣಗಳನ್ನು ವಿವರವಾಗಿ ವಿವರಿಸಿದ್ದೇನೆ. ಯಾರೂ ಈ ರೀತಿ ಪ್ರತಿಭಟಿಸಬಾರದು.
ನಟ ರಜನೀಕಾಂತ್​ ರಾಜಕೀಯಕ್ಕೆ ಪ್ರವೇಶಿಸದ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ನೂರಾರು ಅಭಿ ಮಾನಿಗಳು ಭಾನುವಾರ ಚೆನ್ನೈನ ವಲ್ಲುವರ್ ಕೊಟ್ಟಂನಲ್ಲಿ ನೆರೆದಿದ್ದರು.

ಆದರೆ, ಇದರಿಂದ ರಜನಿಗೆ ಸಾಕಷ್ಟು ನೋವಾಗಿದೆ ಎಂದು ತಿಳಿದುಬಂದಿದೆ.