Friday, 13th December 2024

‘ಬೈಬಲ್’ ಪದ ಬಳಕೆ: ನಟಿ ಕರೀನಾ ಕಪೂರ್‌’ಗೆ ನೋಟಿಸ್

ಬಲ‍ಪುರ: ಗರ್ಭಧಾರಣೆಗೆ (ಪ್ರಗ್ನೆನ್ಸಿ) ಸಂಬಂಧಿಸಿ ಬರೆದ ಪುಸ್ತಕದ ಶೀರ್ಷಿಕೆಯಲ್ಲಿ ‘ಬೈಬಲ್’ ಪದ ಬಳಕೆ ಮಾಡಿದ ಸಂಬಂಧ ಮಧ್ಯಪ್ರದೇಶ ಹೈಕೋರ್ಟ್ ಬಾಲಿವುಡ್ ನಟಿ ಕರೀನಾ ಕಪೂರ್‌ ಅವರಿಗೆ ನೋಟಿಸ್ ನೀಡಿದೆ.

‘ಕರೀನಾ ಕಪೂರ್‌ ಪ್ರೆಗ್ನೆನ್ಸಿ ಬೈಬಲ್: ದಿ ಅಲ್ಟಿಮೇಟ್ ಮ್ಯಾನ್ಯುಯಲ್ ಫಾರ್ ಮಾಮ್ಸ್-ಟು-ಬಿ’ ಪುಸ್ತಕ ಬಿಡುಗಡೆಯಾಗಿದ್ದು, ಗರ್ಭಧಾರಣೆ ಸಂಬಂಧಿಸಿದ ಅನುಭವಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದರು.

ಪುಸ್ತಕದ ಶೀರ್ಷಿಕೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ವಕೀಲ ಕ್ರಿಸ್ಟೋಫರ್ ಆಂಟನಿ, ಶೀರ್ಷಿಕೆಯಿಂದ ‘ಬೈಬಲ್’ ಪದ ತೆಗೆದುಹಾಕುವಂತೆ ಮನವಿ ಮಾಡಿದ್ದರು. ಅಲ್ಲದೇ ಇದು ಕ್ರಿಶ್ಚಿಯನ್ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ತಿಳಿಸಿದ್ದರು.

ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ಜಿ.ಎಸ್. ಅಹ್ಲುವಾಲಿಯಾ ಅವರಿದ್ದ ಏಕಸದಸ್ಯ ಪೀಠ ನೋಟಿಸ್ ಜಾರಿ ಮಾಡಿದೆ.

ಕರೀನಾ ಕಪೂರ್ ಜತೆಗೆ ಸಹಲೇಖಕಿ ಅದಿತಿ ಶಾ ಭೀಮ್‌ಜ್ಞಾನಿ, ಅಮೆಜಾನ್ ಆನ್‌ಲೈನ್ ಶಾಪಿಂಗ್, ಪುಸ್ತಕ ಪ್ರಕಾಶಕರು, ರಾಜ್ಯ ಸರ್ಕಾರ, ಜಬಲ್ಪುರದ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಒಮ್ಟಿ ಪೊಲೀಸ್ ಠಾಣೆಯ ಉಸ್ತುವಾರಿಗೂ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

‘ಕ್ರಿಶ್ಚಿಯನ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನಟಿ ಮತ್ತು ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒಮ್ಟಿ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ ಪೊಲೀಸರು ತನಿಖಾ ವರದಿಯನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಕೆಳ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತ್ತು.