Friday, 13th December 2024

KL Rahul: ಬ್ಯಾಟಿಂಗ್‌ ವೈಫಲ್ಯದ ಹೊರತಾಗಿಯೂ ಸಿಹಿ ಸುದ್ದಿ ಹಂಚಿಕೊಂಡ ಕೆಎಲ್‌ ರಾಹುಲ್‌!

'Our beautiful blessing coming soon'-KL Rahul and Athiya Shetty announce pregnancy

ನವದೆಹಲಿ: ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ (KL Rahul) ಹಾಗೂ ಬಾಲಿವುಡ್‌ ನಟಿ ಅಥಿಯಾ ಶೆಟ್ಟಿ (Athiya Shetty) ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. 2025ಕ್ಕೆ ನಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ ಎಂದು ತಿಳಿಸುವ ಮೂಲಕ ನಾವಿಬ್ಬರೂ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದೇವೆಂದು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹೃದಯಪೂರ್ವಕ ಸಂದೇಶವನ್ನು ರವಾನಿಸಿದ್ದಾರೆ.

ಕನ್ನಡಿಗ ಕೆಎಲ್‌ ರಾಹುಲ್‌ ಹಾಗೂ ಅಥಿಯಾ ಶೆಟ್ಟಿ ಜೋಡಿ 2023ರ ಆರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಒಂದೂವರೆ ವರ್ಷದ ಬಳಿಕ ಇವರು ಮೊದಲನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸೋಶಿಯಲ್‌ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಮುಂದಿನ ವರ್ಷ ನಮ್ಮ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರ ಮಾಡಿಕೊಳ್ಳಲು ಉತ್ಸುಕರಾಗಿದ್ದೇವೆಂದು ತಿಳಿಸಿದ್ದಾರೆ. ಕ್ರಿಕೆಟಿಗರು, ಸಿನೆಮಾ ತಾರೆಯರು, ಸ್ನೇಹಿತರು ಸೇರಿದಂತೆ ಅಭಿಮಾನಿಗಳು ಈ ಜೋಡಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ವೃತ್ತಿ ಜೀವನದ ಕಠಿಣ ದಿನಗಳನ್ನು ಎದುರಿಸುತ್ತಿರುವ ರಾಹುಲ್‌

ಕೆಎಲ್‌ ರಾಹುಲ್‌ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಭಾರತ ಎ ಪರ ಅನಧಿಕೃತ ಟೆಸ್ಟ್‌ ಪಂದ್ಯಗಳನ್ನು ಆಡುತ್ತಿದ್ದಾರೆ. ಆದರೆ, ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ರಾಹುಲ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ. ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 4 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದ ಅವರು, ದ್ವಿತೀಯ ಇನಿಂಗ್ಸ್‌ನಲ್ಲಿ ಶುಕ್ರವಾರ 10 ರನ್‌ ಗಳಿಸಿ ವಿಚಿತ್ರವಾಗಿ ಕ್ಲೀನ್‌ ಬೌಲ್ಡ್‌ ಆಗಿದ್ದಾರೆ. ಆ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ.

ಮತ್ತೊಂದು ಕಡೆ ನವೆಂಬರ್‌ 22 ರಂದು ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ಆರಂಭವಾಗಲಿದೆ. ಇದರ ನಡುವೆ ಕೆಎಲ್‌ ರಾಹುಲ್‌ ಅವರ ಬ್ಯಾಟಿಂಗ್‌ ಫಾರ್ಮ್‌ ಬಿಸಿಸಿಐ ಆಯ್ಕೆದಾರರನ್ನು ಚಿಂತೆಗೀಡು ಮಾಡಿದೆ. ಅಲ್ಲದೆ ಮಾಜಿ ಆಟಗಾರರು ಕೂಡ ಕೆಎಲ್‌ ರಾಹುಲ್‌ ಅವರ ಟೆಸ್ಟ್‌ ತಂಡದಲ್ಲಿನ ಸ್ಥಾನದ ಬಗ್ಗೆ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ.

ಆರಂಭಿಕ ಪಂದ್ಯಕ್ಕೆ ರಾಹುಲ್‌ ಓಪನರ್‌

ವೈಯಕ್ತಿಕ ಕಾರಣಗಳಿಂದಾಗಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರು ಆರಂಭಿಕ ಎರಡು ಟೆಸ್ಟ್‌ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನವೆಂಬರ್‌ 22 ರಂದು ಪರ್ತ್‌ನಲ್ಲಿ ಆರಂಭವಾಗುವ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ಅವರ ಜೊತೆ ಇನಿಂಗ್ಸ್‌ ಆರಂಭಿಸಲು ಕೆಎಲ್‌ ರಾಹುಲ್‌ಗೆ ಅವಕಾಶ ಸಿಗಲಿದೆ. ಈ ಕಾರಣದಿಂದಲೇ ಅವರನ್ನು ಆಸ್ಟ್ರೇಲಿಯಾ ಎ ವಿರುದ್ಧದ ಪಂದ್ಯದಲ್ಲಿ ಆಡಿಸಲಾಗಿತ್ತು. ಆದರೆ, ಈ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಕನ್ನಡಿಗ ಬ್ಯಾಟಿಂಗ್‌ ವೈಫಲ್ಯ ಅನುಭವಿಸುವ ಮೂಲಕ ಬಿಸಿಸಿಐ ಆಯ್ಕೆದಾರರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: IND-A vs AUS-A: ವಿಚಿತ್ರವಾಗಿ ಕ್ಲೀನ್‌ ಬೌಲ್ಡ್‌ ಆದ ಕನ್ನಡಿಗ ಕೆಎಲ್‌ ರಾಹುಲ್‌! ವಿಡಿಯೊ ವೈರಲ್‌