Friday, 13th December 2024

Pranitha Subhash: ಎರಡನೇ ಮಗುವನ್ನು ಬರಮಾಡಿಕೊಂಡ ಪ್ರಣಿತಾ ಸುಭಾಷ್‌

Pranitha Subhash

ಬೆಂಗಳೂರು: 2010ರಲ್ಲಿ ದರ್ಶನ್‌ (Darshan) ಅಭಿನಯದ ‘ಪೊರ್ಕಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಬಹುಭಾಷಾ ನಟಿ ಪ್ರಣಿತಾ ಸುಭಾಷ್‌ (Pranitha Subhash) ಇಂದು (ಸೆಪ್ಟೆಂಬರ್‌ 5) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆ ಮೂಲಕ ಅವರು ಗೌರಿ ಹಬ್ಬದ ಮುನ್ನಾ ದಿನ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

2022ರಲ್ಲಿ ಪ್ರಣಿತಾ ಆರ್ನಾ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇತ್ತೀಚೆಗೆ ಆರ್ನಾಳ 2ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿತ್ತು.ʼʼತುಂಬಾ ಖುಷಿಯಾಗುತ್ತಿದೆ, ಪುಟ್ಟ ಮಗುವನ್ನು ನೋಡಿ ಮಗಳು ಆರ್ನಾ ಆಕಾಶದಲ್ಲಿ ತೇಲುತ್ತಿದ್ದಾಳೆ. ಆಕೆ ತಮ್ಮನನ್ನು ಬೇಬಿ ಎಂದು ಕರೆಯುತ್ತಿದ್ದಾಳೆʼʼ ಎಂದು ಪ್ರಣಿತಾ ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಪ್ರಣಿತಾ ಗ್ಲ್ಯಾಮರ್‌ ಆಗಿ ಬೇಬಿ ಬಂಟ್‌ ಫೋಟೊ ಶೂಟ್‌ ಮಾಡಿ ಗಮನ ಸೆಳೆದಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ನೆಚ್ಚಿನ ತಾರೆಯ ಫೋಟೊ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು. ಸದ್ಯ ಫ್ಯಾನ್ಸ್‌ ಮತ್ತು ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ʼʼರೌಂಡ್ 2… ಪ್ಯಾಂಟ್‌ ಇನ್ನು ಮುಂದೆ ಫಿಟ್ ಆಗೋದಿಲ್ಲʼʼ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಪ್ರಣಿತಾ ಎರಡನೇ ಬಾರಿ ಗರ್ಬಿಣಿಯಾಗಿರುವ ಸುದ್ದಿಯನ್ನು ಹಂಚಿಕೊಂಡಿದ್ದರು. ಜತೆಗೆ ಬೇಬಿ ಬಂಪ್ ಫೋಟೊ ಅಪ್‌ಲೋಡ್‌ ಮಾಡಿದ್ದರು. ಪ್ರಣಿತಾ 2021ರ ಮೇ ತಿಂಗಳಲ್ಲಿ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜು ಅವರನ್ನು ಮದುವೆಯಾಗಿದ್ದರು.

2010ರಲ್ಲಿ ದರ್ಶನ್‌ ಅಭಿನಯದ ‘ಪೊರ್ಕಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಪ್ರಣಿತಾ ಕಡಿಮೆ ಸಮಯದಲ್ಲೇ ಬಹುಭಾಷಾ ಕಲಾವಿದೆಯಾಗಿ ಮಿಂಚಿದ್ದಾರೆ. ಕನ್ನಡ ಜೊತೆಗೆ ತಮಿಳು, ತೆಲುಗು, ಹಿಂದಿ ಮತ್ತು ಮಲೆಯಾಳಂ ಸಿನಿಮಾಗಳಲ್ಲಿ ನಟಿಸಿ ಪಂಚಭಾಷಾ ಕಲಾವಿದೆ ಎನಿಸಿಕೊಂಡಿದ್ದಾರೆ. ಸ್ಟಾರ್ ನಟರಾದ ಶಿವರಾಜ್ ಕುಮಾರ್, ಗಣೇಶ್, ತೆಲುಗು ನಟ ಪವನ್ ಕಲ್ಯಾಣ್, ಸಿದ್ದಾರ್ಥ್ ಹಾಗೂ ತಮಿಳು ನಟ ಸೂರ್ಯ, ಕಾರ್ತಿ, ಬಾಲಿವುಡ್ ನಟ ಅಜಯ್ ದೇವಗನ್, ಮಲಯಾಳಂ ನಟ ದಿಲೀಪ್‌ ಜತೆ ನಟಿಸಿದ್ದಾರೆ. ಮಾತ್ರವಲ್ಲ ಹಲವು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಆ್ಯಕ್ಟೀವ್‌

2022ರಲ್ಲಿ ಆರ್ನಾ ಜನಿಸಿದಾಗ ಪ್ರಣಿತಾ ಕೊಂಚ ಸಮಯ ನಟನೆಯಿಂದ ಬ್ರೇಕ್‌ ಪಡೆದುಕೊಂಡಿದ್ದರು. ಅದಾಗ್ಯೂ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆ್ಯಕ್ಟೀವ್‌ ಆಗಿದ್ದರು. ಆಗಾಗ ಫೋಟೊಗಳನ್ನು ಹಂಚಿಕೊಂಡು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದರು.

Milana Nagaraj: ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್‌; ಖುಷಿ ಹಂಚಿಕೊಂಡ ಡಾರ್ಲಿಂಗ್‌ ಕೃಷ್ಣ

ಈ ವರ್ಷ ಕಂಬ್ಯಾಕ್‌

ವಿಶೇಷ ಎಂದರೆ ಪ್ರಣಿತಾ ಬೆಳ್ಳಿತೆರೆಗೆ ಈ ವರ್ಷಾರಂಭದಲ್ಲಿ ಕಂಬ್ಯಾಕ್‌ ಮಾಡಿದ್ದರು. ಮಾಲಿವುಡ್‌ನ ಜನಪ್ರಿಯ ನಾಯಕ ದಿಲೀಪ್‌ (Dileep) ಅಭಿನಯದ ʼತಂಕಮಣಿʼ (Thankamani) ಚಿತ್ರದಲ್ಲಿ ಪ್ರಣಿತಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ 2024ರ ಮಾರ್ಚ್‌ನಲ್ಲಿ ತೆರೆಕಂಡಿತ್ತು. ಮೇಯಲ್ಲಿ ರಿಷಿ ಜತೆ ಪ್ರಣಿತಾ ಮೊದಲ ಬಾರಿ ಅಭಿನಯಿಸಿದ ʼರಾಮನ ಅವತಾರʼ ಕನ್ನಡ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರಗಳಲ್ಲಿ ಪ್ರಣಿತಾ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.