Saturday, 14th December 2024

ನಿರ್ಮಾಪಕ ಮಣಿರತ್ನಂಗೆ ಕರೋನಾ ವೈರಸ್ ಸೋಂಕು ದೃಢ

ಚೆನ್ನೈ: ಚಲನಚಿತ್ರ ನಿರ್ಮಾಪಕ ಮಣಿರತ್ನಂಗೆ ಕರೋನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅನಾರೋಗ್ಯದ ಹಿನ್ನೆಲೆ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಣಿರತ್ನಂ ಆರೋಗ್ಯ ಸ್ಥಿತಿಯ ಬಗ್ಗೆ ಅವರ ಪತ್ನಿ ಹಾಗೂ ಚಿತ್ರನಟಿ ಸುಹಾಸಿನಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ಆಸ್ಪತ್ರೆಗೆ ದಾಖಲಾಗಿರುವ ಮಣಿರತ್ನಂ ತಮ್ಮ ಕನಸಿನ ಚಿತ್ರ ಪೊನ್ನಿಯಿನ್ ಸೆಲ್ವನ್‌ನಲ್ಲಿ ಬ್ಯುಸಿ ಆಗಿದ್ದರು. ಕಳೆದ ಜು.8ರಂದು ಪೊನ್ನಿಯಿನ್ ಸೆಲ್ವನ್ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ನಿರ್ದೇಶಕ ಮಣಿರತ್ನಂ, ಅದೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದರು.

ವೈದ್ಯಕೀಯ ಪರೀಕ್ಷೆಯ ಸಂದರ್ಭದಲ್ಲಿ ಮಣಿರತ್ನಂಗೆ ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಈ ಹಿನ್ನೆಲೆ ಚೆನ್ನೈನ ಅಪೋಲೋ ಆಸ್ಪತ್ರೆಗೆ ಅವರನ್ನು ದಾಖಲಿಸಲಾ ಗಿದೆ.

ತಮಿಳಿನ ಕಾದಂಬರಿ ಆಧಾರಿತ ಪೊನ್ನಿಯಿನ್ ಸೆಲ್ವನ್ ಚಿತ್ರ ನಿರ್ಮಾಣವು ಮಣಿರತ್ನಂ ಕನಸಿನ ಕೂಸಾಗಿತ್ತು. 10 ವರ್ಷಗಳ ನಂತರ ಕನಸನ್ನು ನನಸಾಗಿಸುವಲ್ಲಿ ಯಶಸ್ವಿ ಯಾಗಿದ್ದು, ಪೊನ್ನಿಯಿನ್ ಸೆಲ್ವನ್ ಎರಡು ಭಾಗಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಮೊದಲ ಭಾಗವು ಬಹು ಭಾಷೆಗಳಲ್ಲಿ ಸೆಪ್ಟೆಂಬರ್ 30ರಂದು ಅದ್ಧೂರಿಯಾಗಿ ಬಿಡುಗಡೆ ಯಾಗಲಿದೆ.

ನಟಿ ಐಶ್ವರ್ಯ ರೈ ಬಚ್ಚನ್, ಚಿಯಾನ್ ವಿಕ್ರಮ್, ತ್ರಿಶಾ, ಕಾರ್ತಿ ಮತ್ತು ಜಯಂ ರವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚೋಳ ರಾಜವಂಶವನ್ನು ಆಧರಿಸಿದ ಈ ಅವಧಿಯ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಶರತ್‌ಕುಮಾರ್, ಪ್ರಕಾಶ್ ರಾಜ್, ಕಿಶೋರ್, ಪಾರ್ತಿಬನ್, ಸೋಭಿತಾ ಧೂಳಿಪಾಲ ಮತ್ತು ಐಶ್ವರ್ಯ ಲಕ್ಷ್ಮಿ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.