Wednesday, 11th December 2024

Pushpa 2 Collection: ಆರೇ ದಿನದಲ್ಲಿ 1 ಸಾವಿರ ಕೋಟಿ ರೂ. ದಾಟಿದ ‘ಪುಷ್ಪ 2’ ಕಲೆಕ್ಷನ್‌; ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ ಅಲ್ಲು ಅರ್ಜುನ್‌ ಚಿತ್ರ

Pushpa 2 Collection

ಹೈದರಾಬಾದ್‌: ಮೊದಲ ದಿನ ಅತೀ ಹೆಚ್ಚು ಗಳಿಸಿದ ಭಾರತದ ಚಿತ್ರ, ಹಿಂದಿಯಲ್ಲಿ ಮೊದಲ ದಿನದ ರೆಕಾರ್ಡ್‌ ಬ್ರೇಕಿಂಗ್‌ ಕಲೆಕ್ಷನ್‌, ಅತೀ ವೇಗವಾಗಿ 500 ಕೋಟಿ ರೂ. ಕ್ಲಬ್‌ ಸೇರಿದ ಸಿನಿಮಾ ಹೀಗೆ ರಿಲೀಸ್‌ ಆದಾಗಿನಿಂದ ಸಾಲು ಸಾಲು ದಾಖಲೆ ಬರೆದ ʼಪುಷ್ಪ 2ʼ (Pushpa 2) ಚಿತ್ರ ಇದೀಗ ಮತ್ತೊಂದು ಹೆಗ್ಗಳಿಕೆ ಪಾತ್ರವಾಗಿದೆ. ಹೌದು, ಪ್ರತಿಯೊಬ್ಬ ಭಾರತೀಯ ಚಿತ್ರ ತಯಾರಕರ ಕನಸಾದ 1 ಸಾವಿರ ಕೋಟಿ ರೂ. ಕ್ಲಬ್‌ ಅನ್ನು ಕೇವಲ ಆರೇ ದಿನದಲ್ಲಿ ಅಲ್ಲು ಅರ್ಜುನ್‌-ರಶ್ಮಿಕಾ ಮಂದಣ್ಣ ಚಿತ್ರ ʼಪುಷ್ಪ 2ʼ ತಲುಪಿದೆ. ಆ ಮೂಲಕ ಹೊಸದೊಂದು ಇತಿಹಾಸ ಬರೆದಿದೆ (Pushpa 2 Collection).

ಡಿ. 5ರಂದು ತೆರೆಕಂಡ ʼಪುಷ್ಪ 2ʼ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 6ನೇ ದಿನವಾದ ಬುಧವಾರ (ಡಿ. 11) 1,002 ಕೋಟಿ ರೂ. ಗಳಿಸುವ ಮೂಲಕ ಮ್ಯಾಜಿಕ್‌ ನಂಬರ್‌ ಅನ್ನು ದಾಟಿ ಮುನ್ನುಗ್ಗುತ್ತಿದೆ. ಮೊದಲ ದಿನವೇ 294 ಕೋಟಿ ರೂ. ಬಾಚಿಕೊಂಡಿದ್ದ ಈ ಚಿತ್ರದ ಅಬ್ಬರ ಸದ್ಯಕ್ಕಂತೂ ತಗ್ಗುವ ಲಕ್ಷಣ ಕಾಣಿಸುತ್ತಿಲ್ಲ. ಚಿತ್ರ ನಿರ್ಮಾಣ ಮಾಡಿರುವ ಮೈತ್ರಿ ಮೂವಿ ಮೇಕರ್ಸ್‌ ಕಲೆಕ್ಷನ್‌ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದೆ.

ʼʼಭಾರತದ ದೊಡ್ಡ ಚಿತ್ರವಾದ ʼಪುಷ್ಪ 2ʼ ಬಾಕ್ಸ್‌ ಆಫೀಸ್‌ನಲ್ಲಿ ಇತಿಹಾಸವನ್ನು ತಿದ್ದಿ ಬರೆದಿದೆ. ʼಪುಷ್ಪ 2ʼ ಅತಿ ವೇಗವಾಗಿ 1 ಸಾವಿರ ಕೋಟಿ ರೂ. ಕ್ಲಬ್‌ ಸೇರಿದ ಚಿತ್ರ ಎನಿಸಿಕೊಂಡಿದೆ. ಕೇವಲ 6 ದಿನಗಳಲ್ಲಿ ಈ ಸಾಧನೆ ಮಾಡಿದೆ. ನಿರ್ದೇಶಕ ಸುಕುಮಾರ್‌ ಕಮರ್ಷಿಯಲ್‌ ಚಿತ್ರಕ್ಕೆ ಹೊಸ ವ್ಯಾಖ್ಯಾನ ನೀಡಿದ್ದಾರೆʼʼ ಎಂದು ಹೇಳಿದೆ.

ಚಿತ್ರ 900 ಕೋಟಿ ರೂ. ಮೈಲಿಗಲ್ಲನ್ನು 5ನೇ ದಿನ ದಾಟಿತ್ತು. ಇನ್ನು ಹಿಂದಿ ಅವತರಣಿಕೆಯ ಗಳಿಕೆಯೂ ದಾಖಲೆ ನಿರ್ಮಿಸಿದ್ದು, 6 ದಿನಗಳಲ್ಲಿ ಬರೋಬ್ಬರಿ 375 ಕೋಟಿ ರೂ. ತನ್ನದಾಗಿಸಿಕೊಂಡಿದೆ. ಆ ಮೂಲಕ ವೇಗವಾಗಿ ಇಷ್ಟು ಕಲೆಕ್ಷನ್‌ ಮಾಡಿದ ಚಿತ್ರ ಎನಿಸಿಕೊಂಡಿದೆ. ʼಪುಷ್ಪ 2ʼ ತೆಲುಗು ಜತೆಗೆ ಕನ್ನಡ, ಹಿಂದಿ, ತಮಿಳು, ಮಲಯಾಳಂ ಮತ್ತು ಬಂಗಾಳಿಯಲ್ಲಿ ತೆರೆಕಂಡಿದೆ.

ಮೂಲಗಳ ಪ್ರಕಾರ ಬುಧವಾರ ರಾತ್ರಿ 8 ಗಂಟೆ ವೇಳೆಗೆ ಸಿನಿಮಾ ಸುಮಾರು 36.96 ಕೋಟಿ ರೂ. ದೋಚಿಕೊಂಡಿದೆ. ಆ ಮೂಲಕ ಭಾರತದಲ್ಲಿನ ಗಳಿಕೆ 676.54 ಕೋಟಿ ರೂ.ಗೆ ತಲುಪಿದೆ.

1 ಸಾವಿರ ಕೋಟಿ ರೂ. ಕ್ಲಬ್‌ ಸೇರಿದ 8ನೇ ಚಿತ್ರ

ವಿಶೇಷ ಎಂದರೆ 1 ಸಾವಿರ ಕೋಟಿ ರೂ. ಕ್ಲಬ್‌ ಸೇರಿದ 8ನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ʼಪುಷ್ಪ 2ʼ ಪಾತ್ರವಾಗಿದೆ. ಈ ಹಿಂದೆ ʼದಂಗಲ್‌ʼ, ʼಬಾಹುಬಲಿ 2ʼ, ʼಆರ್‌ಆರ್‌ಆರ್‌ʼ, ʼಕೆಜಿಎಫ್‌ 2ʼ, ʼಕಲ್ಕಿ 2898 ಎಡಿʼ, ʼಜವಾನ್‌ʼ ಮತ್ತು ʼಪಠಾಣ್‌ʼ ಇದುವರೆಗೆ ಈ ಮೈಲಿಗಲ್ಲು ತಲುಪಿದ ಭಾರತೀಯ ಚಿತ್ರಗಳು. ಇನ್ನು ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ 1 ಸಾವಿರ ಕೋಟಿ ರೂ. ಕ್ಲಬ್‌ ಸೇರಿದ್ದಾರೆ. ಈ ಚಿತ್ರದಲ್ಲಿ ಫಹದ್‌ ಫಾಸಿಲ್‌, ತಾರಕ್‌ ಪೊನ್ನಪ್ಪ, ಜಗಪತಿ ಬಾಬು ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Pushpa 2 movie: ಪುಷ್ಪ-2 ಸಿನಿಮಾ ನೋಡುವ ಆತುರ; ರೈಲಿಗೆ ಸಿಲುಕಿ ಅಭಿಮಾನಿ ಸಾವು