Friday, 13th December 2024

Pushpa 2 Collection: ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸಿದ ಅಲ್ಲು ಅರ್ಜುನ್‌; 2024ರ ಅತಿ ಹೆಚ್ಚು ಗಳಿಸಿದ ಚಿತ್ರ ‘ಪುಷ್ಪ 2’

Pushpa 2 Collection

ಹೈದರಾಬಾದ್‌: ಭಾರತೀಯ ಬಾಕ್ಸ್‌ ಆಫೀಸ್‌ನಲ್ಲಿ ಟಾಲಿವುಡ್‌ ಚಿತ್ರ ‘ಪುಷ್ಪ 2’ (Pushpa 2) ದಾಖಲೆ ಬರೆದಿದೆ. ಡಿ. 5ರಂದು ವಿವಿಧ ಭಾಷೆಗಳಲ್ಲಿ ತೆರೆಕಂಡ ಅಲ್ಲು ಅರ್ಜುನ್‌-ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಇದೀಗ 2024ರ ಅತಿ ಹೆಚ್ಚು ಗಳಿಸಿದ ಚಿತ್ರ ಎನಿಸಿಕೊಂಡಿದೆ. ಆ ಮೂಲಕ ಸುಮಾರು 8 ದಿನಗಳಲ್ಲೇ ಈ ಮೈಲಿಗಲ್ಲು ತಲುಪಿದೆ. ಜಾಗತಿಕ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ 1 ಸಾವಿರ ಕೋಟಿ ರೂ. ದಾಟಿದ್ದು, ಪ್ರಭಾಸ್‌-ದೀಪಿಕಾ ಪಡುಕೋಣೆ-ಅಮಿತಾಭ್‌ ಬಚ್ಚನ್‌ ಚಿತ್ರ ʼಕಲ್ಕಿ 2898 ಎಡಿʼ ಗಳಿಕೆಯನ್ನು ಮೀರಿದೆ ಎಂದು ಮೂಲಗಳು ತಿಳಿಸಿವೆ (Pushpa 2 Collection).

ಸುಕುಮಾರ್‌ ನಿರ್ದೇಶನದ ʼಪುಷ್ಪ 2ʼ 7 ದಿನಗಳಲ್ಲಿ 1 ಸಾವಿರ ಕೋಟಿ ರೂ. ಕಲೆಕ್ಷನ್‌ ಮಾಡುವ ಮೂಲಕ ಅತಿ ವೇಗವಾಗಿ ಈ ಸಾಧನೆ ಮಾಡಿದ ಭಾರತದ ಮೊದಲ ಚಿತ್ರ ಎನಿಸಿಕೊಂಡಿದೆ. ವಾರ ಕಳೆದರೂ ಚಿತ್ರದ ಕಲೆಕ್ಷನ್‌ ತಗ್ಗುವ ಲಕ್ಷಣ ಕಾಣಿಸುತ್ತಿಲ್ಲ.

8 ದಿನವೂ ಬಂಗಾರದ ಬೆಳೆ

ಚಿತ್ರ ತೆರೆಕಂಡ 8ನೇ ದಿನವಾದ ಡಿ. 13ರಂದು ʼಪುಷ್ಪ 2ʼ ಭಾರತದಲ್ಲಿ ಬರೋಬ್ಬರಿ 37.9 ಕೋಟಿ ರೂ. ಬಾಚಿಕೊಂಡಿದೆ. ಉತ್ತರ ಭಾರತದವರನ್ನೂ ಆಕರ್ಷಿಸಿರುವ ಈ ಆ್ಯಕ್ಷನ್‌ ಡ್ರಾಮ ತೆಲುಗಿಗಿಂತ ಹಿಂದಿಯಲ್ಲೇ ಅತೀ ಹೆಚ್ಚು ಕಲೆಕ್ಷನ್‌ ಮಾಡುತ್ತಿದೆ. ಗುರುವಾರ ಹಿಂದಿಯಲ್ಲಿ 27.5 ಕೋಟಿ ಗಳಿಸಿದರೆ ತೆಲುಗಿನಿಂದ 8 ಕೋಟಿ ರೂ. ಹರಿದು ಬಂದಿದೆ. ಇನ್ನು ತಮಿಳು ವರ್ಷನ್‌ 1.8 ಕೋಟಿ ರೂ. ಮತ್ತು ಕನ್ನಡ ಹಾಗೂ ಮಲಯಾಳಂ ಅವತರಣಿಕೆ ತಲಾ 30 ಲಕ್ಷ ರೂ. ಬಾಚಿಕೊಂಡಿದೆ.

ಭಾರತದಲ್ಲಿ ʼಪುಷ್ಪ 2ʼ ಇದುವರೆಗೆ ಸುಮಾರು 726.25 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಈ ಪೈಕಿ 241.9 ಕೋಟಿ ರೂ. ತೆಲುಗಿನ ಕೊಡುಗೆಯಾದರೆ ಹಿಂದಿ 425.6 ಕೋಟಿ ರೂ. ಗಳಿಸಿದೆ. ಇನ್ನು ತಮಿಳು ವರ್ಷನ್‌ 41 ಕೋಟಿ ರೂ., ಕನ್ನಡ 5.35 ಕೋಟಿ ರೂ. ಮತ್ತು ಮಲಯಾಳಂ ಆವೃತ್ತಿ 12.4 ಕೋಟಿ ರೂ. ಗಳಿಸುವಲ್ಲಿ ಶಕ್ತವಾಗಿದೆ.

ʼಬಾಹುಬಲಿ 2ʼ ದಾಖಲೆ ಮೀರುತ್ತಾ?

ಇದೇ ವೇಗವನ್ನು ಕಾಯ್ದುಕೊಂಡರೆ ಬಾಕ್ಸ್‌ ಆಫೀಸ್‌ನಲ್ಲಿ ತೆಲುಗಿನ ʼಬಾಹುಬಲಿ 2ʼ ಚಿತ್ರದ ದಾಖಲೆಯನ್ನು ಮುರಿಯಲಿದೆ. ಅತೀ ಹೆಚ್ಚು ಗಳಿಸಿದ ಭಾರತೀಯ ಚಿತ್ರಗಳ ಪೈಕಿ ಆಮೀರ್‌ ಖಾನ್‌ ಅವರ ʼದಂಗಲ್‌ʼ ಮೊದಲ ಸ್ಥಾನದಲ್ಲಿದ್ದರೆ ಪ್ರಭಾಸ್‌ ಅವರ ʼಬಾಹುಬಲಿ 2ʼ ಎರಡನೇ ಸ್ಥಾನದಲ್ಲಿದೆ. ʼಬಾಹುಬಲಿ 2ʼಯ ಒಟ್ಟು ಕಲೆಕ್ಷನ್‌ 1,810.60 ಕೋಟಿ ರೂ. ಆಗಿದ್ದು, ʼಪುಷ್ಪ 2ʼ ಅದನ್ನು ಮೀರಿಸಲಿದೆ ಎನ್ನಲಾಗುತ್ತಿದೆ. ಮಾತ್ರವಲ್ಲ ʼದಂಗಲ್‌ʼ ಚಿತ್ರದ 2,500 ಕೋಟಿ ರೂ. ದಾಖಲೆಯನ್ನೂ ಮುರಿಯುವ ಸಾಧ್ಯತೆ ಇದೆ ಎಂದು ವಿ‍ಶ್ಲೇಷಿಸಲಾಗುತ್ತಿದೆ. ಈ ಚಿತ್ರದಲ್ಲಿ ಫಹದ್‌ ಫಾಸಿಲ್‌, ತಾರಕ್‌ ಪೊನ್ನಪ್ಪ, ಜಗಪತಿ ಬಾಬು ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Pushpa 2 Movie: ಹಿಂದಿ ಬಾಕ್ಸ್‌ ಆಫೀಸ್‌ನಲ್ಲೂ ವೈಲ್ಡ್‌ ಫೈರ್‌ನಂತೆ ಉರಿದ ‘ಪುಷ್ಪ 2’; ‘ಕೆಜಿಎಫ್‌ 2’ ದಾಖಲೆ ಉಡೀಸ್‌