Wednesday, 11th December 2024

Pushpa 2: ʼಪುಷ್ಪ 2ʼ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬಾಲಿವುಡ್‌ ನಟಿ; ಹೆಚ್ಚಾಯ್ತು ಅಲ್ಲು ಅರ್ಜುನ್‌ ಚಿತ್ರದ ಮೇಲಿನ ನಿರೀಕ್ಷೆ

ಮುಂಬೈ: ಡಿಸೆಂಬರ್‌ 6ಕ್ಕಾಗಿ ಅಲ್ಲು ಅರ್ಜುನ್‌ (Allu Arjun) ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದ್ದಾರೆ. ಯಾಕೆಂದರೆ ಅಂದು ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಚಿತ್ರ ʼಪುಷ್ಪ 2ʼ (Pushpa 2) ವಿಶ್ವಾದ್ಯಂತ ತೆರೆ ಕಾಣಲಿದೆ. 2021ರಲ್ಲಿ ತೆರೆಕಂಡ ʼಪುಷ್ಪʼ ಸಿನಿಮಾದ ಸೀಕ್ವೆಲ್‌ ಆಗಿರುವ ಈ ಚಿತ್ರ ಹುಟ್ಟು ಹಾಕಿರುವ ಹವಾ ಅಂತಹದ್ದು. ತೆರೆಮೇಲೆ ಮತ್ತೊಮ್ಮೆ ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿಯನ್ನು ನೋಡಲು ಅನೇಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಚಿತ್ರಕ್ಕೆ ಸುಕುಮಾರ್ ಆ್ಯಕ್ಷನ್‌ ಕಟ್‌ ಹೇಳಿದ್ದು, ಈಗಾಗಲೇ ಟೀಸರ್‌, ಪೋಸ್ಟರ್‌, ಹಾಡುಗಳ ಮೂಲಕ ಗಮನ ಸೆಳೆದಿದೆ. ಇದೀಗ ಹಬ್ಬಿರುವ ಮತ್ತೊಂದು ಸುದ್ದಿ ಕೇಳಿ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ʼಪುಷ್ಪ 2ʼ ಚಿತ್ರದಲ್ಲಿನ ಐಟಂ ಸಾಂಗ್‌ನಲ್ಲಿ ಬಾಲಿವುಡ್‌ನ ಟಾಪ್‌ ನಾಯಕಿ ಸೊಂಟ ಬಳುಕಿಸಲಿದ್ದಾರೆ ಎನ್ನಲಾಗಿದ್ದು, ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಅಷ್ಟಕ್ಕೂ ಯಾರು ಆ ನಟಿ?

ʼಪುಷ್ಪʼ ಸಿನಿಮಾದ ಗೆಲುವಿನಲ್ಲಿ ಅದರ ಸಂಗೀತವೂ ಪ್ರಧಾನ ಪಾತ್ರ ವಹಿಸಿದೆ. ಚಿತ್ರದ ಎಲ್ಲ ಹಾಡುಗಳೂ ಹಿಟ್‌ ಆಗಿವೆ. ದೇವಿ ಶ್ರೀ ಪ್ರಸಾದ್‌ ಅವರ ಸಂಗೀತದಲ್ಲಿ ಅಂತಹದ್ದೊಂದು ಮ್ಯಾಜಿಕ್‌ ಇತ್ತು. ಅದರಲ್ಲಿಯೂ ಸಮಂತಾ ಕಾಣಿಸಿಕೊಂಡಿದ್ದ ʼಊ ಅಂಟಾಮʼ ಐಟಂ ಹಾಡು ಇಂದಿಗೂ ಪಡ್ಡೆಗಳ ಹಾಟ್‌ ಫೆವರೇಟ್‌ ಎನಿಸಿಕೊಂಡಿದೆ. ಸಮಂತಾ ಈ ಹಾಡಿನಲ್ಲಿ ಮಾದಕವಾಗಿ ಕಾಣಿಸಿಕೊಂಡು ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ.

ʼಪುಷ್ಪ 2ʼ ಚಿತ್ರದಲ್ಲಿಯೂ ಇದೇ ರೀತಿಯ ವಿಶೇಷ ಹಾಡು ಇರಲಿದೆ. ಈ ಐಟಂ ಸಾಂಗ್‌ಗಾಗಿ ಬಾಲಿವುಡ್‌ನ ಖ್ಯಾತ ನಟಿಯನ್ನು ಚಿತ್ರತಂಡ ಸಂಪರ್ಕಿಸಿದೆ ಎನ್ನಲಾಗಿದೆ. ಇತ್ತೀಚೆಗೆ ರಿಲೀಸ್‌ ಆಗಿ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಬಾಲಿವುಡ್‌ನ ʼಸ್ತ್ರೀ 2ʼ ಸಿನಿಮಾದ ನಾಯಕಿ, ಟಾಪ್‌ ನಟಿಯರಲ್ಲಿ ಒಬ್ಬರಾದ ಶ್ರದ್ಧಾ ಕಪೂರ್‌ ʼಪುಷ್ಪ 2ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಹು ನಿರೀಕ್ಷಿತ ಈ ಐಟಂ ಸಾಂಗ್‌ಗೆ ಅವರು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಈ ಹಾಡಿಗಾಗಿ ಅನೇಕ ಟಾಪ್‌ ನಾಯಕಿಯರನ್ನು ಸಂಪರ್ಕಿಸಲಾಗಿತ್ತು. ಕೊನೆಗೆ ಶ್ರದ್ಧಾ ಕಪೂರ್‌ ಅವರನ್ನು ಅಂತಿಮಗೊಳಿಸಲಾಗಿದೆಯಂತೆ. ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬರಬೇಕಿದೆ. ಒಂದುವೇಳೆ ಶ್ರದ್ಧಾ ಕಾಣಿಸಿಕೊಂಡಿದ್ದೇ ಆದಲ್ಲಿ ಈ ಹಾಡು ಸಿನಿಮಾದ ಪ್ಲಸ್‌ ಪಾಯಿಂಟ್‌ ಆಗುವುದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಾರೆ ಫ್ಯಾನ್ಸ್‌. ತೆಲುಗಿನ ʼಸಾಹೋʼ ಚಿತ್ರದಲ್ಲಿ ಅಭಿನಯಿಸಿದ್ದ ಶ್ರದ್ಧಾ ಮತ್ತೊಮ್ಮೆ ಟಾಲಿವುಡ್‌ನತ್ತ ಬರುತ್ತಾರಾ ಎನ್ನುವುದು ಸದ್ಯದ ಕುತೂಹಲ.

ರಿಲೀಸ್‌ಗೂ ಮುನ್ನ 1000 ಕೋಟಿ ರೂ. ಗಳಿಸಿದ ʼಪುಷ್ಪ 2ʼ?

ʼಪುಷ್ಪ 2ʼ ಕ್ರೇಜ್‌ ಎಷ್ಟರಮಟ್ಟಿಗೆ ಇದೆ ಎಂದರೆ ಇದು ರಿಲೀಸ್‌ಗೆ ಮುನ್ನವೇ ದೊಡ್ಡ ಮೊತ್ತದ ಲಾಭ ಮಾಡಿದೆ ಎನ್ನಲಾಗುತ್ತಿದೆ. ಬಿಡುಗಡೆಗೆ ಸುಮಾರು 50 ದಿನ ಬಾಕಿ ಇರುವಾಗಲೇ 1,085 ಕೋಟಿ ರೂ. ಗಳಿಸಿದೆ ಎಂದು ವರದಿಯೊಂದು ತಿಳಿಸಿದೆ. ಥಿಯೇಟ್ರಿಕಲ್‌ ರೈಟ್ಸ್‌ನಿಂದ 640 ಕೋಟಿ ರೂ. ಹರಿದು ಬಂದರೆ, ಒಟಿಟಿ ಹಕ್ಕು ನೆಟ್‌ಫ್ಲಿಕ್ಸ್‌ಗೆ 275 ಕೋಟಿ ರೂ.ಗೆ ಮಾರಾಟವಾಗಿದೆ. ಮ್ಯೂಸಿಕ್‌ ರೈಟ್ಸ್‌ನಿಂದ 65 ಕೋಟಿ ರೂ., ಸ್ಯಾಟ್‌ಲೈಟ್‌ ಹಕ್ಕಿನಿಂದ 85 ಕೋಟಿ ರೂ. ಆದಾಯ ಬಂದಿದೆ ಎನ್ನಲಾಗುತ್ತಿದೆ. ಫಹದ್ ಫಾಸಿಲ್, ಡಾಲಿ ಧನಂಜಯ್, ಜಗಪತಿ ಬಾಬು, ಪ್ರಕಾಶ್ ರಾಜ್, ಸುನೀಲ್ ಮತ್ತು ಅನಸೂಯಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 

ಈ ಸುದ್ದಿಯನ್ನೂ ಓದಿ: Pushpa 2: ಅಲ್ಲು ಅರ್ಜುನ್‌-ರಶ್ಮಿಕಾ ಅಭಿನಯದ ʼಪುಷ್ಪ 2ʼ ಚಿತ್ರದ ಟ್ರೈಲರ್‌ ರಿಲೀಸ್‌ಗೆ ದಿನಗಣನೆ