Friday, 13th December 2024

Pushpa 2: ಇನ್ನಷ್ಟು ಹಾಟ್‌ ಆಗಲಿದೆ ‘ಪುಷ್ಪ 2’; ಐಟಂ ಸಾಂಗ್‌ಗೆ ಹೆಜ್ಜೆ ಹಾಕಲಿದ್ದಾರೆ ಇಬ್ಬರು ಬೆಡಗಿಯರು?

Pushpa 2

ಹೈದರಾಬಾದ್‌: ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಟಾಲಿವುಡ್‌ನ ‘ಪುಷ್ಪ 2’ (Pushpa 2) ಕೂಡ ಒಂದು. ಅಲ್ಲು ಅರ್ಜುನ್‌  (Allu Arjun) ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ’ (Pushpa) ಚಿತ್ರ ಸೀಕ್ವೆಲ್‌ ಆಗಿರುವ ಈ ಸಿನಿಮಾ ಸೆಟ್ಟೇರಿದಾಗಿನಿಂದಲೇ ಸಾಕಷ್ಟು ಸದ್ದು ಮಾಡುತ್ತಿದೆ. ಡಿ. 5ರಂದು ವಿಶ್ವಾದ್ಯಂತ ಪ್ಯಾನ್‌ ಇಂಡಿಯಾ ಚಿತ್ರವಾಗಿ ‘ಪುಷ್ಪ 2’ ತೆರೆಗೆ ಬರಲಿದ್ದು, ಈಗಾಗಲೇ ಭರ್ಜರಿ ಕ್ರೇಜ್‌ ಹುಟ್ಟು ಹಾಕಿದೆ. ರಿಲೀಸ್‌ ಆಗಿರುವ ಟೀಸರ್‌, ಹಾಡು ಮತ್ತು ಪೋಸ್ಟರ್‌ಗಳು ಕುತೂಹಲ ಕೆರಳಿಸಿದ್ದು, ಚಿತ್ರಕ್ಕಾಗಿ ಕಾಯುವಂತೆ ಮಾಡಿದೆ. ಈ ಮಧ್ಯೆ ಪ್ರೇಕ್ಷಕರ ಕಾತುರವನ್ನು ಇನ್ನಷ್ಟು ಹೆಚ್ಚಿಸುವ ಸುದ್ದಿ ಹರಿದಾಡುತ್ತಿದೆ. ಹೌದು, ʼಪುಷ್ಪ 2ʼ ಸಿನಿಮಾದ ಬಹು ನಿರೀಕ್ಷಿತ ಐಟಂ ಸಾಂಗ್‌ನಲ್ಲಿ ಒಬ್ಬರಲ್ಲ ಇಬ್ಬರು ಹಾಟ್‌ ಬೆಡಗಿಯರು ಸೊಂಟ ಬಳುಕಿಸಲಿದ್ದಾರಂತೆ. ಸದ್ಯ ಇಂತಹದ್ದೊಂದು ಸುದ್ದಿ ಹರಿದಾಡುತ್ತಿದ್ದು, ಪಡ್ಡೆಗಳು ಮನದಲ್ಲೇ ಮಂಡಿಗೆ ತಿನ್ನಲು ಶುರುವಿಟ್ಟುಕೊಂಡಿದ್ದಾರೆ.

ʼಪುಷ್ಪ 2ʼ ಬಿಡುಗಡೆಗೆ ಇನ್ನು ಸುಮಾರು 1 ತಿಂಗಳು ಕಾಲಾವಕಾಶವಿದೆ. ಆದರೆ ಈಗಾಗಲೇ ಅಲ್ಲು ಅರ್ಜುನ್‌ ಅಭಿಮಾನಿಗಳು ಸಿನಿಮಾ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಈ ದೀಪಾವಳಿ ಹಬ್ಬಕ್ಕೆ ಟ್ರೈಲರ್‌ ರಿಲೀಸ್‌ ಆಗಲಿದೆ ಎನ್ನುವ ಸುದ್ದಿ ಹಬ್ಬಿತ್ತು. ಇದಕ್ಕಾಗಿ ಕಾದು ಕುಳಿತವರಿಗೆ ಮತ್ತೊಂದು ರೋಮಾಂಚನಕಾರಿ ಸಂಗತಿಯೊಂದು ಹೊರ ಬಿದ್ದಿದೆ. ಅದುವೇ ಇಬ್ಬರು ನಾಯಕಿಯರ ಐಟಂ ಸಾಂಗ್‌.

ಯಾರು ಈ ಬೆಡಗಿಯರು?

2021ರಲ್ಲಿ ತೆರೆಕಂಡ ʼಪುಷ್ಪʼ ಸಿನಿಮಾದ ಗೆಲುವಿನಲ್ಲಿ ಅದರ ಸಂಗೀತವೂ ಪ್ರಧಾನ ಪಾತ್ರ ವಹಿಸಿತ್ತು. ಚಿತ್ರದ ಎಲ್ಲ ಹಾಡುಗಳೂ ಹಿಟ್‌ ಆಗಿವೆ. ದೇವಿಶ್ರೀ ಪ್ರಸಾದ್‌ ಅವರ ಸಂಗೀತದ ಮ್ಯಾಜಿಕ್‌ ಅಂತಹದ್ದೊಂದು ಮೋಡಿ ಮಾಡಿತ್ತು. ಅದರಲ್ಲಿಯೂ ಸಮಂತಾ ಕಾಣಿಸಿಕೊಂಡಿದ್ದ ʼಊ ಅಂಟಾಮʼ ಐಟಂ ಹಾಡು ಇಂದಿಗೂ ಪಡ್ಡೆಗಳ ಹಾಟ್‌ ಫೆವರೇಟ್‌ ಎನಿಸಿಕೊಂಡಿದೆ. ಸಮಂತಾ ಈ ಹಾಡಿನಲ್ಲಿ ಮಾದಕವಾಗಿ ಕಾಣಿಸಿಕೊಂಡು ಅಭಿಮಾನಿಗಳ ನಿದ್ದೆ ಕದ್ದಿದ್ದರು. ʼಪುಷ್ಪ 2ʼ ಸಿನಿಮಾದಲ್ಲಿಯೂ ಅಂತಹದ್ದೇ ಸ್ಪೆಷಲ್‌ ಹಾಡು ಇರಲಿದೆ ಎಂದು ಸಿನಿಮಾತಂಡ ಈ ಹಿಂದೆಯೇ ಘೋಷಿಸಿತ್ತು.

ಈ ಐಟಂ ಸಾಂಗ್‌ ಅನ್ನೂ ಬಹಳ ವಿಶೇಷವಾಗಿ, ಅದ್ಧೂರಿಯಾಗಿ ಕಟ್ಟಿಕೊಡಲು ಚಿತ್ರತಂಡ ಮುಂದಾಗಿದೆ. ಅದಕ್ಕಾಗಿ ಜನಪ್ರಿಯ ನಟಿಯರನ್ನು ಅಲ್ಲು ಅರ್ಜುನ್‌ ಅವರೊಂದಿಗೆ ಕುಣಿಯಲು ಆಯ್ಕೆ ಮಾಡಿದೆ. ವರದಿಯೊಂದರ ಪ್ರಕಾರ ಕನ್ನಡತಿ, ಸದ್ಯ ಟಾಲಿವುಡ್‌ನ ಕಣ್ಮಣಿಯಾಗಿರುವ, ತನ್ನ ಚೆಲುವು, ನಗುವಿನಿಂದಲೇ ಗಮನ ಸೆಳೆದಿರುವ ಶ್ರೀಲೀಲಾ ಈ ಸ್ಪೆಷಲ್‌ ಸಾಂಗ್‌ಗೆ ಆಯ್ಕೆಯಾಗಿದ್ದಾರಂತೆ. ಅತ್ಯುತ್ತಮ ಡ್ಯಾನ್ಸರ್‌ ಆಗಿರುವ ಶ್ರೀಲೀಲಾ ಈ ಹಾಡಿಗೆ ಸೂಕ್ತ ಎಂದು ಚಿತ್ರ ತಯಾರಕರು ದುಬಾರಿ ಸಂಭಾವನೆ ತೆತ್ತು ಅವರನ್ನು ಒಪ್ಪಿಸಿದ್ದಾರೆ. ಇವರ ಜತೆಗೆ ಸಮಂತಾ ರುತ್‌ ಪ್ರಭು ಕೂಡ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರ ಬರಬೇಕಿದೆ.

ಈ ಹಿಂದೆ ʼಪುಷ್ಪ 2ʼ ಸಿನಿಮಾದ ಐಟಂ ಸಾಂಗ್‌ಗಾಗಿ ಬಾಲಿವುಡ್‌ ಬೆಡಗಿಯರಾದ ಶ್ರದ್ಧಾ ಕಪೂರ್‌, ತೃಪ್ತಿ ಡಿಮ್ರಿ, ನೋರಾ ಫತೇಹಿ ಮತ್ತು ದಿಶಾ ಪಠಾಣಿ ಹೆಸರು ಕೇಳಿ ಬಂದಿತ್ತು. ಅದರಲ್ಲಿಯೂ ಶ್ರದ್ಧಾ ಕಪೂರ್‌ ಹೆಸರು ಅಂತಿಮವಾಗಿದೆ ಎನ್ನುವ ಸುದ್ದಿಯೂ ಹರಡಿತ್ತು. ಆದರೆ ಅವರು ದುಬಾರಿ ಸಂಭಾವನೆಗೆ ಬೇಡಿಕೆ ಇಟ್ಟ ಕಾರಣ ಅವರನ್ನು ಕೈಬಿಡಲಾಗಿದೆಯಂತೆ.

ಸುಕುಮಾರ್ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ʼಪುಷ್ಪ 2ʼ ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಐಟಂ ಸಾಂಗ್‌ ಬಾಕಿ ಇದ್ದು, ಶೀಘ್ರದಲ್ಲಿಯೇ ಶೂಟಿಂಗ್‌ ಮಾಡಲು ಯೋಜನೆ ರೂಪಿಸಲಾಗಿದೆ. ಈ ಚಿತ್ರದಲ್ಲಿ  ಫಹದ್ ಫಾಸಿಲ್, ಡಾಲಿ ಧನಂಜಯ್, ಜಗಪತಿ ಬಾಬು, ಪ್ರಕಾಶ್ ರಾಜ್, ಸುನೀಲ್ ಮತ್ತು ಅನಸೂಯಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 

ಈ ಸುದ್ದಿಯನ್ನೂ ಓದಿ: Pushpa 2: ಅಲ್ಲು ಅರ್ಜುನ್‌-ರಶ್ಮಿಕಾ ಅಭಿನಯದ ʼಪುಷ್ಪ 2ʼ ಚಿತ್ರದ ಟ್ರೈಲರ್‌ ರಿಲೀಸ್‌ಗೆ ದಿನಗಣನೆ