Wednesday, 9th October 2024

Rachita Ram: ಹುಟ್ಟುಹಬ್ಬದ ಮುನ್ನ ಅಭಿಮಾನಿಗಳಿಗೆ ಬಹುದೊಡ್ಡ ಶಾಕ್‌ ನೀಡಿದ ರಚಿತಾ ರಾಮ್‌

Rachita Ram

ಬೆಂಗಳೂರು: ಸ್ಯಾಂಡಲ್‌ವುಡ್‌ನ ಡಿಂಪಲ್‌ ಕ್ವೀನ್‌, ಅಭಿಮಾನಿಗಳ ಪ್ರೀತಿಯ ʼಬುಲ್‌ ಬುಲ್‌ʼ ರಚಿತಾ ರಾಮ್‌ (Rachita Ram) ಅವರಿಗೆ ನಾಳೆ (ಅಕ್ಟೋಬರ್‌ 3) ಜನ್ಮದಿನದ ಸಂಭ್ರಮ. ಆದರೆ ಇದೀಗ ಅವರು ಅಭಿಮಾನಿಗಳಿಗೆ ಬಹುದೊಡ್ಡ ಶಾಕ್‌ ನೀಡಿದ್ದಾರೆ. ತಮ್ಮ ನೆಚ್ಚಿನ ನಾಯಕಿಯ ಬರ್ತ್‌ ಡೇಯನ್ನು ಅದ್ಧೂರಿಯಾಗಿ ಆಚರಸಿಕೊಳ್ಳಬೇಕೆಂದುಕೊಂಡವರ ಆಸೆಗೆ ತಣ್ಣೀರೆರಚಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ವಿವರ.

ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ರಚಿತಾ ರಾಮ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ʼʼಎಲ್ಲರಿಗೂ ನಮಸ್ಕಾರ, ಎಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತಾ, ಈ ಬಾರಿ ಚಿತ್ರೀಕರಣ ಇರುವುದರಿಂದ ನನ್ನ ಹುಟ್ಟುಹಬ್ಬ (ಅಕ್ಟೋಬರ್‌ 3) ಆಚರಣೆಯನ್ನು ನಾನು ಮಾಡಿಕೊಳ್ಳುತ್ತಿಲ್ಲ ಎಂದು ಹೇಳಲು ಇಚ್ಛಿಸುತ್ತೇನೆ. ಎಲ್ಲರಿಗೂ ಕ್ಷಮೆ ಯಾಚಿಸುತ್ತಾ ಎಂದಿನಂತೆ ಪ್ರತಿ ಭಾನುವಾರ ಚಿತ್ರೀಕರಣ ಮುಗಿಸಿ ಬಂದ ನಂತರ ಸಿಗುತ್ತೇನೆ. ನಿಮ್ಮ ಪ್ರೀತಿಯ ರಚ್ಚುʼʼ ಎಂದು ರಚಿತಾ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದುಕೊಂಡಿದ್ದಾರೆ.

ದರ್ಶನ್‌ಗಾಗಿ ಈ ನಿರ್ದಾರ ತೆಗೆದುಕೊಂಡ್ರಾ?

ಸದ್ಯ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಯಾಕೆಂದರೆ ಮೊದಲಿನಿಂದಲೂ ದರ್ಶನ್‌ ಮತ್ತು ರಚಿತಾ ರಾಮ್‌ ಆತ್ಮೀಯರು. ಹಾಗೆ ನೋಡಿದರೆ ದರ್ಶನ್‌ ಅವರ ʼಬುಲ್‌ ಬುಲ್‌ʼ ಚಿತ್ರದ ಮೂಲಕವೇ ರಚಿತಾ ರಾಮ್‌ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟವರು. 2013ರಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್‌ ಅಫೀಸ್‌ನಲ್ಲಿ ಕಮಾಲ್‌ ಮಾಡಿತ್ತು. ಜತೆಗೆ ದರ್ಶನ್‌-ರಚಿತಾ ಕಾಂಬಿನೇಷನ್‌ ಅನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಅಂದಿನಿಂದ ಇವರಿಬ್ಬರು ಸ್ನೇಹಿತರಾಗಿ ಗುರುತಿಸಿಕೊಂಡಿದ್ದಾರೆ.

ಸದ್ಯ ದರ್ಶನ್‌ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ. ಇದೇ ಕಾರಣಕ್ಕೆ ರಚಿತಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ. ʼʼನಮ್ಮ ಡಿ ಬಾಸ್‌ಗೋಸ್ಕರ ರಚ್ಚು ಬರ್ತ್‌ ಡೇ ಆಚರಿಸಿಕೊಳ್ಳುತ್ತಿಲ್ಲ. ಅವರೂ ಡಿ ಬಾಸ್‌ನ ಅಭಿಮಾನಿʼʼ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ರಚಿತಾ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ದರ್ಶನ್‌ ಅವರನ್ನು ಭೇಟಿಯಾಗಿದ್ದರು.

ಈ ಸುದ್ದಿಯನ್ನೂ ಓದಿ: Zaid Khan: ಝೈದ್ ಖಾನ್‌ಗೆ ಜೋಡಿಯಾದ ರಚಿತಾ ರಾಮ್, ಮಲೈಕಾ; ‘ಕಲ್ಟ್’ ಚಿತ್ರಕ್ಕೆ ಚಾಲನೆ

ಹಿಟ್‌ ಜೋಡಿ

ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್‌ ಮತ್ತು ರಚಿತಾ ಹಿಟ್‌ ಜೋಡಿ ಎನಿಸಿಕೊಂಡಿದೆ. ಇವರಿಬ್ಬರು ಒಟ್ಟಿಗೆ 3 ಚಿತ್ರಗಳಲ್ಲಿ ನಟಿಸಿದ್ದಾರೆ. ʼಬುಲ್‌ ಬುಲ್‌ʼ ಜತೆಗೆ ʼಅಂಬರೀಷʼ ಮತ್ತು ʼಕ್ರಾಂತಿʼ ಚಿತ್ರದಲ್ಲಿ ಮೋಡಿ ಮಾಡಿದ್ದಾರೆ. ಅಲ್ಲದೆ ದರ್ಶನ್‌ ಅವರ ʼಜಗ್ಗು ದಾದʼ ಸಿನಿಮಾದಲ್ಲಿ ರಚಿತಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಚಿತಾ ರಾಮ್‌ ಸ್ಯಾಂಡಲ್‌ವುಡ್‌ನ ʼಶಬರಿ ಸರ್ಚಿಂಗ್‌ ಫಾರ್‌ ರಾವಣʼ, ʼಸಂಜು ವೆಡ್ಸ್‌ ಗೀತಾ 2ʼ, ʼಲವ್‌ ಮಿ ಆರ್‌ ಹೇಟ್‌ ಮಿʼ, ʼಕಲ್ಟ್‌ʼ ಮೊದಲಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ʼಕಲ್ಟ್‌ʼ ಚಿತ್ರಕ್ಕಾಗಿ ಅವರು ದಾಖಲೆಯ 1.5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದರ ಜತೆಗೆ ಅವರು ರಜನಿಕಾಂತ್‌, ಉಪೇಂದ್ರ ಅಭಿನಯದ ʼಕೂಲಿʼ ತಮಿಳು ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿಯೂ ಹಬ್ಬಿದೆ. ಆದರೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ.