Friday, 13th December 2024

ರಾಮೋಜಿ ಗ್ರೂಪ್ಸ್‌ ಸಂಸ್ಥಾಪಕ ರಾಮೋಜಿ ರಾವ್ ವಿಧಿವಶ

ಹೈದರಾಬಾದ್‌: ಮಾಧ್ಯಮ ಲೋಕದ ದಿಗ್ಗಜ, ರಾಮೋಜಿ ಗ್ರೂಪ್ಸ್‌ ಸಂಸ್ಥಾಪಕ ರಾಮೋಜಿ ರಾವ್ ಶನಿವಾರ ವಿಧಿವಶರಾಗಿದ್ದಾರೆ.

ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ ನ ಸ್ಟಾರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇದೇ ತಿಂಗಳ 5ರಂದು ಹೃದಯ ಸಂಬಂಧಿ ಸಮಸ್ಯೆಯಿಂದ ಉಸಿರಾಟಕ್ಕೆ ತೀವ್ರ ತೊಂದರೆಯಾಗಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೈದ್ಯಕೀಯ ಪರೀಕ್ಷೆಯ ನಂತರ ಹೃದಯ ಸ್ಟೆಂಟ್ ಹಾಕಲಾಯಿತು. ಬಳಿಕ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಅವರ ಸ್ಥಿತಿ ಗಂಭೀರವಾಗಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಮುಂಜಾನೆ ಸಾವನ್ನಪ್ಪಿದ್ದಾರೆ. ಸದ್ಯ ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇರುವ ಅವರ ಮನೆಗೆ ರವಾನೆ ಮಾಡಲಾಗಿದೆ.

ರಾಮೋಜಿ ರಾವ್ ಅವರು 1984 ರ ಸೂಪರ್‌ ಹಿಟ್‌ ರೊಮ್ಯಾಂಟಿಕ್ ಸಿನಿಮಾ ಶ್ರೀವಾರಿಕಿ ಪ್ರೇಮಲೇಖ ಚಿತ್ರದೊಂದಿಗೆ ಚಲನಚಿತ್ರ ನಿರ್ಮಾಪಕರಾಗಿ ಸಿನಿರಂಗಕ್ಕೆ ಕಾಲಿಟ್ಟರು. ಅವರು ಮಯೂರಿ, ಪ್ರತಿಭಟನಾ, ಮೌನ ಪೋರಾಟಂ, ಮನಸು ಮಮತಾ, ಚಿತ್ರಂ, ಮತ್ತು ನುವ್ವೆ ಕಾವಲಿ ಮುಂತಾದ ಹಲವಾರು ಶ್ರೇಷ್ಠ ಚಿತ್ರಗಳನ್ನು ನಿರ್ಮಿಸಿದರು.

ಭಾರತ ಸರ್ಕಾರವು ರಾಮೋಜಿ ರಾವ್ ಅವರಿಗೆ ಪತ್ರಿಕೋದ್ಯಮ, ಸಾಹಿತ್ಯ, ಸಿನಿಮಾ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅವರ ಅಮೂಲ್ಯ ಕೊಡುಗೆಗಳಿಗಾಗಿ 2016 ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣವನ್ನು ನೀಡಿ ಗೌರವಿಸಿದೆ.