Saturday, 14th December 2024

Rishab Shetty: ಟಾಲಿವುಡ್‌ನತ್ತ ಹೊರಟ ಡಿವೈನ್‌ ಸ್ಟಾರ್‌; ಬಹುನಿರೀಕ್ಷಿತ ಸೀಕ್ವೆಲ್‌ಗೆ ರಿಷಭ್‌ ಶೆಟ್ಟಿ ನಾಯಕ?

ಹೈದರಾಬಾದ್‌: ʼಕಾಂತಾರʼ (Kantara) ಚಿತ್ರದ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ, ವಿಮರ್ಶಕರು, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ, ಮನೋಜ್ಞ ಅಭಿನಯದ ಮೂಲಕ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಿಷಭ್‌ ಶೆಟ್ಟಿ (Rishab Shetty) ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಬದಲಾಗಿದ್ದಾರೆ. ಕನ್ನಡ ಜತೆಗೆ ಪರಭಾಷೆಯಲ್ಲಿಯೂ ಅವರಿಗೆ ಬೇಡಿಕೆ ಹೆಚ್ಚುತ್ತಿದೆ. ಸದ್ಯ ಅವರು ಬಹು ನಿರೀಕ್ಷಿತ ತೆಲುಗು ಚಿತ್ರವೊಂದರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ʼಕಾಂತಾರʼ ಚಿತ್ರದಂತೆ ತೆಲುಗಿನಲ್ಲಿ ಗಮನ ಸೆಳೆದ ಸೀಕ್ವೆಲ್‌ನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಹೌದು, ಈ ವರ್ಷಾರಂಭದಲ್ಲಿ ತೆರೆಕಂಡ ಟಾಲಿವುಡ್‌ ಜತೆಗೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಂಚಲನ ಮೂಡಿಸಿದ ಸಿನಿಮಾ ʼಹನುಮಾನ್‌ʼ. ಮಹೇಶ್‌ ಬಾಬು ಅವರ ʼಗುಂಟೂರು ಖಾರಂʼ ಚಿತ್ರದ ಜತೆಗೆ ಬಿಡುಗಡೆಯಾಗಿದ್ದರೂ ಬಾಕ್ಸ್‌ ಆಫೀಸ್‌ನಲ್ಲಿ 350 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿದೆ. ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ಪ್ರಶಾಂತ್‌ ವರ್ಮಾ ಆ್ಯಕ್ಷನ್‌ ಕಟ್‌ ಈ ಸಿನಿಮಾದ ಬಜೆಟ್‌ ಕೇವಲ 45 ಕೋಟಿ ರೂ. ತೇಜ ಸಜ್ಜಾ ನಟನೆಯ `ಹನುಮಾನ್’ ಫ್ಯಾಂಟಸಿ ಸಿನಿಮಾ ನಾಯಕನಿಗೆ ಹನುಮಂತ ನೆರವಾಗಿ ಹಳ್ಳಿಯನ್ನು ದುಷ್ಟರಿಂದ ರಕ್ಷಿಸುವ ಕಥೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ಅಮೃತಾ ಅಯ್ಯರ್, ವರಲಕ್ಷ್ಮೀ ಶರತ್‌ಕುಮಾರ್ ಮತ್ತು ವಿನಯ್ ರೈ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಈ ಚಿತ್ರದ ಸೀಕ್ವೆಲ್‌ಗೆ ಸಿದ್ದತೆ ನಡೆಯುತ್ತಿದೆ.

ʼಜೈ ಹನುಮಾನ್‌ʼ ಚಿತ್ರದಲ್ಲಿ ನಟಿಸುತ್ತಾರಾ ಡಿವೈನ್‌ ಸ್ಟಾರ್‌?

ಸದ್ಯ ಈ ಚಿತ್ರದ ಸೀಕ್ವೆಲ್‌ ಘೋಷಣೆಯಾಗಿದೆ. ಇದಕ್ಕೆ ʼಜೈ ಹನುಮಾನ್‌ʼ ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ರಿಷಭ್‌ ಶೆಟ್ಟಿ ನಟಿಸಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಿಸಿಲ್ಲ. ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಯಾರೆಲ್ಲ ಅಭಿನಯಿಸಲಿದ್ದಾರೆ ಎನ್ನುವ ವಿವರವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಪ್ರಶಾಂತ್‌ ವರ್ಮಾ ಘೋಷಿಸಿದ ಬಳಿಕ ಈ ಸುದ್ದಿ ಹರಿದಾಡುತ್ತಿದೆ. ಈ ಸಿನಿಮಾದಲ್ಲಿ ಬಾಲಿವುಡ್‌ ಕಲಾವಿದರೂ ಅಭಿನಯಿಸುವ ಸಾಧ್ಯತೆಯೂ ಇದೆ. ಶೀಘ್ರದಲ್ಲೇ ಚಿತ್ರತಂಡ ತಾರಾಗಣವನ್ನು ಘೋಷಿಸಲಿದೆ.

ʼಕಾಂತಾರʼ-ʼಹನುಮಾನ್‌ʼ ಸಿನಿಮಾಕ್ಕಿದೆ ಹೋಲಿಕೆ

ವಿಶೇಷ ಎಂದರೆ ಕನ್ನಡದ ʼಕಾಂತಾರʼಕ್ಕೂ ತೆಲುಗಿನ ʼಹನುಮಾನ್‌ʼ ಚಿತ್ರಕ್ಕೂ ಸಾಕಷ್ಟು ಸಾಮ್ಯತೆ ಇದೆ. ಎರಡೂ ಚಿತ್ರಗಳನ್ನು ಪ್ಯಾನ್‌ ಇಂಡಿಯಾ ಪ್ರೇಕ್ಷಕರು ಎರಡೂ ಕೈಗಳನ್ನು ಚಾಚಿ ಸ್ವಾಗತಿಸಿದ್ದಾರೆ. ಮೊದಲೇ ಹೇಳಿದಂತೆ ನಮ್ಮ ಮಣ್ಣಿನ ಸೊಗಡನ್ನು ಸಾರುವ ಈ ಸಿನಿಮಾಗಳು ಕಡಿಮೆ ಬಜೆಟ್‌ನಲ್ಲಿ ತಯಾರಾಗಿ ಬಾಕ್ಸ್‌ ಆಫೀಸ್‌ನಲ್ಲಿ ಹಲವು ಪಟ್ಟು ಲಾಭ ಗಳಿಸಿವೆ. ಕಮರ್ಷಿಯಲ್‌ ಸಿನಿಮಾಗಳ ಸಿದ್ಧ ಸೂತ್ರಗಳನ್ನು ಮೀರಿ ಕಥೆಯ ಬಲದಿಂದಲೇ ಗಮನ ಸೆಳೆದಿವೆ. ಜತೆಗೆ ಈ ಚಿತ್ರದ ಎರಡನೇ ಭಾಗ ತಯಾರಾಗುತ್ತಿದೆ. ʼಕಾಂತಾರ – 2ʼ ಪ್ರೀಕ್ವೆಲ್‌ ಆಗಿದ್ದರೆ, ʼಜೈ ಹನುಮಾನ್‌ʼ ಸಿನಿಮಾ ʼಹನುಮಾನ್‌ʼ ಚಿತ್ರದ ಕಥೆಯ ಮುಂದುವರಿದ ಭಾಗ. ಒಟ್ಟಿನಲ್ಲಿ ಇವು ಭಾಷೆಯ ಹಂಗನ್ನೂ ಮೀರಿ ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಚಿತ್ರ ಸೆಟ್ಟೇರಿದಾಗಿನಿಂದಲೂ ನಿರೀಕ್ಷೆ ಹುಟ್ಟಿಸಿದೆ.

ಈ ಸುದ್ದಿಯನ್ನೂ ಓದಿ: Mahakaali Movie: ಭಾರತದ ಮೊದಲ ಮಹಿಳಾ ಸೂಪರ್ ಹೀರೋ ‘ಮಹಾಕಾಳಿ’ ಕಥೆ ಹೇಳಲಿದ್ದಾರೆ ‘ಹನುಮಾನ್’ ಸಿನಿಮಾ ಸಾರಥಿ