Wednesday, 9th October 2024

Rukmini Vasanth: ರುಕ್ಮಿಣಿ ವಸಂತ್‌ಗೆ ಖುಲಾಯಿಸಿದ ಅದೃಷ್ಟ; ಪ್ರಶಾಂತ್‌ ನೀಲ್‌-ಜೂನಿಯರ್‌ ಎನ್‌ಟಿಆರ್‌ ಕಾಂಬಿನೇಷನ್‌ ಚಿತ್ರಕ್ಕೆ ನಾಯಕಿ?

Rukmini Vasanth

ಹೈದರಾಬಾದ್‌: ಇತ್ತೀಚಿನ ದಿನಗಳಲ್ಲಿ ಪರಭಾಷೆಯಲ್ಲಿ ಮಿಂಚುತ್ತಿರುವ ಕನ್ನಡಿಗರ ಸಂಖ್ಯೆ ಹೆಚ್ಚಾಗುತ್ತಿದೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಶ್ರದ್ಧಾ ಶ್ರೀನಾಥ್‌, ಆಶಿಕಾ ರಂಗನಾಥ್‌ ಬಳಿಕ ಇದೀಗ ಮತ್ತೊಮ್ಮ ಕನ್ನಡದ ಪ್ರತಿಭೆ ರುಕ್ಮಿಣಿ ವಸಂತ್‌ (Rukmini Vasanth) ತಮಿಳು, ತೆಲುಗಿನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈಗಾಗಲೇ ತಮಿಳು ಚಿತ್ರದಲ್ಲಿ ನಟಿಸುತ್ತಿರುವ ರುಕ್ಮಿಣಿ ಅವರನ್ನು ಅರಸಿಕೊಂಡು ಬಹುದೊಡ್ಡ ಅವಕಾಶವೊಂಡು ಟಾಲಿವುಡ್‌ನಿಂದ ಬಂದಿದೆ. ಸೂಪರ್‌ ಸ್ಟಾರ್‌ ಜೂನಿಯರ್‌ ಎನ್‌ಟಿಆರ್‌ (Jr NTR) ಚಿತ್ರಕ್ಕೆ ರುಕ್ಮಿಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಸದ್ಯ ʼದೇವರ: ಪಾರ್ಟ್‌ 1ʼ ಚಿತ್ರದ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಜೂನಿಯರ್‌ ಎನ್‌ಟಿಆರ್‌ ಅವರ ಮುಂದಿನ ಚಿತ್ರದ ತಯಾರಿ ನಡೆಯುತ್ತಿದೆ. ತಾತ್ಕಾಲಿಕವಾಗಿ ಇದಕ್ಕೆ ʼಎನ್‌ಟಿಆರ್‌ 31ʼ ಎಂದು ಹೆಸರಿಡಲಾಗಿದೆ. ಈ ತಿಂಗಳಿನಿಂದಲೇ ಚಿತ್ರೀಕರಣ ಆರಂಭವಾಗಲಿದೆ. ಎನ್‌ಟಿಆರ್‌ ಆರ್ಟ್ಸ್‌ ಮತ್ತು ಮೈತ್ರಿ ಮೂವಿ ಮೇಕರ್ಸ್‌ ಬ್ಯಾನರ್‌ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ.

ನಿರ್ದೇಶಕ ಯಾರು ಗೊತ್ತೆ?

ಇನ್ನೊಂದು ವಿಶೇಷ ಎಂದರೆ ನಿರ್ದೇಶಕರ ಮೂಲಕವೇ ಈ ಚಿತ್ರ ಈಗಾಗಲೇ ನಿರೀಕ್ಷೆ ಹುಟ್ಟು ಹಾಕಿದೆ. ಅವರೇ ಸ್ಟಾಂಡಲ್‌ವುಡ್‌ ಮಾಂತ್ರಿಕ, ʼಕೆಜಿಎಫ್‌ʼ ಸರಣಿ ಚಿತ್ರಗಳ ಮೂಲಕ ದೇಶದಲ್ಲೇ ಸಂಚಲನ ಸೃಷ್ಟಿಸಿದ ಪ್ರಶಾಂತ್‌ ನೀಲ್‌. ಹೌದು, ʼಎನ್‌ಟಿಆರ್‌ 31ʼ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಪ್ರಶಾಂತ್‌ ನೀಲ್‌ ನಾಯಕಿಯನ್ನಾಗಿ ಕನ್ನಡ ಹುಡುಗಿಗೆ ಮಣೆ ಹಾಕಿದ್ದಾರೆ ಎನ್ನಲಾಗಿದೆ. ಭರಪೂರ ಆ್ಯಕ್ಷನ್‌ ಹೊಂದಿರುವ ಈ ಚಿತ್ರದಲ್ಲಿ ನಾಯಕಿ ಪಾತ್ರಕ್ಕೂ ಸಾಕಷ್ಟು ಮಹತ್ವವಿದೆ. ರುಕ್ಮಿಣಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದೆ. ʼಕೆಜಿಎಫ್‌ʼ ಮೂಲಕ ಗಮನ ಸೆಳೆದ, ಪ್ರಶಾಂತ್‌ ನೀಲ್‌ ಅವರ ನೆಚ್ಚಿನ ರವಿ ಬಸ್ರೂರು ಸಂಗೀತ ನೀಡಲಿದ್ದು, ಚಿತ್ರ 2026ರಲ್ಲಿ ತೆರೆಗೆ ಬರಲಿದೆ.

ʼಸಪ್ತ ಸಾಗರದಾಚೆ ಎಲ್ಲೋʼ ಚಿತ್ರದ ಮೂಲಕ ಮೋಡಿ

ಕಳೆದ ವರ್ಷ ಬಿಡುಗಡೆಯಾದ ರಕ್ಷಿತ್‌ ಶೆಟ್ಟಿ ನಟನೆಯ, ಹೇಮಂತ ರಾವ್‌ ನಿರ್ದೇಶನದ ʼಸಪ್ತ ಸಾಗರದಾಚೆ ಎಲ್ಲೋʼ ಸೈಡ್‌ ಎ ಮತ್ತು ಸೈಡ್‌ ಬಿ ಪಾತ್ರದ ಮೂಲಕ ರುಕ್ಮಿಣಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಡಿಗ್ಲಾಮರ್‌ ರೋಲ್‌ನಲ್ಲಿ ಪಕ್ಮನೆ ಹುಡುಗಿಯಂತೆ ಕಾಣಿಸಿಕೊಂಡು ಪ್ರಿಯಾ ಪಾತ್ರದಲ್ಲಿ ಜೀವಿಸಿದ್ದಾರೆ. ಭಗ್ನ ಪ್ರೇಮಿಯಾಗಿ ಕಣ್ಣಿನಲ್ಲೇ, ಭಾವನೆಯಲ್ಲೇ ಸಹಜಾಭಿನಯ ನೀಡಿ ಕಾಡಿದ್ದಾರೆ. ಈ ಪಾತ್ರಕ್ಕಾಗಿ ಫಿಲ್ಮ್‌ಫೇರ್‌, ಸೈಮಾ, ಐಫಾ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಮುಡುಗೇರಿಸಿಕೊಂಡಿದ್ದಾರೆ.

ಸದ್ಯ ರುಕ್ಮಿಣಿ ಕನ್ನಡದ ಬಹು ನಿರೀಕ್ಷಿತ ಶ್ರೀಮುರಳಿ ಅಭಿನಯದ ʼಬಘೀರʼ, ಡಾ. ಶಿವರಾಜ್‌ ಕುಮಾರ್‌ ನಟನೆಯ ʼಭೈರತಿ ರಣಗಲ್‌ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜತೆಗೆ ತಮಿಳಿನಲ್ಲಿ ವಿಜಯ್‌ ಸೇತುಪತಿ ಜತೆಗೆ ʼಏಸ್‌ʼ, ಶಿವ ಕಾರ್ತೀಯನ್‌ ಮತ್ತು ಎ.ಆರ್‌.ಮುರುಗದಾಸ್‌ ಕಾಂಬಿನೇಷನ್‌ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ ಟಾಲಿವುಡ್‌ನಲ್ಲಿ ರಾಮ್‌ ಪೋತಿನೇನಿ, ವಿಜಯ್‌ ದೇವರಕೊಂಡ ಸಿನಿಮಾಕ್ಕೂ ಆಯ್ಕೆಯಾಗಿದ್ದಾರೆ ಎನ್ನುಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Devara Box Office Collection: 3 ದಿನಗಳಲ್ಲಿ 250 ಕೋಟಿ ರೂ. ದಾಟಿದ ʼದೇವರʼ ಕಲೆಕ್ಷನ್‌; ಗೆಲುವಿನ ನಗೆ ಬೀರಿದ ಜೂನಿಯರ್‌ ಎನ್‌ಟಿಆರ್‌