Wednesday, 11th December 2024

Rukmini Vasanth: ಸ್ಯಾಂಡಲ್‌ವುಡ್‌, ಟಾಲಿವುಡ್‌ ಬಳಿಕ ಕಾಲಿವುಡ್‌ನಲ್ಲಿ ಮಿಂಚಲು ರುಕ್ಮಿಣಿ ವಸಂತ್‌ ಸಜ್ಜು; ‘ಏಸ್‌’ ಚಿತ್ರದ ಟೀಸರ್‌ ಔಟ್‌

Rukmini Vasanth

ಚೆನ್ನೈ: 2023ರಲ್ಲಿ ತೆರೆಕಂಡ ಸ್ಯಾಂಡಲ್‌ವುಡ್‌ ನಿರ್ದೇಶಕ ಹೇಮಂತ್‌ ರಾವ್‌ ಆ್ಯಕ್ಷನ್‌ ಕಟ್‌ ಹೇಳಿದ, ರಕ್ಷಿತ್‌ ಶೆಟ್ಟಿ ನಟನೆಯ ‘ಸಪ್ತ ಸಾಗದಾಚೆ ಎಲ್ಲೋ ಸೈಡ್‌ ಎ’, ‘ಸೈಡ್‌ ಬಿ’ ಚಿತ್ರದ ಮೂಲಕ ಗಮನ ಸೆಳೆದವರು ರುಕ್ಮಿಣಿ ವಸಂತ್‌ (Rukmini Vasant). ಮುಗ್ಧ ಯುವತಿ, ಭಗ್ನ ಪ್ರೇಮಿಯ ಪಾತ್ರದಲ್ಲಿ ಕಾಣಿಸಿಕೊಂಡು, ಮನೋಜ್ಞ ಅಭಿನಯದ ಮೂಲಕವೇ ಸಿನಿ ರಸಿಕರ ಮನ ಗೆದ್ದ ಅವರು ಪರಭಾಷಿಕರನ್ನೂ ಸೆಳೆದಿದ್ದಾರೆ. ಇದೀಗ ಸ್ಯಾಂಡಲವುಡ್‌ ಜತೆಗೆ ಟಾಲಿವುಡ್‌, ಕಾಲಿವುಡ್‌ ಚಿತ್ರಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಡಿ. 10ರಂದು ರುಕ್ಮಿಣಿ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಮುಂಬರುವ ತಮಿಳು ಚಿತ್ರ ʼಏಸ್‌ʼ (ACE)ನ ಟೀಸರ್‌ ರಿಲೀಸ್‌ ಆಗಿದೆ. ತಮಿಳಿನ ಸೂಪರ್‌ ಸ್ಟಾರ್‌ ವಿಜಯ್‌ ಸೇತುಪತಿ (Vijay Sethupathi)ಗೆ ನಾಯಕಿಯಾಗಿ ʼಏಸ್‌ʼ ಮೂಲಕ ರುಕ್ಮಿಣಿ ಕಾಲಿವುಡ್‌ಗೆ ಕಾಲಿಡುತ್ತಿದ್ದಾರೆ.

ಆರುಮುಖ ಕುಮಾರ್‌ ನಿರ್ದೇಶನದ ʼಏಸ್‌ʼ ಚಿತ್ರದ ಟೀಸರ್‌ ಇದೀಗ ಗಮನ ಸೆಳಯುತ್ತಿದೆ. ಕ್ರೈಂ, ಲವ್‌ ಮತ್ತು ಕಾಮಿಡಿಯನ್ನು ಬೆರೆಸಿ ಈ ಚಿತ್ರವನ್ನು ಕಟ್ಟಿ ಕೊಡಲಾಗಿದೆ. ಇದರಲ್ಲಿ ರುಕ್ಮಿಣಿ ಮಲೇಷ್ಯಾದಲ್ಲಿ ಜನಿಸಿದ ತಮಿಳು ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರುಕ್ಮಿಣಿ ಪಾತ್ರಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ ಎಂದು ಚಿತ್ರತಂಡ ತಿಳಿಸಿದೆ. ರುಕ್ಕು ಆಗಿ ಕಾಣಿಸಿಕೊಳ್ಳುತ್ತಿರುವ ರುಕ್ಮಿಣಿ ಅವರ ಪಾತ್ರವನ್ನು ಈ ಟೀಸರ್‌ನಲ್ಲಿ ಪರಿಚಯಿಸಲಾಗಿದೆ. ಸರಳ ಯುವತಿಯಾಗಿ ಇದರಲ್ಲಿ ಅವರು ಮೋಡಿ ಮಾಡಿದ್ದಾರೆ. ಈ ಮೂಲಕ ಅವರು ಕಾಲಿವುಡ್‌ಗೆ ಭರ್ಜರಿಯಾಗಿಯೇ ಎಂಟ್ರಿ ಕೊಡುತ್ತಿದ್ದಾರೆ. ಬಿಡುಗಡೆ ದಿನಾಂಕವನ್ನು ಚಿತ್ರತಂಡ ಸದ್ಯ ಘೋಷಿಸಿಲ್ಲ.

2019ರಲ್ಲಿ ತೆರೆಕಂಡ ಎಂ.ಜಿ.ಶ್ರೀನಿವಾಸ್‌ ನಿರ್ದೇಶನದ ಜತೆಗೆ ನಾಯಕನಾಗಿ ನಟಿಸಿದ ʼಬೀರ್‌ಬಲ್‌ ತ್ರಯೋಲಜಿ ಕೇಸ್‌ 1ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ರುಕ್ಮಿಣಿ ಮೊದಲ ಚಿತ್ರದಲ್ಲೇ ಗಮನ ಸೆಳೆದರು. ಆ ಬಳಿಕ ಕೊಂಚ ಬ್ರೇಕ್‌ ಪಡೆದುಕೊಂಡ ಅವರು ಬಳಿಕ 2023ರಲ್ಲಿ ʼಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ, ಬಿʼಯಲ್ಲಿ ನಟಿಸಿದರು.

ಬಾಕ್ಸ್‌ ಆಫೀಸ್‌ನಲ್ಲಿ ಈ ಚಿತ್ರ ಸಾಧಾರಣ ಕಲೆಕ್ಷನ್‌ ಮಾಡಿದರೂ ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ವಸಂತ್‌ ನಟನೆ ಸಾಕಷ್ಟು ಗಮನ ಸೆಳೆಯಿತು. ಅದೇ ವರ್ಷ ಗಣೇಶ್‌ ಜತೆ ನಟಿಸಿದ ʼಬಾನ ದಾರಿಯಲ್ಲಿʼ ಸಿನಿಮಾ ತೆರೆಕಂಡಿತು. ಈ ವರ್ಷ ರುಕ್ಮಿಣಿ ನಟನೆಯ 2 ಕನ್ನಡ ಮತ್ತು 1 ತೆಲುಗು ಚಿತ್ರ ರಿಲೀಸ್‌ ಆಗಿದೆ.

ಶ್ರೀಮುರಳಿ ಜತೆ ಅಭಿನಯಿಸಿದ ʼಬಘೀರʼ ಮತ್ತು ಡಾ. ಶಿವರಾಜ್‌ ಕುಮಾರ್‌ ಅವರಿಗೆ ನಾಯಕಿಯಾಗಿ ನಟಿಸಿದ ʼಭೈರತಿ ರಣಗಲ್‌ʼ 1 ತಿಂಗಳೊಳಗೆ ರಿಲೀಸ್‌ ಆಗಿ ರುಕ್ಮಿಣಿ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಎರಡೂ ಚಿತ್ರಗಳಲ್ಲಿ ಅವರು ಸೀಮಿತ ದೃಶ್ಯದಲ್ಲಿ ಕಾಣಿಸಿಕೊಂಡರೂ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ತೆಲುಗಿನ ಮೊದಲ ಸಿನಿಮಾ ʼಅಪ್ಪುಡೋ ಇಪ್ಪುಡೋ ಎಪ್ಪುಡೋʼ ಕೂಡ ಇತ್ತೀಚೆಗೆ ರಿಲೀಸ್‌ ಆಗಿದೆ.
ಸದ್ಯ ರುಕ್ಮಿಣಿ ತಮಿಳಿನ ʼಏಸ್‌ʼ ಜತೆಗೆ ಶಿವ ಕಾರ್ತಿಕೇಯನ್‌ ಅವರ ಮುಂದಿನ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದರ ಜತೆಗೆ ಟಾಲಿವುಡ್‌ನ ಸೂಪರ್‌ ಸ್ಟಾರ್‌ ಜೂ.ಎನ್‌ಟಿಆರ್‌ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ʼಕೆಜಿಎಫ್‌ʼ ಖ್ಯಾತಿಯ ಪ್ರಶಾಂತ್‌ ನೀಲ್‌ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಈ ಸುದ್ದಿಯನ್ನೂ ಓದಿ: Bhairathi Ranagal: ರೋಣಪುರ ಜನರನ್ನು ಉಳಿಸಲು ಬಂದ ‘ಭೈರತಿ ರಣಗಲ್‌’; ಪವರ್‌ಫುಲ್‌ ಟ್ರೈಲರ್‌ ರಿಲೀಸ್‌