Friday, 13th December 2024

Samantha Ruth Prabhu: ವಿಚ್ಛೇದನ ಬಗ್ಗೆ ಸಚಿವೆಯ ಆಕ್ಷೇಪಾರ್ಹ ಹೇಳಿಕೆ; ಮತ್ತೊಮ್ಮೆ ಗಮನ ಸೆಳೆದ ಸಮಂತಾ ಸೋಷಿಯಲ್‌ ಮೀಡಿಯಾ ಪೋಸ್ಟ್‌

Samantha Ruth Prabhu

ಹೈದರಾಬಾದ್‌: ಟಾಲಿವುಡ್‌ನ ಸ್ಟಾರ್‌ ದಂಪತಿ ನಾಗಚೈತನ್ಯ (Naga Chaitanya) ಮತ್ತು ಸಮಂತಾ ರುತ್‌ ಪ್ರಭು (Samantha Ruth Prabhu) ವಿಚ್ಛೇದನ ಕುರಿತು ಇತ್ತೀಚೆಗೆ ತೆಲಂಗಾಣ ಸಚಿವೆ ಕೊಂಡಾ ಸುರೇಖಾ (Konda Surekha) ನೀಡಿದ್ದ ಆಕ್ಷೇಪಾರ್ಹ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಿನಿಮಾ ರಂಗ, ರಾಜಕೀಯ ಕ್ಷೇತ್ರದ ಗಣ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೊನೆಗೂ ಕೊಂಡಾ ಸುರೇಖಾ ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಆದರೆ ಈ ವಿವಾದ ಇನ್ನೂ ತಣ್ಣಗಾಗಿಲ್ಲ. ಸುರೇಖಾ ಹೇಳಿಕೆಗೆ ಬಗ್ಗೆ ಈ ಮೊದಲು ಪ್ರತಿಕ್ರಿಯಿಸಿದ್ದ ಸಮಂತಾ, ವಿಚ್ಛೇದನ ಎನ್ನುವುದು ವೈಯಕ್ತಿಕ ವಿಚಾರ. ದಯವಿಟ್ಟು ರಾಜಕೀಯದಿಂದ ತಮ್ಮ ಹೆಸರನ್ನು ದೂರವಿಡಿ ಎಂದಿದ್ದರು. ಇದೀಗ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ ಮತ್ತೊಮ್ಮೆ ನೆಟ್ಟಿಗರ ಗಮನ ಸೆಳೆಯುತ್ತಿದೆ.

“ದೊಡ್ಡ ವ್ಯತ್ಯಾಸವನ್ನು ಸೃಷ್ಟಿಸಲು ನೀವು ದೊಡ್ಡ ಕಾರ್ಯವನ್ನೇ ಮಾಡಬೇಕಾಗಿಲ್ಲ”(You don’t have to do something huge to make a huge difference) ಎಂಬ ಪೋಸ್ಟ್‌ ಅನ್ನು ಅವರು ಹಂಚಿಕೊಂಡಿದ್ದಾರೆ. ಸಮಂತಾ ಯಾಕಾಗಿ ಈ ರೀತಿಯ ಪೋಸ್ಟ್‌ ಹಂಚಿಕೊಂಡಿದ್ದಾರೆ ಎನ್ನುವ ಬಗ್ಗೆ ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.

ನಾಗಚೈತ್ಯನ್ಯಗೆ ಬಿಸಿ ಮುಟ್ಟಿಸಿದ ಅಭಿಮಾನಿಗಳು

ಕೊಂಡಾ ಸುರೇಖಾ ಅವರು ನಾಗಚೈತನ್ಯ ಮತ್ತು ಸಮಂತಾ ಅವರ ವಿಚ್ಛೇದನಕ್ಕೆ ಬಿಆರ್‌ಎಸ್‌ ನಾಯಕ ಕೆಟಿ ರಾಮಾರಾವ್‌ ಕಾರಣ. ನಾಗಚೈತನ್ಯ ಅವರ ತಂದೆ ನಾಗಾರ್ಜುನ ಮಾದಾಪುರದಲ್ಲಿನ ತಮ್ಮ ಎನ್‌ ಕನ್ವೆಷನ್‌ ಸೆಂಟರ್‌ ಅನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಜಾಗದಲ್ಲಿ ಕಟ್ಟಿಸಿದ್ದಾರೆ. ಅದನ್ನು ಒಡೆಯಬಾರದು ಎಂದಾದರೆ ನಿಮ್ಮ ಸೊಸೆ ಸಮಂತಾ ಅವರನ್ನು ನನ್ನ ಬಳಿ ಕಳಿಸಿ ಎಂದು ಕೆಟಿ ರಾಮಾರಾವ್‌ ಬೇಡಿಕೆ ಇಟ್ಟಿದ್ದರು. ಇದನ್ನು ನಾಗಾರ್ಜುನ, ಸಮಂತಾ ಬಳಿ ಹೇಳಿದಾಗ ಆಕೆ ನೋವಿನಿಂದ ಪತಿಗೆ ಡಿವೋರ್ಸ್‌ ನೀಡಿದ್ದರು. ಅಕ್ಕಿನೇನಿ ಕುಟುಂಬದಿಂದಲೇ ದೂರಾಗಿದ್ದರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಾಗಚೈತನ್ಯ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ʼʼವಿಚ್ಛೇದನದ ನಿರ್ಧಾರವು ಯಾವುದೇ ವ್ಯಕ್ತಿಯ ಜೀವನದಲ್ಲಿ ಅತ್ಯಂತ ನೋವಿನ ಮತ್ತು ದುರದೃಷ್ಟಕರ ನಿರ್ಧಾರ. ಸಾಕಷ್ಟು ಚರ್ಚೆಯ ನಂತರ ನಾನು ಮತ್ತು ಮಾಜಿ ಸಂಗಾತಿ ಪರಸ್ಪರ ಬೇರೆಯಾಗಲು ನಿರ್ಧರಿಸಿದೆವು. ಈ ನಿರ್ಧಾರವನ್ನು ಶಾಂತಿಯುತವಾಗಿ ತೆಗೆದುಕೊಳ್ಳಲಾಗಿದೆ. ಈ ವಿಷಯದ ಬಗ್ಗೆ ಇಲ್ಲಿಯವರೆಗೆ ಹಲವಾರು ಆಧಾರರಹಿತ ಮತ್ತು ಸಂಪೂರ್ಣವಾಗಿ ಹಾಸ್ಯಾಸ್ಪದ ಗಾಸಿಪ್‌ಗಳು ಬಂದಿವೆʼʼ ಎಂದು ಬರೆದಿದ್ದರು. ಇದರಲ್ಲಿ ಅವರು ಸಮಂತಾ ಅವರ ಹೆಸರು ಉಲ್ಲೇಖಿಸದೆ ಮಾಜಿ ಸಂಗಾತಿ ಎಂದು ಸಂಬೋಧಿಸಿದ್ದು ಸಮಂತಾ ಅಭಿಮಾನಿಗಳು ಕೆರಳಿಸಿತ್ತು. ಈ ಬಗ್ಗೆ ನಾಗಚೈತನ್ಯ ಅವರನ್ನು ನೇರವಾಗಿ ಟೀಕಿಸಿದ್ದರು. ಈ ಎಲ್ಲ ಕಾರಣಗಳಿಂದ ಸಮಂತಾ ಹಂಚಿಕೊಂಡಿರುವ ಹೊಸ ಪೋಸ್ಟ್‌ ಅಭಿಮಾನಿಗಳ ಗಮನ ಸೆಳೆದಿದೆ.

ಈತನ್ಮಧ್ಯೆ ಕೆ. ಸುರೇಖಾ ಅವರ ಹೇಳಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ನಾಗಾರ್ಜುನ ಖಚಿತಪಡಿಸಿದ್ದಾರೆ. “ನಾವು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇವೆ. ನಾವು ಅವರ ವಿರುದ್ಧ ಇನ್ನೂ 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡುವ ಪ್ರಕ್ರಿಯೆಯಲ್ಲಿದ್ದೇವೆ. ಅವರು ಈಗ ತಮ್ಮ ಹೇಳಿಕೆಗಳನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳುತ್ತಾರೆ. ಅವರು ಸಮಂತಾಗ ಬಳಿ ಕ್ಷಮೆಯಾಚಿಸಿದ್ದಾರೆ. ಆದರೆ ನನ್ನ ಮತ್ತು ನನ್ನ ಕುಟುಂಬದ ಬಳಿ ಕ್ಷಮೆಯಾಚಿಸಿಲ್ಲʼʼ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Konda Surekha : ಸಮಂತಾ- ನಾಗಚೈತನ್ಯ ಕ್ಷಮೆ ಕೋರಿದ ತೆಲಂಗಾಣ ಸಚಿವೆ ಕೊಂಡಾ ಸುರೇಖಾ