Friday, 13th December 2024

Shah Rukh Khan: ಧೂಮಪಾನ ತ್ಯಜಿಸಿದ್ದಾರಂತೆ ಶಾರುಖ್‌ ಖಾನ್‌; ಹುಟ್ಟುಹಬ್ಬದಂದು ಗುಡ್‌ನ್ಯೂಸ್‌ ನೀಡಿದ ಎಸ್‌ಆರ್‌ಕೆ

Shah Rukh Khan

ಮುಂಬೈ: ಬಾಲಿವುಡ್‌ ಬಾದ್‌ ಷಾ ಶಾರುಖ್ ಖಾನ್ (Shah Rukh Khan) ನ. 2ರಂದು ಹುಟ್ಟಹಬ್ಬ ಆಚರಿಸಿಕೊಂಡಿದ್ದಾರೆ. 60ನೇ ವರ್ಷಕ್ಕೆ ಕಾಲಿಟ್ಟ ಅವರು ಈ ವೇಳೆ ಮಹತ್ವದ ಮಾಹಿತಿಯನ್ನು ಘೋಷಿಸಿದ್ದಾರೆ. ಕೊನೆಗೂ ಧೂಮಪಾನವನ್ನು ತ್ಯಜಿಸಿರುವುದಾಗಿ ತಿಳಿಸಿದ್ದಾರೆ. ಈ ಹಿಂದೆಯೂ ಶಾರುಖ್‌ ಖಾನ್‌ ಧೂಮಪಾನ ತ್ಯಜಿಸುವುದಾಗಿ ತಿಳಿಸಿದ್ದರು. ಆದರೆ ಅದರಿಂದ ಹೊರ ಬರಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಗಟ್ಟಿ ಮನಸ್ಸು ಮಾಡಿ ಸಂಪೂರ್ಣವಾಗಿ ಬಿಟ್ಟು ಬಿಟ್ಟಿದ್ದಾರಂತೆ. ಸದ್ಯ ಅವರ ಅಭಿಮಾನಿಗಳು ಈ ವಿಚಾರ ಕೇಳಿ ಖುಷ್‌ ಆಗಿದ್ದಾರೆ. ಈ ನಿರ್ಧಾರವನ್ನು ಎರಡೂ ಕೈ ಚಾಚಿ ಸ್ವಾಗತಿಸಿದ್ದಾರೆ.

ಹುಟ್ಟುಹಬ್ಬದ ಪ್ರಯುಕ್ತ ಮುಂಬೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಈ ವಿಷಯ ಬಹಿರಂಗಪಡಿಸಿದರು. ಅಭಿಮಾನಿಗಳೊಂದಿಗೆ ಮಾತನಾಡಿದ ಅವರು, ʼʼನಾನು ಧೂಮಪಾನ ತ್ಯಜಿಸಿದ್ದೇನೆ. ಅದರಿಂದ ಸಂಪೂರ್ಣ ಹೊರ ಬಂದಿದ್ದೇನೆʼʼ ಎಂದು ಘೋಷಿಸಿದರು. ”ಇದರಿಂದ ಸಮಸ್ಯಯಾಗಬಹುದು ಎಂದು ಭಾವಿಸಿದ್ದೆ. ಆದರೆ ಹಾಗೇನೂ ಆಗುತ್ತಿಲ್ಲ. ಬದಲಾವಣೆಗೆ ಒಗ್ಗಿಕೊಳ್ಳುತ್ತಿದ್ದೇನೆʼʼ ಎಂದು ತಿಳಿಸಿದರು. ಸದ್ಯ ಅವರ ಈ ವಿಡಿಯೊ ವೈರಲ್‌ ಆಗಿದೆ. ಅವರ ನಿರ್ಧಾರ ಕೇಳಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ಅವರ ತೀರ್ಮಾನಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಫ್ಯಾನ್ಸ್‌ ಒಬ್ಬರು ಕಾಮೆಂಟ್‌ ಮಾಡಿ, ʼʼಇದು ಅತ್ಯುತ್ತಮ ಸುದ್ದಿʼʼ ಎಂದು ಹೇಳಿದ್ದಾರೆ. ಇನ್ನೊಬ್ಬರು ʼʼವಾವ್‌. ಅತ್ಯುತ್ತಮ ನಿರ್ಧಾರʼʼ ಎಂದು ತಿಳಿಸಿದ್ದಾರೆ.

2017ರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶಾರುಖ್‌ ಖಾನ್‌ ತಾವು ಧೂಮಪಾನ ಮತ್ತು ಕುಡಿತವನ್ನು ತ್ಯಜಿಸುವುದಾಗಿ ತಿಳಿಸಿದ್ದರು. ತಮ್ಮ ಚಿಕ್ಕ ಪುತ್ರ ಅಬ್‌ರಾಮ್‌ ಜತೆ ಹೆಚ್ಚಿನ ಸಮಯ ಕಳೆಯಲು ಈ ನಿರ್ಧಾರ ಕೈಗೊಂಡಿರುವುದಾಗಿ ಘೋಷಿಸಿದ್ದರು. ʼʼಆರೋಗ್ಯವಂತರಾಗಿರಬೇಕು ಎಂದಾದರೆ ಧೂಮಪಾನ, ಕುಡಿತ ತ್ಯಜಿಸಬೇಕು. ವ್ಯಾಯಾಮಕ್ಕೆ ಒತ್ತು ನೀಡಬೇಕಾಗುತ್ತದೆ. ಹೀಗಾಗಿ ನಾನು ಧೂಮಪಾನ, ಕುಡಿತ ತ್ಯಜಿಸಲು ನಿರ್ಧರಿಸಿದ್ದೇನೆ. ಈ ಮೂಲಕ ಆರೋಗ್ಯವಂತಾಗಿರಲು ಮತ್ತು ಖುಷಿಯಾಗಿರಲು ಯತ್ನಿಸುತ್ತೇನೆʼʼ ಎಂದು ತಿಳಿಸಿದ್ದರು.

ಶಾರುಖ್ ಅವರ ಧೂಮಪಾನ ಅಭ್ಯಾಸದ ಬಗ್ಗೆ ಅನೇಕ ಬಾಲಿವುಡ್ ಕಲಾವಿದರು ಈ ಹಿಂದೆಯೂ ಕಾಮೆಂಟ್ ಮಾಡಿದ್ದರು. ಸಿದ್ಧಾರ್ಥ್ ಕಣ್ಣನ್ ಅವರೊಂದಿಗೆ ನಡೆಸಿದ ಮಾತುಕತೆಯಲ್ಲಿ ನಟ ಪ್ರದೀಪ್ ರಾವತ್, “ನನಗೆ ಸ್ಪಷ್ಟವಾಗಿ ನೆನಪಿದೆ. ಬೇರೆ ಯಾವುದೇ ನಟ ಶಾರುಖ್‌ ಖಾನ್‌ ಅವರಷ್ಟು ಧೂಮಪಾನ ಮಾಡುವುದನ್ನು ನಾನು ನೋಡಿಲ್ಲ. ಅವರು ನಿಜವಾದ ಚೈನ್ ಸ್ಮೋಕರ್ ಆಗಿದ್ದರು. ಅದೇನೇ ಇರಲಿ ಸಿನಿಮಾ ವಿಚಾರಕ್ಕೆ ಬಂದರೆ ಅದರಲ್ಲಿ ಸಂಪೂರ್ಣವಾಗಿ ತಲ್ಲೀನರಾಗಿ ಬಿಡುತ್ತಾರೆʼʼ ಎಂದಿದ್ದರು.

ಸದ್ಯದ ಪ್ರಾಜೆಕ್ಟ್‌

ಸದ್ಯ ಶಾರುಖ್‌ ಖಾನ್‌ ಸತತ 3 ಚಿತ್ರಗಳ ಗೆಲುವಿನ ಸಂಭ್ರಮದಲ್ಲಿದ್ದಾರೆ. ಕಳೆದ ವರ್ಷ ತೆರೆಕಂಡ ಶಾರುಖ್‌ ಅಭಿನಯದ ʼಪಠಾಣ್‌ʼ, ʼಜವಾಣ್‌ʼ ಮತ್ತು ʼಡಂಕಿʼ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿವೆ. ಸತತ ಸೋಲಿನಿಂದ ಕಂಗೆಟ್ಟ ಕಿಂಗ್‌ ಖಾನ್‌ಗೆ ಯಶಸ್ಸು ತಂದಿತ್ತಿವೆ. ಸದ್ಯ ಅವರು ಸುಜೋಯ್‌ ಘೋಷ್‌ ನಿರ್ದೇಶನದ ʼಕಿಂಗ್‌ʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿ ಅವರ ಪುತ್ರಿ ಸುಹಾನಾ ಖಾನ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ಈ ಸುದ್ದಿಯನ್ನೂ ಓದಿ: Shah Rukh Khan: ದೀಪಿಕಾ ಪಡುಕೋಣೆ, ಮಗು ನೋಡಲು ಆಸ್ಪತ್ರೆಗೆ ಭೇಟಿ ನೀಡಿದ ಶಾರುಖ್‌ ಖಾನ್‌