Wednesday, 11th December 2024

ಸಿಂಧೂ ಕಣಿವೆ ನಾಗರೀಕತೆಯ ಕುರಿತು ಸಿನಿಮಾ ಮಾಡಿ: ಆನಂದ್​ ಮಹೀಂದ್ರಾ ಮನವಿ

ಮುಂಬೈ: ಸಿಂಧೂ ಕಣಿವೆ ನಾಗರೀಕತೆಯ ಕುರಿತು ಸಿನಿಮಾ ಮಾಡುವಂತೆ ನಿರ್ದೇಶಕ ರಾಜಮೌಳಿ ಅವರಲ್ಲಿ ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ ಮನವಿ ಮಾಡಿದ್ದಾರೆ.

ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ ಮತ್ತು ಎಸ್​.ಎಸ್.ರಾಜಮೌಳಿ ನಡುವಿನ ಸಂಭಾಷಣೆ ಟ್ವಿಟರ್​ನಲ್ಲಿ ಟ್ರೆಂಡಿಂಗ್​ ಆಗಿದೆ. ಮಹೀಂದ್ರಾ ಸಂಸ್ಥೆಯ ಚೇರ್​ಮನ್​ ಆನಂದ್​ ಮಹೀಂದ್ರಾ ಅವರು ಟ್ವಿಟರ್​ನಲ್ಲಿ ಸಕ್ರಿಯರಾಗಿದ್ದಾರೆ.

ಸಿಂಧೂ ಕಣಿವೆ ನಾಗರೀಕತೆ ಸಂಬಂಧಿಸಿದ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ಆನಂದ್​ ಮಹೀಂದ್ರಾ ಅವರು, “ಇವು ಇತಿಹಾಸವನ್ನು ಜೀವಂತಗೊಳಿಸುವ ಮತ್ತು ನಮ್ಮ ಕಲ್ಪನೆಗಳನ್ನು ಪ್ರಚೋದಿಸುವ ಅದ್ಭುತ ಚಿತ್ರಗಳಾಗಿವೆ. ಈ ಪುರಾತನ ನಾಗರೀಕತೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕಿದೆ. ಇಂತಹ ಸಮಯ ದಲ್ಲಿ ಜಗತ್ತಿಗೆ ಸಿಂಧು ನಾಗರೀಕತೆಯ ಕುರಿತಾದ ಸಿನಿಮಾವನ್ನು ನೀವು ಮಾಡಬಹುದೇ” ಎಂದು ಬರೆದು ರಾಜಮೌಳಿ ಅವರನ್ನು ಟ್ಯಾಗ್​ ಮಾಡಿ ಟ್ವೀಟ್​ ಮಾಡಿದ್ದಾರೆ.

ರಾಜಮೌಳಿ ಪ್ರತ್ಯುತ್ತರ ನೀಡಿದ್ದು, ‘ಮಗಧೀರ’ ಚಿತ್ರದ ಘಟನೆಗಳನ್ನು ನೆನಪಿಸಿಕೊಂಡಿ ದ್ದಾರೆ. ಸಿಂಧೂ ನಾಗರೀಕತೆಯನ್ನು ಆಧರಿಸಿ ಚಿತ್ರ ಮಾಡಲು ಆಸಕ್ತಿ ಇದೆ ಎಂಬುದಾಗಿ ಹೇಳಿದ್ದಾರೆ.

ನಿರ್ದೇಶಕ ರಾಜಮೌಳಿ ಅವರು ಇತಿಹಾಸ, ಪೌರಾಣಿಕ ಸಿನಿಮಾಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಹೀಗಾಗಿ ಆನಂದ್ ಮಹೀಂದ್ರಾ ಅವರು ನೇರವಾಗಿ ರಾಜಮೌಳಿ ಅವರಲ್ಲೇ ಸಿಂಧೂ ಕಣಿವೆ ನಾಗರೀಕತೆಯ ಸಿನಿಮಾ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ.

ಟಾಲಿವುಡ್​ ನಿರ್ದೇಶಕ ಎಸ್.​ಎಸ್.ರಾಜಮೌಳಿ ಅವರು ‘ಬಾಹುಬಲಿ’ ಮತ್ತು ‘ಆರ್​ಆರ್​ಆರ್​’ನಂತಹ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲೂ ‘ಆರ್​ಆರ್​ಆರ್​’ ಚಿತ್ರದ ನಾಟು ನಾಟು ಹಾಡು ಆಸ್ಕರ್​ ಪ್ರಶಸ್ತಿ ಪಡೆಯುವ ಮೂಲಕ ಕೇವಲ ಟಾಲಿವುಡ್​ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗಕ್ಕೆ ಗೌರವ ತಂದುಕೊಟ್ಟಿದೆ.