Thursday, 12th December 2024

Singham Again Box Office: ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ಸಿಂಗಂ ಎಗೈನ್‌’; 4 ದಿನಗಳ ಕಲೆಕ್ಷನ್‌ ಎಷ್ಟು?

Singham Again Box Office

ಮುಂಬೈ: ಸಿನಿ ಪ್ರಿಯರ ಬಹು ದಿನಗಳ ಕಾತುರಕ್ಕೆ ಬ್ರೇಕ್‌ ಹಾಕಿ ಕೊನೆಗೂ ಬಾಲಿವುಡ್‌ನ ಬಹು ನಿರೀಕ್ಷಿತ, ಬಹು ತಾರಾಗಣದ ‘ಸಿಂಗಂ ಅಗೈನ್‌’ (Singham Again) ಚಿತ್ರ ನ. 1ರಂದು ತೆರೆಕಂಡಿದೆ. ರೋಹಿತ್‌ ಶೆಟ್ಟಿ (Rohit Shetty) ಆ್ಯಕ್ಷನ್‌ ಕಟ್‌ ಹೇಳಿರುವ ಈ ಆಧುನಿಕ ‘ರಾಮಾಯಣ’ಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿದೆ. ಅಜಯ್‌ ದೇವಗನ್‌, ಅಕ್ಷಯ್‌ ಕುಮಾರ್‌, ರಣವೀರ್‌ ಸಿಂಗ್‌, ದೀಪಿಕಾ ಪಡುಕೋಣೆ, ಕರೀನಾ ಕಪೂರ್‌, ಟೈಗರ್‌ ಶ್ರಾಪ್‌, ಅರ್ಜುನ್‌ ಕಪೂರ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ 4 ದಿನಗಳ ಒಟ್ಟು ಕಲೆಕ್ಷನ್‌ ಎಷ್ಟು ಎನ್ನುವ ವಿವರ ಇಲ್ಲಿದೆ (Singham Again Box Office).

ತೆರೆಕಂಡ ಮೊದಲ ದಿನವೇ ಭಾರತದಲ್ಲಿ ಬರೋಬ್ಬರಿ 43.5 ಕೋಟಿ ರೂ. ಬಾಚಿಕೊಂಡ ʼಸಿಂಗಂ ಎಗೈನ್‌ʼ ಚಿತ್ರದ 4 ದಿನಗಳ ಕಲೆಕ್ಷನ್‌ 130 ಕೋಟಿ ರೂ. ದಾಟಿದೆ. ಚಿತ್ರ ತೆರೆಕಂಡ 4ನೇ ದಿನವಾದ ಸೋಮವಾರ (ನ. 4) ಅಂದಾಜು 16.24 ಕೋಟಿ ರೂ. ಹರಿದು ಬಂದಿದೆ. ಮೊದಲ 3 ದಿನದಲ್ಲೇ 100 ಕೋಟಿ ರೂ. ಕ್ಲಬ್‌ ಸೇರಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸಿನಿಮಾ 2ನೇ ದಿನ 42.5 ಕೋಟಿ ರೂ. ಗಳಿಸಿದೆ. ಇನ್ನು 3ನೇ ದಿನ ನಿರ್ಮಾಪಕರ ಜೇಬಿಗೆ ಸೇರಿದ್ದು 35.75 ಕೋಟಿ ರೂ. ಆ ಮೂಲಕ ಭಾರತದಲ್ಲಿ ಒಟ್ಟು ಕಲೆಕ್ಷನ್‌ 137.99 ಕೋಟಿ ರೂ.. ಇನ್ನು ಜಾಗತಿಕವಾಗಿ 4 ದಿನಗಳಲ್ಲಿ 189 ಕೋಟಿ ರೂ. ಬಾಚಿಕೊಂಡಿದೆ.

ಸಾಲು ಸಾಲು ರಜಾ ದಿನಗಳು ಪ್ಲಸ್‌ ಪಾಯಿಂಟ್‌

ದೀಪಾವಳಿ ಹಬ್ಬದ ಪ್ರಯುಕ್ತ ಸಾಲು ಸಾಲು ರಜಾ ದಿನ ಇದ್ದುದು ಚಿತ್ರತಂಡಕ್ಕೆ ಪ್ಲಸ್‌ ಪಾಯಿಂಟ್‌ ಆಗಿತ್ತು. ಈ ಚಿತ್ರದ ಒಟಿಟಿ ಹಕ್ಕನ್ನು ಅಮೆಜಾನ್‌ ಪ್ರೈಂ ವಿಡಿಯೊ ಬರೋಬ್ಬರಿ 130 ಕೋಟಿ ರೂ.ಗೆ ಪಡೆದುಕೊಂಡಿದೆ. ಡಿಸೆಂಬರ್‌ ಅಂತ್ಯಕ್ಕೆ ಇದು ಸ್ಟ್ರೀಮಿಂಗ್‌ ಆಗಲಿದೆ ಎನ್ನಲಾಗುತ್ತದೆ. ಈ ಬಹು ತಾರಾಗಣದ ಚಿತ್ರ ಬರೋಬ್ಬರಿ 350 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದೆ.

‘ಭೂಲ್​ ಭುಲಯ್ಯ 3’ ಚಿತ್ರದ ಕಲೆಕ್ಷನ್‌ ಹೇಗಿದೆ?

ನ. 1ರಂದೇ ತೆರೆಕಂಡ ಮತ್ತೊಂದು ಬಾಲಿವುಡ್‌ ಚಿತ್ರ ‘ಭೂಲ್​ ಭುಲಯ್ಯ 3’ ಕೂಡ ಬಾಕ್ಸ್‌ ಅಫೀಸ್‌ನಲ್ಲಿ ಉತ್ತಮ ಕಲೆಕ್ಷನ್‌ ಮಾಡುತ್ತಿದೆ. ಕಾರ್ತಿಕ್‌ ಆರ್ಯನ್‌, ವಿದ್ಯಾ ಬಾಲನ್‌, ಮಾಧುರಿ ದೀಕ್ಷಿತ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಅನೀಸ್‌ ಬಜ್ಮಿ ನಿರ್ದೇಶಿಸಿದ್ದಾರೆ. ಈ ಚಿತ್ರವೂ ಈಗಾಗಲೇ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 100 ಕೋಟಿ ರೂ. ಕಲೆಕ್ಷನ್‌ ಮಾಡಿದೆ. 4ನೇ ದಿನವಾದ ಸೋಮವಾರ 17.5 ಕೋಟಿ ರೂ. ಗಳಿಸಿದ ಚಿತ್ರದ ಒಟ್ಟು ಕಲೆಕ್ಷನ್‌ ಭಾರತದಲ್ಲಿ 123.5 ಕೋಟಿ ರೂ. ಜಾಗತಿಕವಾಗಿ 166 ಕೋಟಿ ರೂ. ತನ್ನದಾಗಿಸಿಕೊಂಡಿದೆ ಎನ್ನಲಾಗಿದೆ. ಈ ಚಿತ್ರದ ಬಜೆಟ್‌ 150 ಕೋಟಿ ರೂ.

ಈ ಸುದ್ದಿಯನ್ನೂ ಓದಿ: Singham Again Review: ತೆರೆ ಮೇಲೆ ಮತ್ತೊಮ್ಮೆ ಸಿಂಗಂ ಆಗಿ ಅಬ್ಬರಿಸಿದ ಅಜಯ್‌ ದೇವಗನ್‌; ‘ಸಿಂಗಂ ಅಗೈನ್‌’ ಚಿತ್ರ ಹೇಗಿದೆ?