Thursday, 3rd October 2024

Subrahmanyaa Movie: ‘ಸುಬ್ರಹ್ಮಣ್ಯ’ನಾಗಿ ರವಿಶಂಕರ್ ಪುತ್ರ ಅದ್ವೈ ಭರ್ಜರಿ ಎಂಟ್ರಿ; ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಗ್ಲಿಂಪ್ಸ್ ಔಟ್‌

Subrahmanyaa Movie

ಬೆಂಗಳೂರು: ಬಹುಭಾಷಾ ನಟ, ಹಿರಿಯ ಕಲಾವಿದ ಆರ್ಮುಗ ರವಿಶಂಕರ್ (P.Ravi Shankar) ‘ಸುಬ್ರಹ್ಮಣ್ಯ’ ಸಿನಿಮಾ (Subrahmanyaa Movie) ಮೂಲಕ ಮಗ ಅದ್ವೈ ಅವರನ್ನು ಸಿನಿಮಾ ಪ್ರೇಮಿಗಳಿಗೆ ಪರಿಚಯಿಸಲು ಮುಂದಾಗಿದ್ದಾರೆ. ಈ ಚಿತ್ರದ ಪ್ರೀ-ಲುಕ್ ಈಗಾಗಲೇ ಗಮನ ಸೆಳೆದಿದ್ದು, ಇದೀಗ ಚಿತ್ರತಂಡ ‘ಸುಬ್ರಹ್ಮಣ್ಯ’ ಚಿತ್ರದ ಫಸ್ಟ್ ಗ್ಲಿಂಪ್ಸ್ ಅನ್ನು ಅನಾವರಣಗೊಳಿಸಿದೆ. ಯೂಟ್ಯೂಬ್‌ನಲ್ಲಿ ಬಿಡುಗಡೆಗೂ ಮೊದಲೇ ದುಬೈನಲ್ಲಿ ನಡೆದ ಸೈಮಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ‘ಸುಬ್ರಹ್ಮಣ್ಯ’ ಸಿನಿಮಾದ ಮೊದಲ ತುಣುಕನ್ನು ರಿಲೀಸ್ ಮಾಡಲಾಯಿತು.

ಇದೀಗ ಎಸ್‌ಜಿ ಮೂವೀಸ್ ಯೂಟ್ಯೂಬ್‌ನಲ್ಲಿ ಸುಬ್ರಹ್ಮಣ ಗ್ಲಿಂಪ್ಸ್ ಬಿಡುಗಡೆಯಾಗಿದೆ. 3 ನಿಮಿಷ 14 ಸೆಕೆಂಡ್ ಇರುವ ಝಲಕ್ ಮೈನವಿರೇಳಿಸುವಂತಿದೆ. ವಿಷಪೂರಿತ ಹಾವುಗಳಿಂದ ತುಂಬಿದ ಬಾವಿಗೆ ಅದ್ವೈ ಹಗ್ಗದ ಮೂಲಕ ಎಂಟ್ರಿ ಕೊಡುತ್ತಾರೆ. ಬಳಿಕ ಆ ಬಾವಿಯಲ್ಲಿರುವ ಪುರಾತನ ಪುಸ್ತಕವನ್ನು ಎತ್ತಿಕೊಂಡು ಹೊರ ಬರುತ್ತಾರೆ. ಆಗ ಹಾವುಗಳು ಅವರನ್ನು ಬೆನ್ನಟ್ಟುತ್ತವೆ. ಇದಿಷ್ಟು ಗ್ಲಿಂಪ್ಸ್‌ನಲ್ಲಿ ಕಂಡು ಬಂದಿದೆ. ಅದ್ವೈ ಸ್ಟೈಲಿಶ್‌ ಲುಕ್‌ ಅನ್ನು ನೋಡುಗರು ಇಷ್ಟಪಟ್ಟಿದ್ದಾರೆ. ಕೊನೆಯ ಕೆಲ ಸೆಕೆಂಡ್‌ಗಳನ್ನು ಇನ್ನಷ್ಟು ಅದ್ಭುತವಾಗಿ ಕಟ್ಟಿ ಕೊಡಲಾಗಿದೆ. ವಿಷ್ಯುವಲ್ಸ್ ಟ್ರೀಟ್ ಹಾಗೂ ಗ್ರಾಫಿಕ್ಸ್ ವರ್ಕ್ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.

4 ತಿಂಗಳ ಪರಿಶ್ರಮ

ʼಸುಬ್ರಹ್ಮಣʼ ಗ್ಲಿಂಪ್ಸ್‌ಗಾಗಿ 60ಕ್ಕೂ ಹೆಚ್ಚು ವಿಎಫ್‌ಎಕ್ಸ್‌ ತಂತ್ರಜ್ಞನರು ಕಳೆದ 4 ತಿಂಗಳಿನಿಂದ ದುಡಿದಿದ್ದಾರೆ. ‘ಸುಬ್ರಹ್ಮಣ್ಯ’ ಸಿನಿಮಾದ ಕ್ರಿಯೇಟಿವ್ ನಿರ್ಮಾಪಕ ಮತ್ತು ವಿಎಫ್‌ಎಕ್ಸ್ ಮೇಲ್ವಿಚಾರಕ ನಿಖಿಲ್ ಕೋಡೂರು ನೇತೃತ್ವದಲ್ಲಿ ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನ ಪ್ರಸಿದ್ಧ ಸ್ಟುಡಿಯೋಗಳಲ್ಲಿ ವಿಎಫ್‌ಎಕ್ಸ್ ಕೆಲಸ ನಡೆದಿದೆ. ‘ಸುಬ್ರಹ್ಮಣ್ಯ’ ಸೋಷಿಯೋ-ಫ್ಯಾಂಟಸಿ ಶೈಲಿಯ ಸಿನಿಮಾ. ಜತೆಗೆ ಅಡ್ವೆಂಚರ್ ಎಲಿಮೆಂಟ್ಸ್‌ ಕೂಡ ಈ ಸಿನಿಮಾದಲ್ಲಿದೆ.

‘ಎಸ್.ಜಿ ಮೂವೀ ಮೇಕರ್ಸ್’ ಸಂಸ್ಥೆಯ ಮೂಲಕ ತಿರುಮಲ ರೆಡ್ಡಿ ಹಾಗೂ ಅನಿಲ್ ಕಡಿಯಾಲ ಅವರು ನಿರ್ಮಾಣ ಮಾಡುತ್ತಿದ್ದಾರೆ. ಪ್ರವೀಣಾ ಕಡಿಯಾಲ ಮತ್ತು ರಮಾ ಲಕ್ಷ್ಮೀ ಪ್ರಸ್ತುತಪಡಿಸುತ್ತಿದ್ದಾರೆ. ‘ಕೆಜಿಎಫ್’ ಹಾಗೂ ‘ಸಲಾರ್’ ಸಿನಿಮಾಗೆ ಸಂಗೀತ ನೀಡಿರುವ ರವಿ ಬಸ್ರೂರು ಈ ಸಿನಿಮಾಗೆ ಟ್ಯೂನ್ ಹಾಕುತ್ತಿದ್ದಾರೆ. ವಿಘ್ನೇಶ್ ರಾಜ್ ಕ್ಯಾಮರಾ ವರ್ಕ್ ಇದ್ದರೆ, ವಿಜಯ್ ಎಂ. ಕುಮಾರ್ ಎಡಿಟಿಂಗ್ ಮಾಡುತ್ತಿದ್ದಾರೆ. ಮಗನಿಗಾಗಿ ಎರಡು ದಶಕಗಳ ಬಳಿಕ ಡೈರೆಕ್ಟರ್‌ ಕ್ಯಾಪ್‌ ಧರಿಸಿರುವ ರವಿಶಂಕರ್ ಚಿತ್ರರಂಗಕ್ಕೆ ಹೊಸ ನಾಯಕನನ್ನು ಪರಿಚಯಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. 2004ರಲ್ಲಿ ಮಾಲಾಶ್ರೀ ಅಭಿನಯದ ‘ದುರ್ಗಿ’ ಸಿನಿಮಾ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ರವಿಶಂಕರ್​ ಅವರು, ಈಗ ಮಗನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಗಮನ ಸೆಳೆದ ಫಸ್ಟ್ ಲುಕ್ ಪೋಸ್ಟರ್

ಈಗಾಗಲೇ ರಿಲೀಸ್‌ ಆಗಿರುವ ‘ಸುಬ್ರಹ್ಮಣ್ಯ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಸಿನಿ ಪ್ರೇಮಿಗಳ ಗಮನ ಸೆಳೆದಿದೆ. ಕಾಡು, ನಿಗೂಢ ಪ್ರವೇಶ ದ್ವಾರವನ್ನು ಕಟ್ಟಿಕೊಟ್ಟಿರುವ ಚಿತ್ರತಂಡ ಕುತೂಹಲ ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ.

ಈ ಸುದ್ದಿಯನ್ನೂ ಓದಿ: Bigg Boss Kannada 11: ಬಿಗ್‌ಬಾಸ್‌ನಲ್ಲೂ ಹೊಸ ಅಧ್ಯಾಯ; ನಿರೂಪಕ ಯಾರಾಗ್ತಾರೆ ಎನ್ನುವ ಕುತೂಹಲಕ್ಕೆ ಕೊನೆಗೂ ತೆರೆ