Friday, 13th December 2024

Sudeep Mother passed away: ಕಿಚ್ಚ ಸುದೀಪ್‌ಗೆ ಮಾತೃ ವಿಯೋಗ

Sudeep Mother passed away

ಬೆಂಗಳೂರು: ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್(Sudeep Mother passed away) ಅವರ ತಾಯಿ ಸರೋಜಾ ಅವರು ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಅವರು ಹಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ ಇನ್ನು ಮಧ್ಯಾಹ್ನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಶನಿವಾರ ಸಂಜೆಯೇ ಸುದೀಪ್ ತಾಯಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ತಿಳಿದು ಬಂದಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸುದೀಪ್ ಅವರ ತಾಯಿ ಕೊನೆಯುಸಿರೆಳೆದಿದ್ದಾರೆ. ಜೆಪಿ ನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಧ್ಯಾಹ್ನ 12 ಗಂಟೆಯ ನಂತರ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ತಿಳಿದು ಬಂದಿದೆ. ಸುದೀಪ್ ಅವರ ತಾಯಿ ಸರೋಜಾ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸೇರಿದಂತೆ ಜೆಪಿ ನಗರದ ನಿವಾಸದತ್ತ ಆಗಮಿಸುತ್ತಿದ್ದಾರೆ.

ಸದ್ಯ ಕಿಚ್ಚ ಸುದೀಪ್‌ ಮ್ಯಾಕ್ಸ್‌ ಸಿನಿಮಾ ಶೂಟಿಂಗ್‌ ಮತ್ತು ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಅವರು ಬಿಗ್‌ಬಾಸ್‌ ಸೀಸನ್ 11 ನನ್ನ ಕೊನೆಯ ಬಿಗ್ ಬಾಸ್ ಸೀಸನ್. ಇನ್ಮುಂದೆ ಶೋ ನಡೆಸಿಕೊಡುವುದಿಲ್ಲ ಎಂದು ಟ್ವೀಟ್ ಮಾಡಿದ್ದರು. ಇದಾದ ಬಳಿಕ ಬಿಗ್ ಬಾಸ್ ಮಾಜಿ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಫೇಸ್​ಬುಕ್ ಲೈವ್ ಬಂದು, ‘ಬಿಗ್ ಬಾಸ್ ಶೋನಲ್ಲಿ ಕನ್ನಡ ಬಳಕೆ ಹೆಚ್ಚು ಆಗುತ್ತಿಲ್ಲ. ಈ ಬಾರಿಯ ಸ್ಪರ್ಧಿಗಳಿಗೆ ತುಂಬಾ ಕನ್‌ಫ್ಯೂಶನ್ ಆಗುತ್ತಿದೆ. ಬರೆದಿರುವ ಪಾಯಿಂಟ್ಸ್‌ ಸರಿಯಾಗಿ ಇಲ್ಲ. ಸರಿಯಾಗಿ ಕಮ್ಯೂನಿಕೇಟ್ ಮಾಡದೆ ಗೊಂದಲ ಆಗುತ್ತಿದೆ. ಈ ತರಹದ ಬೆಳವಣಿಗೆಯಿಂದ ಅಸಮಾಧಾನಗೊಂಡು ಸುದೀಪ್ ಬಿಡಲು ನಿರ್ಧಾರ ಮಾಡಿದ್ದಾರೆ,’ ಎಂದು ಹೇಳಿದ್ದರು.

ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸುದೀಪ್ ಹಾಗೂ ಕಲರ್ಸ್ ನಡುವೆ ಎಲ್ಲವೂ ಸರಿಯಿಲ್ಲ, ಬಿಗ್ ಬಾಸ್ ಆಯೋಜಕರ ಜೊತೆ ಕಿರಿಕ್ ಆಗಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದೀಗ ಸುದೀಪ್ ಟ್ವೀಟ್ ಮಾಡುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದರು.

‘‘ನನ್ನ ಒಂದು ಟ್ವೀಟ್​ಗೆ ನೀವು ಸಂಬಂಧಿಸಿ ಬರುತ್ತಿರುವ ಎಲ್ಲಾ ಸಪೋರ್ಟ್​ಗೆ ಅಭಿನಂದನೆ. ಆದರೆ ನನ್ನ ಹಾಗೂ ಚಾನೆಲ್​ ನಡುವೆ ಏನೋ ಸಂಘರ್ಷವಾಗಿದೆ ಎಂದು ಹರಿದಾಡುತ್ತಿರುವ ವಿಡಿಯೋ ಹಾಗೂ ಪ್ರತಿಕ್ರಿಯೆಗಳನ್ನು ಸೃಷ್ಟಿಸುತ್ತಿರುವವರಿಗೆ ನಾನು ಕೇಳಿಕೊಳ್ಳುವುದು ಇಷ್ಟೆ. ನಾವು ಒಂದು ದೀರ್ಘವಾದ ಹಾಗೂ ಧನಾತ್ಮಕ ಪ್ರಯಾಣವೊಂದನ್ನು ಮಾಡಿದ್ದೇವೆ. ಇದರಲ್ಲಿ ಒಬ್ಬರಿಗೊಬ್ಬರು ಅಗೌರವದಿಂದ ನಡೆದುಕೊಳ್ಳುವ ಪ್ರಶ್ನೆಯೇ ಹುಟ್ಟುವುದಿಲ್ಲ. ಇದರ ಸುತ್ತ ಹುಟ್ಟುತ್ತಿರುವ ಊಹೆಗಳು ಸುಳ್ಳುಗಳಿಂದ ಕೂಡಿವೆ ಮತ್ತು ಮಾಹಿತಿ ಕೊರತೆಯಿಂದ ಕೂಡಿವೆ. ನನ್ನ ಒಂದು ಟ್ವೀಟ್ ಅತ್ಯಂತ ಪ್ರಾಮಾಣಿಕವಾಗಿದೆ. ನನ್ನ ಮತ್ತು ಕಲರ್ಸ್ ಕನ್ನಡದ ನಡುವಿನ ಸಂಬಂಧ ಒಂದು ಅದ್ಭುತವಾದದ್ದು. ಅವರು ನನ್ನನ್ನು ತುಂಬಾ ಗೌರವದಿಂದ ನಡೆಸಿಕೊಂಡಿಂದ್ದಾರೆ. ಡೈರೆಕ್ಟರ್ ಪ್ರಕಾಶ್ ಒಬ್ಬ ಅದ್ಭುತ ಪ್ರತಿಭೆ ಹೊಂದಿರುವ ವ್ಯಕ್ತಿ. ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ನನ್ನೊಂದಿಗೆ ಕೆಲಸ ಮಾಡಿದವರು ಯಾವುದೋ ಅಪವಾದವನ್ನು ಎದುರಿಸುತ್ತಿರುವಾಗ ನಾನು ಹಿಂದೆ ಕುಳಿತುಕೊಂಡು ನೋಡುತ್ತಾ ಸಂಭ್ರಮಿಸುವವರ ಪಟ್ಟಿಗೆ ಸೇರಿದ ವ್ಯಕ್ತಿ ನಾನಲ್ಲ. ಚಿಯರ್ಸ್ & ಲವ್’’ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.