Thursday, 3rd October 2024

Sudeepa: ಬಿಗ್‌ಬಾಸ್‌ ಹೊಸ ಪ್ರೋಮೊ ರಿಲೀಸ್‌; ನಿರೂಪಕರಾಗಿ ಸುದೀಪ್‌ ಇರ್ತಾರಾ?

Sudeepa

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್‌ 11 (Bigg Boss Kannada) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಗ್ಗೆ ಕಲರ್ಸ್‌ ಕನ್ನಡ ವಾಹಿನಿ ಈಗಾಗಲೇ 2 ಪ್ರೋಮೊ ಬಿಡುಗಡೆ ಮಾಡಿ ಕುತೂಹಲ ಕೆರಳಿದಿದೆ. ಈ ಪ್ರೋಮೊಗಳಲ್ಲಿ ಶೋ ಯಾವಾಗ ಆರಂಭವಾಗಲಿದೆ ಎನ್ನುವ ಮಾಹಿತಿ ಬಹಿರಂಗಪಡಿಸಿಲ್ಲವಾದರೂ ಈ ತಿಂಗಳಾಂತ್ಯಕ್ಕೆ ಶುರುವಾಗಲಿದೆ ಎನ್ನುವ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಅದರ ಜೊತೆಗೆ ಈ ಬಾರಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋಗೆ ಕಿಚ್ಚ ಸುದೀಪ್ (Sudeepa) ಅವರೇ ನಿರೂಪಣೆ ಮಾಡ್ತಾರಾ? ಇಲ್ಲವಾ? ಎನ್ನುವ ಪ್ರಶ್ನೆಯೂ ಕಾಡತೊಡಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ.

ಬಿಗ್‌ಬಾಸ್‌ ಕನ್ನಡ 10 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ 10 ಸೀಸನ್‌ಗಳನ್ನೂ ನಿರೂಪಿಸಿದವರು ಕಿಚ್ಚ ಸುದೀಪ್‌. ಹೀಗಾಗಿ ಈ ಶೋದ ಯಶಸ್ಸಿನ ಕ್ರೆಡಿಟ್‌ ಸುದೀಪ್‌ ಅವರಿಗೂ ಸಲ್ಲುತ್ತದೆ. ವಾರಾಂತ್ಯದಲ್ಲಿ ಸುದೀಪ್‌ ನಡೆಸಿಕೊಡುವ ʼವಾರದ ಕಥೆ ಕಿಚ್ಚನ ಜೊತೆʼಗಾಗಿಯೇ ಕಾದು ಕೂರುವ ಪ್ರೇಕ್ಷಕರಿದ್ದಾರೆ. ಸದ್ಯ ಸುದೀಪ್‌ ಈ ಬಾರಿ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ವಿಚಾರವೇ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಯಾಕಾಗಿ ಈ ಅನುಮಾನ?

ಈ ಬಾರಿ ಸುದೀಪ್‌ ನಿರೂಪಣೆ ಮಾಡುವುದು ಅನುಮಾನ ಎನ್ನುವ ಗಾಳಿಸುದ್ದಿ ಹಬ್ಬಲೂ ಬಲವಾದ ಕಾರಣವಿದೆ. ಅವರು ಸದ್ಯ ಬ್ಯಾಕ್‌ ಟು ಬ್ಯಾಕ್‌ ಚಿತ್ರಗಳನ್ನು ಒಪ್ಪಿಕೊಂಡಿದ್ದು ಅದರ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವುದರಿಂದ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ಅದಕ್ಕೆ ತಕ್ಕಂತೆ ಬಿಗ್‌ಬಾಸ್‌ 11ರ ಮೊದಲ ಪ್ರೋಮೊ ರಿಲೀಸ್‌ ಮಾಡಿದ್ದ ಕಲರ್ಸ್‌ ಕನ್ನಡ ವಾಹಿನಿ ಅದರಲ್ಲಿ ಸುದೀಪ್‌ ಹೆಸರನ್ನು ಉಲ್ಲೇಖಿಸಿತ್ತು. ಎರಡನೇ ಪ್ರೋಮೊ ರಿಲೀಸ್ ಆಗುವುದಕ್ಕೂ ಒಂದು ದಿನ ಮೊದಲು ಆ ಹ್ಯಾಶ್​ಟ್ಯಾಗ್ ತೆಗೆದು ಹಾಕಿತ್ತು. ಜೊತೆಗೆ ರಿಲೀಸ್‌ ಆದ ಎರಡನೇ ಪ್ರೋಮೊದಲ್ಲಿ ಸುದೀಪ್‌ ಹೆಸರು ಮಾಯವಾಗಿತ್ತು. ಸುದೀಪ್‌ ನಿರೂಪಣೆ ಮಾಡದ ಕಾರಣಕ್ಕಾಗಿಯೇ ಅವರ ಹೆಸರನ್ನು ತೆಗೆಯಲಾಗಿದೆ ಎನ್ನುವ ವಾದವಿದೆ.

ಅಸಲಿಯತ್ತೇನು?

ಹೊಸ ಪ್ರೋಮೊದ ಕೊನೆಯಲ್ಲಿ ಹುಡುಗನೊಬ್ಬ ಆ್ಯಂಕರ್‌ ಹೊಸಬ್ರ? ಎನ್ನುವ ಪ್ರಶ್ನೆ ಕೇಳುತ್ತಾನೆ. ಆಗ ಬಿಗ್‌ಬಾಸ್‌ ಗಹಗಹಿಸಿ ನಗುವುದು ಬಿಟ್ಟರೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದು ಕುತೂಹಲ ತಣಿಸುವ ಬದಲು ಇನ್ನಷ್ಟು ಹೆಚ್ಚಿಸಿದೆ. ನಿರೂಪಕರಾಗಿ ಸುದೀಪ್‌ ಮುಂದುವರಿಯಲಿದ್ದಾರೆ. ಸದ್ಯ ಸುದೀಪ್ ಇರುವುದಿಲ್ಲವೇ ಎನ್ನುವ ಪ್ರಶ್ನೆ ಎತ್ತಿದರೆ ಕುತೂಹಲ ಮತ್ತಷ್ಟು ಕೆರಳುತ್ತದೆ ಎನ್ನುವು ಕಾರಣಕ್ಕೆ ವಾಹಿನಿ ಬೇಕಂತಲೇ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದೆ. ಯಾವುದೇ ಕಾರಣಕ್ಕೂ ಸುದೀಪ್‌ ನಿರೂಪಣೆಯಿಂದ ಹಿಂದೆ ಸರಿಯುವುದಿಲ್ಲ ಎನ್ನುವ ವಾದವೂ ಇದೆ. ಒಟ್ಟಿನಲ್ಲಿ ಬಿಗ್‌ಬಾಸ್‌ ಹೊಸ ಸೀಸನ್‌ ಆರಂಭಕ್ಕೂ ಮುನ್ನವೇ ಪ್ರೇಕ್ಷಕರ ಗಮನ ಸೆಳೆದಿದೆ.

ಯಾರೆಲ್ಲ ಇರ್ತಾರೆ?

ಈ ಬಾರಿಯೂ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧರಾದ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಸುಷ್ಮಿತಾ, ಜಗ್ಗಪ್ಪ, ನಿರೂಪಕಿ ಜಾಹ್ನವಿ, ಅಮಿತಾ ಕುಲಾಲ್‌, ಮಾನಸ, ವರುಣ್‌ ಆರಾಧ್ಯ, ಭೂಮಿಕಾ ಬಸವರಾಜ್‌, ಮೋಕ್ಷಿತಾ ಪೈ ಮತ್ತಿತರರು ಸ್ಪರ್ದಿಗಳಾಗಲಿದ್ದಾರೆ ಎನ್ನುವ ಗಾಳಿ ಸುದ್ದಿ ಹಬ್ಬಿದೆ. ಅಧಿಕೃತ ಪಟ್ಟಿ ಇನ್ನಷ್ಟೇ ರಿಲೀಸ್‌ ಆಗಬೇಕಿದೆ.

ಈ ಸುದ್ದಿಯನ್ನೂ ಓದಿ: Bigg Boss Kannada: ಶೀಘ್ರದಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಆರಂಭ; ಪ್ರೋಮೊ ಔಟ್‌