ಜೀ5ನಲ್ಲಿ ತರ್ಲಾ ಸಿನಿಮಾ ಬಿಡುಗಡೆ: ಖ್ಯಾತ ಪಾಕಶಾಲೆಯ ಮಾಂತ್ರಿಕ ತರ್ಲಾ ದಲಾಲ್ ಪಾತ್ರದಲ್ಲಿ ನಟಿಸಿರುವ ಹುಮಾ ಖುರೇಷಿ
ಬೆಂಗಳೂರು: ಭಾರತದ ಮೊದಲ ಸೆಲೆಬ್ರೆಟಿ ಕುಕ್, ಖ್ಯಾತ ಪಾಕಶಾಲೆಯ ಮಾಂತ್ರಿಕ ತರ್ಲಾ ದಲಾಲ್ ಅವರ ಬಯೋಗ್ರಫಿ ಚಿತ್ರವಾದ “ತರ್ಲಾ” ಚಿತ್ರವು ಇದೀಗ ಜೀ5ನಲ್ಲಿ ಬಿಡುಗಡೆಗೊಂಡಿದೆ.
ಖ್ಯಾತ ಬಾಲಿವುಡ್ ನಟಿ ಹುಮಾ ಖುರೇಷಿ ಇದರಲ್ಲಿ ನಟಿಸಿದ್ದಾರೆ. ಪಿಯೂಷ್ ಗುಪ್ತಾ ನಿರ್ದೇಶನದಲ್ಲಿ ಮೂಡಿಬಂದಿರುವ ತರ್ಲಾ ಚಿತ್ರವು ಸಂಪೂರ್ಣ ತರ್ಲ ದಲಾಲ್ ಅವರ ಜೀವನ ಚರಿತ್ರೆ ಒಳಗೊಂಡಿದೆ. ತರ್ಲಾ ಅವರ ಪಾತ್ರವನ್ನು ಹುಮಾ ಖುರೇಷಿ ನಿರ್ವಹಿಸಿದ್ದು, ಜೀ೫ನಲ್ಲಿ ಯಶಸ್ವಿಯಾಗಿ ಓಡುತ್ತಿದೆ.
ಈ ಕುರಿತು ಸಂದರ್ಶನದಲ್ಲಿ ಮಾತನಾಡಿದ ಅವರು, ತರ್ಲಾ ದಲಾಲ್ ಅವರ ಪಾತ್ರದ ಬಗ್ಗೆ ಕೇಳಿದಾಗ ನನಗೆ ಸಿನಿಮಾ ಮಾಡಲು ಆಸಕ್ತಿ ಮೂಡಿತು. ಒಳ್ಳೆ ಪಾತ್ರವಿದ್ದರೆ ನಾನು ಅದನ್ನು ಆಯ್ಕೆ ಮಾಡಿಕೊಳ್ಳುತೇನೆ. ಅದು ಆಟೋ ಬಯೋಗ್ರಫಿಯಾದರೂ ಸರಿಯೇ. ಜನಸಾಮಾನ್ಯರಿಗೆ ತರ್ಲಾ ಎಂಬ ಮಹಿಳೆಯರ ಪ್ರೇರಣೆ ಅಗತ್ಯ. ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಸ್ವತಂತ್ರವಾಗಿ ಜೀವನ ಕಟ್ಟಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾಳೆ. ತರ್ಲಾ ಎಂಬ ಸಾಮಾನ್ಯ ಕುಟುಂಬದ ಮಹಿಳೆಯು ತನ್ನ ಸ್ವಂತ ಕಲೆಯಾದ ಅಡುಗೆ ಮಾಡುವುದರಿಂದಲೇ ಇಡೀ ವಿಶ್ವಾದ್ಯಂತ ಖ್ಯಾತಿಗಳಿಸವುದು ಸಾಮಾನ್ಯದ ಕೆಲಸವನ್ನು. ಅಂತೆಯೇ, ತರ್ಲಾ ದಲಾಲ್ ಅವರು ಕೇವಲ ಅಡುಗೆ ಮಾಡುವ ಕೆಲಸ ಎಂದು ಅವರು ಕೈ ಕಟ್ಟಿ ಕೂರಲಿಲ್ಲ. ಅದನ್ನೇ ಉದ್ಯಮವನ್ನಾಗಿ ಮಾಡಿಕೊಂಡು ಸಾಕಷ್ಟು ಮಹಿಳೆಯರಿಗೂ ಆದರ್ಶಪ್ರಾಯವಾದರು.
ಇವರು ಕೇವಲ ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಇವರ ಪಾಕ ಹೆಚ್ಚು ಖ್ಯಾತಿ ಪಡೆದುಕೊಂಡಿದೆ. ಇವರು ಬರೆದ ಸಾಕಷ್ಟು ಪುಸ್ತಕಗಳು ಜಗತ್ತಿನಾದ್ಯಂತ ಹಲವು ಭಾಷೆಗಳಲ್ಲಿ ಲಭ್ಯವಿದೆ. ಇವರ ಪಾತ್ರವನ್ನು ನಾನು ನೆರವೇರಿಸಿದ್ದು ಅತ್ಯಂತ ಖುಷಿ ನೀಡಿದೆ ಎಂದು ವಿವರಿಸಿದರು.
ನನಗೆ ವೈಯಕ್ತಿಕವಾಗಿ ಅಡುಗೆ ಮಾಡಲು ಬರುವುದಿಲ್ಲ, ಆದರೆ, ಬಗೆ ಬಗೆಯ ಅಡುಗೆಯನ್ನು ಸವಿಯಲು ಇಷ್ಟವಾಗುವುದು. ಅಷ್ಟೇ ಅಲ್ಲ, ದಕ್ಷಿಣ ಭಾರತದ ಮಸಾಲ ದೋಸೆ ಸೇರಿದಂತೆ ಹಲವು ಬಗೆಯ ಖಾದ್ಯಗಳು ನನಗೆ ಅಚ್ಚುಮೆಚ್ಚು ಎಂದು ತಮ್ಮ ಆಹಾರದ ಆಸಕ್ತಿ ಬಗ್ಗೆ ವಿವರಣೆ ನೀಡಿದರು.
ಇನ್ನು, ತರ್ಲಾ ಸಿನಿಮಾ ಕೇವಲ ಮಹಿಳೆಯಷ್ಟೇ ಅಲ್ಲದೆ ಪುರುಷ ಸಹ ನೋಡಬೇಕು. ಇಂದು ಅಡುಗೆ ಎನ್ನುವುದು ಕೇವಲ ಮಹಿಳೆಯರಿಗಷ್ಟೇ ಸೀಮಿತವಾಗಿಲ್ಲ. ಪುರುಷರೂ ಅತ್ಯುತ್ತಮವಾಗಿ ಮಾಡುತ್ತಾರೆ. ಮಹಿಳೆಯರಷ್ಟೇ ಅಲ್ಲದೆ ಪುರುಷರು ಸಹ ಅಡುಗೆ ಕಲಿಯಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.