Saturday, 23rd November 2024

ಕಂಗನಾ ವಿರುದ್ಧ ನ್ಯಾಯಾಂಗ ತನಿಖೆಗೆ ಒತ್ತಾಯ

ನವದೆಹಲಿ: ಬಾಲಿವುಡ್‌ ನಟಿ ಕಂಗನಾ ರನೌತ್‌ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ದೆಹಲಿ ಬಿಜೆಪಿ ನಾಯಕ ಪ್ರವೀಣ್ ಶಂಕರ್ ಕಪೂರ್, ಕಂಗನಾ ವಿರುದ್ಧ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ.

‘ಭಾರತಕ್ಕೆ 2014ರಲ್ಲಿ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ. 1947ರಲ್ಲಿ ಸಿಕ್ಕಿದ್ದು ಭಿಕ್ಷೆ’ ಎಂದು ಬಾಲಿವುಡ್ ನಟಿ ಕಂಗನಾ ಹೇಳಿಕೆ ನೀಡಿದ್ದರು. ಕಂಗನಾರ ಹೇಳಿಕೆಯು ‘ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಮಾಡಿದ ಅವಮಾನ’ ಎಂದು ದೂರಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದ ನನಗೆ, ‘ಭಾರತಕ್ಕೆ 1947 ರಲ್ಲಿ ಸಿಕ್ಕಿದ ಸ್ವಾತಂತ್ರ್ಯ ಭಿಕ್ಷೆ’ ಎಂದಿರುವ ಕಂಗನಾರ ಹೇಳಿಕೆ, ಸ್ವಾತಂತ್ರ್ಯದ ಅತಿದೊಡ್ಡ ದುರುಪಯೋಗ ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಮಾಡಿದ ಅವಮಾನ. ಭಾರತದ ನ್ಯಾಯಾಂಗ ವ್ಯವಸ್ಥೆಯು ಇದನ್ನು ಗಮನಿಸಬೇಕು’ ಎಂದು ಕಪೂರ್ ಟ್ವೀಟ್ ಮಾಡಿದ್ದಾರೆ.

‘ಟ್ವೀಟ್ ಮಾಡಿರುವುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದೂ ತಿಳಿಸಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ‘ಭಾರತಕ್ಕೆ 2014ರಲ್ಲಿ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, 1947 ರಲ್ಲಿ ದೇಶಕ್ಕೆ ಸಿಕ್ಕಿದ್ದು ಭಿಕ್ಷೆ’ ಎಂದು ಹೇಳಿಕೆ ನೀಡಿದ್ದರು.

ಗುರುವಾರ ತಡರಾತ್ರಿ ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌, ‘ಭಿಕ್ಷೆ ಬೇಡಿದವರಿಗೆ ಕ್ಷಮಾದಾನ ಸಿಕ್ಕಿದೆ. ಧೈರ್ಯದಿಂದ ಹೋರಾಡಿದ ವೀರ ರಿಗೆ ಸ್ವಾತಂತ್ರ್ಯ ದೊರೆತಿದೆ’ ಎಂದು ತಿರುಗೇಟು ನೀಡಿತ್ತು.

ಕಂಗನಾ ವಿರುದ್ಧ ಕಿಡಿಕಾರಿದ್ದ ಬಿಜೆಪಿ ಸಂಸದ ವರುಣ್‌ ಗಾಂಧಿ, ‘ಇದು ದೇಶ ವಿರೋಧಿ ಕೃತ್ಯ ಮತ್ತು ಕಂಗನಾ ಅವರನ್ನು ದೇಶ ವಿರೋಧಿ’ ಎನ್ನಬಹುದು ಎಂದು ತಿಳಿಸಿದ್ದರು.