ಚೆನ್ನೈ: ಹಾಸ್ಯನಟ ವಡಿವೇಲು ಅವರ ಕಾಮಿಡಿ ನೋಡಿ ಕೋಮಾದಲ್ಲಿದ್ದ ಹುಡುಗಿ ಮತ್ತೆ ಸಹಜ ಸ್ಥಿತಿಗೆ ಬಂದಿದ್ದಾಳೆ.
ವಡಿವೇಲು ಕಾಮಿಡಿ ನೋಡಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಿಲ್ಲಿಸಿದ ಘಟನೆಯೂ ಇದೆ.
ವಡಿವೇಲು ಅವರು ತಮಿಳು ಸಿನಿಮಾ ರಂಗದ ಖ್ಯಾತ ಹಾಸ್ಯ ಕಲಾವಿದ. ಇವರು ಒಂದು ಕಾಲದಲ್ಲಿ ತಮಿಳು ಹಾಸ್ಯಲೋಕದ ಅಧಿಪತಿಯಾಗಿದ್ದರು.
11 ವರ್ಷದ ಬಾಲಕಿ ಕೋಮಾದಲ್ಲಿದ್ದಾಗ, ಈ ಹುಡುಗಿಗೆ ಯಾವುದರ ಮೇಲೆ ತುಂಬಾ ಆಸಕ್ತಿ ಇದೆ ಎಂದು ಆಕೆಯ ಪಾಲಕರನ್ನು ವೈದ್ಯರು ಕೇಳಿದ್ದರು. ತಕ್ಷಣ ಆಕೆಯ ಪಾಲಕರು ತಮ್ಮ ಮಗಳು ಹೆಚ್ಚಾಗಿ ವಡಿವೇಲು ಅವರ ಕಾಮಿಡಿಯನ್ನು ನೋಡಲು ಇಷ್ಟಪಡುತ್ತಾಳೆ ಎಂದು ಹೇಳಿದರು.
ತಕ್ಷಣ ಹಾಸ್ಯ ದೃಶ್ಯಗಳನ್ನು ತೋರಿಸುವಂತೆ ವೈದ್ಯರು ಸಲಹೆ ನೀಡಿದರು. ನಂತರ, ವಡಿವೇಲು ಅವರ ಹಾಸ್ಯ ದೃಶ್ಯಗಳನ್ನು ಅವರ ಪಾಲಕರು ತೋರಿಸಿದಾಗ, ಹಾಸ್ಯ ದೃಶ್ಯಗಳನ್ನು ನೋಡಿದ ಬಾಲಕಿ ಕೋಮಾದಿಂದ ಚೇತರಿಸಿಕೊಂಡಿತು. ಕೋಮಾದಿಂದ ಚೇತರಿಸಿಕೊಂಡ ನಂತರ ಮಗುವಿನ ಪಾಲಕರು ವಡಿವೇಲು ಅವರನ್ನು ನೋಡಿ ಧನ್ಯವಾದ ಹೇಳಿದ್ದಾರೆ. ಈ ಘಟನೆಯನ್ನು ಕೇಳಿ ವಡಿವೇಲು ಭಾವುಕರಾದರು ಮತ್ತು ಓರ್ವ ಕಲಾವಿದನಿಗೆ ಇದಕ್ಕಿಂತ ಹೆಚ್ಚಿನದನ್ನು ಇನ್ನೇನು ಬಯಸಲು ಸಾಧ್ಯ ಎಂದರು.
ಅದೇ ರೀತಿ, ತಮಿಳುನಾಡಿನ ಥೇಣಿಯಲ್ಲಿ ಮಹಿಳೆಯೊಬ್ಬರು ತನ್ನ ಪತಿ ತನಗೆ ಅವಮಾನ ಮಾಡಿದ ಕಾರಣ, ಹತಾಶೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆಕೆ ಆತ್ಮಹತ್ಯೆ ಮಾಡಿಕೊಲ್ಳುವುದನ್ನು ವಡಿವೇಲು ಕಾಮಿಡಿ ತಡೆದಿದೆ ಎಂದು ತಿಳಿಸಿದರು. ಏಕೆಂದರೆ, ಮಹಿಳೆ ನೇಣು ಬಿಗಿದುಕೊಳ್ಳಲು ಮುಂದಾದಾಗ, ಟಿವಿಯಲ್ಲಿ ವಡಿವೇಲು ಕಾಮಿಡಿ ದೃಶ್ಯ ಬರುತ್ತಿತ್ತು. ಅದನ್ನು ನೋಡಿದ ಮಹಿಳೆ ತನ್ನ ಆತ್ಮಹತ್ಯೆ ನಿರ್ಧಾರವನ್ನು ಕೈಬಿಟ್ಟಿದ್ದಾರೆ.