Friday, 13th December 2024

Vickypedia: ಒಂಟಿ ಹುಡುಗ-ಹುಡುಗಿಯರ ಬದುಕು-ಬವಣೆ ಆಯ್ತು; ಇದೀಗ Married Guys ಕಥೆ-ವ್ಯಥೆಯೊಂದಿಗೆ ಬಂದ ವಿಕ್ಕಿಪೀಡಿಯ ವಿಕಾಸ್‌

Vickypedia

ಬೆಂಗಳೂರು: ಸದಾ ಒಂದಲ್ಲ ಒಂದು ಕಂಟೆಂಟ್‌ ಮೂಲಕ ಇನ್‌ಸ್ಟಾಗ್ರಾಮ್‌ ಬಳಕೆದಾರರ ಗಮನ ಸೆಳೆಯುವ ಕಂಟೆಂಟ್ ಕ್ರಿಯೇಟರ್ ವಿಕ್ಕಿಪೀಡಿಯಾ (Vickypedia) ಖ್ಯಾತಿಯ ವಿಕಾಸ್‌ (Vikas) ಅವರ ಮತ್ತೊಂದು ವಿಡಿಯೊ ವೈರಲ್‌ ಆಗಿದೆ. ವಿವಿಧ ಭಾಷೆಗಳ ಜನಪ್ರಿಯ ಹಾಡುಗಳಿಗೆ ಕನ್ನಡದ ಲಿರಿಕ್ಸ್‌ ಬರೆದು ಹೊಸದಾಗಿ ಪ್ರೆಸೆಂಟ್‌ ಮಾಡುವ ಅವರು ಈ ಬಾರಿಯೂ ತಮ್ಮ ಕ್ರಿಯೇಟ್‌ ಐಡಿಯಾ ಮೂಲಕ ಹವಾ ಎಬ್ಬಿಸಿದ್ದಾರೆ. ಮುದುವೆಯಾದ ಯುವಕ ಕಥೆ-ವ್ಯಥೆಯನ್ನು ವಿಭಿನ್ನವಾಗಿ ಪ್ರಸ್ತುತಪಡಿಸಿದ್ದಾರೆ (Viral Video).

ʼಮ್ಯಾರಿಡ್‌ ಗೈಸ್‌ ಮ್ಯಾರಿಡ್‌ ಗೈಸ್‌ʼ (Married Guys Married Guys) ಸದ್ಯ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿರುವ ವಿಕಾಸ್‌ ಅವರ ಹೊಸ ಹಾಡು. ʼಜಿಂಗಲ್‌ ಬೆಲ್‌ʼ ರೈಮ್ಸ್‌ನ ಟ್ಯೂನ್‌ಗೆ ಈ ಹಾಡನ್ನೂ ರಚಿಸಲಾಗಿದೆ. ಮದುವೆಯಾದ ಯುವಕರು ಎದುರಿಸುತ್ತಿರುವ ಸಮಸ್ಯೆ, ಅತ್ತೆ-ಸೊಸೆ ಜಗಳ, ಇವರ ಪೈಕಿ ಯಾರನ್ನು ಬೆಂಬಲಿಸಬೇಕು ಎನ್ನುವ ಗೊಂದಲ ಹೀಗೆ ನಿತ್ಯ ಜೀವನದಲ್ಲಿ ಎದುರಾಗುವ ಘಟನೆಗಳನ್ನೇ ಅವರು ಹಾಡಾಗಿಸಿದ್ದಾರೆ. ಸಜಿತ್‌ ಕ್ಲಾರೆ ಸಂಗೀತ ನೀಡಿ ಹಾಡಿದ್ದಾರೆ. ಜತೆಗೆ ತೇಜಸ್‌ ಧ್ವನಿಗೂಡಿಸಿದ್ದಾರೆ. ಅನೂಪ್‌ ಸುಧೀ ಮತ್ತು ವಿಕಾಸ್‌ ರಚಿಸಿದ್ದು, ತೇಜಸ್‌ ನಿರ್ದೇಶಿಸಿದ್ದಾರೆ. ವಿವೇಕ್‌ ಕ್ಯಾಮೆರಾ ಮತ್ತು ಎಡಿಟ್‌ ನಿರ್ವಹಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಈ ತಂಡ ಒಂಟಿ ಹುಡುಗ-ಹುಡುಗಿಯರ ಜೀವನವನ್ನು ಹಾಡಾಗಿಸಿತ್ತು. ʼಸಿಂಗಲ್ಸ್‌ ಬಾಯ್ಸ್‌, ಸಿಂಗಲ್‌ ಬಾಯ್ಸ್‌ʼ ಮತ್ತು ʼಸಿಂಗಲ್ ಗರ್ಲ್ಸ್, ಸಿಂಗಲ್ ಗರ್ಲ್ಸ್ʼ ಹಾಡು ಗಮನ ಸೆಳೆದಿತ್ತು. ಇದನ್ನು ಕೂಡ ʼಜಿಂಗಲ್‌ ಬೆಲ್‌ʼ ರೈಮ್ಸ್‌ನ ಟ್ಯೂನ್‌ನಲ್ಲೇ ಪ್ರಸ್ತುತಪಡಿಸಲಾಗಿದೆ.

ತಮಾಷೆ ಮೂಲಕ ಪಾಠ

ತಮಾಷೆ ಮೂಲಕವೇ ನೀತಿ ಪಾಠ ಬೋಧಿಸುವುದು ವಿಕ್ಕಿಪೀಡಿಯಾ ಅವರ ವೈಶಿಷ್ಟ್ಯ. ಬೆಂಗಳೂರಿನಲ್ಲಿ ನೆರೆ ಕಾಣಿಸಿಕೊಂಡಾಗ ʼಕೃಷ್ಣಂ ಪ್ರಯಣ ಸಖಿʼ ಚಿತ್ರದ ʼದ್ವಾಪರಾ ದಾಟುತಾʼ ಧಾಟಿಯಲ್ಲಿ ʼಮೋರಿ ಉಕ್ಕೈತೆʼ ಹಾಡು ರಚಿಸಿದ್ದರು. ಜತೆಗೆ ದೀಪಾವಳಿ ಮತ್ತು ದಿವಾಳಿ ವ್ಯತ್ಯಾಸವನ್ನು ಬಹಳ ಮಾರ್ಮಿಕವಾಗಿ ತಿಳಿಸಿದ್ದರು. ಮಾತ್ರವಲ್ಲ ಕರ್ನಾಟಕ ರಾಜ್ಯೋತ್ಸವದಂದು ʼಆಪ್ತಮಿತ್ರʼ ಚಿತ್ರದ ನಾಗವಲ್ಲಿ ದೃಶ್ಯವನ್ನು ಬಳಸಿ ಕನ್ನಡದ ಮಹತ್ವ ಸಾರಿದ್ದರು. ಹೀಗೆ ಪ್ರತಿ ಬಾರಿಯೂ ಸಂದರ್ಭಕ್ಕೆ ತಕ್ಕಂತೆ ವಿವಿಧ ಸನ್ನಿವೇಶ ಬಳಿಸಿ ವಿಶಿಷ್ಟ ವಿಡಿಯೊ ಮೂಲಕ ಅವರು ನೋಡುಗರ ಗಮನ ಸೆಳೆಯುತ್ತಾರೆ.

ʼನಾನು ನಂದಿನಿʼ ಮೂಲಕ ಜನಪ್ರಿಯತೆ

ಇನ್‌ಸ್ಟಾಗ್ರಾಮ್‌ನಲ್ಲಿ ಜನಪ್ರಿಯರಾಗಿದ್ದ ವಿಕ್ಕಿಪೀಡಿಯಾ ಅವರನ್ನು ʼನಾನು ನಂದಿನಿʼ ಹಾಡು ರಾತ್ರೋರಾತ್ರಿ ಇನ್ನಷ್ಟು ಎತ್ತರಕ್ಕೆ ಏರಿಸಿತ್ತು. ಈ ಹಾಡು ಗೊತ್ತಿಲ್ಲದ ಯುವ ಜನತೆ ಬಹುಶಃ ಕರ್ನಾಟಕದಲ್ಲಿ ಸಿಗಲಾರರು. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಈ ಹಾಡು ಮಾಡಿದ ಮೋಡಿ ಅಂತಹದ್ದು. ಈ ಹಾಡಿಗೆ ಇನ್ನಷ್ಟು ಮಂದಿ ರೀಲ್ಸ್‌ ಮಾಡುವ ಮೂಲಕ ಅದರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಒಟ್ಟಿನಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಹಾಡು, ವಿಡಿಯೊ ಮಾಡುವ ಮೂಲಕ ವಿಕ್ಕಿಪೀಡಿಯಾ ಲಕ್ಷಾಂತರ ವ್ಯೂವ್ಸ್‌ ಪಡೆದುಕೊಳ್ಳುತ್ತಿದ್ದಾರೆ. ಅವರ ವಿಡಿಯೊಗಾಗಿ ಕಾದು ಕೂರುವವರಿದ್ದಾರೆ ಎಂದರೆ ನೀವು ನಂಬಲೇಬೇಕು.

ಈ ಸುದ್ದಿಯನ್ನೂ ಓದಿ: Vickypedia: ಒಂಟಿ ಹುಡುಗ-ಹುಡುಗಿಯರ ಆಂತಮ್‌ ವಿಕ್ಕಿಪೀಡಿಯ ವಿಕಾಸ್‌ನ ಈ ಸಾಂಗ್ಸ್‌; ವೈರಲ್‌ ಹಾಡು ಕೇಳಿದ್ದೀರಾ?