Friday, 13th December 2024

Vidyapathi Movie: ‘ವಿದ್ಯಾಪತಿ’ಗೆ ನವರಸ ನಾಯಕ ಸಾಥ್‌; ಜಗ್ಗೇಶ್ ಧ್ವನಿಯಲ್ಲಿ ‘ಅಯ್ಯೋ ವಿಧಿಯೇ’ ಹಾಡು ಕೇಳಿ

Vidyapathi Movie

ಬೆಂಗಳೂರು: ಡಾಲಿ‌ ಧನಂಜಯ್ (Daali Dhananjaya) ನಿರ್ಮಾಣದ ʼವಿದ್ಯಾಪತಿʼ ಸಿನಿಮಾ (Vidyapathi Movie) ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ನಿರೀಕ್ಷೆ ಹುಟ್ಟಿಸಿದೆ. ಟೀಸರ್, ಮೇಕಿಂಗ್‌ನಿಂದಲೇ ಗಮನಸೆಳೆದಿರುವ ಈ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಕರಾಟೆ ತರಗತಿಯಲ್ಲಿ ವಿದ್ಯಾಪತಿಯ ತಲೆಹರಟೆಯ ಹಾಡಿಗೆ ನವರಸ ನಾಯಕ ಜಗ್ಗೇಶ್ (Jaggesh) ಧ್ವನಿಯಾಗಿದ್ದಾರೆ. ‘ಅಯ್ಯೋ ವಿಧಿಯೇ’ ಎಂದು ಶುರುವಾಗುವ ಹಾಡಿಗೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಡಾಸ್ಮೋಡ್ ಸಂಗೀತ ಸಖತ್ ಕಿಕ್ ಕೊಡುತ್ತದೆ. ಸಖತ್ ಫನ್ ಆಗಿ‌ ಮೂಡಿಬಂದಿರುವ ಗೀತೆಯಲ್ಲಿ ರಂಗಾಯಣ ರಘು ಕೂಡ ಹೆಜ್ಜೆ ಹಾಕಿರುವುದು ವಿಶೇಷ.

‘ಟಗರು ಪಲ್ಯ’ ಚಿತ್ರದ ಮೂಲಕ ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ‘ಉಪಾಧ್ಯಕ್ಷ’ನ ಬೆಡಗಿ ಮಲೈಕಾ ವಸೂಪಾಲ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಕರಾಟೆ ಕಿಂಗ್ ಗೆಟಪ್‌ನಲ್ಲಿ ನಾಗಭೂಷಣ್ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ಮಾಸ್ಟರ್ ಆಗಿ ಹಿರಿಯ ನಟ ರಂಗಾಯಣ ರಘು ಅಭಿನಯಿಸಿದ್ದಾರೆ.

ಈ ಹಿಂದೆ ʼಇಕ್ಕಟ್ʼ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ʼವಿದ್ಯಾಪತಿ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಜತೆಗೆ ಸಿನಿಮಾವನ್ನು ಇವರೇ ಬರೆದು, ಸಂಕಲನದ ಜವಾಬ್ದಾರಿಯನ್ನೂ ತಾವೇ ಹೊತ್ತುಕೊಂಡಿದ್ದಾರೆ. ಚಿತ್ರಕ್ಕೆ ಲವಿತ್ ಅವರ ಛಾಯಾಗ್ರಹಣ ಇದೆ. ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆ್ಯಕ್ಷನ್ ವಿದ್ಯಾಪತಿ ಸಿನಿಮಾಗಿದೆ. ʼಟಗರು ಪಲ್ಯʼ ಸಿನಿಮಾದ ಬಳಿಕ ಧನಂಜಯ್ ನಿರ್ಮಿಸುತ್ತಿರುವ ಸಿನಿಮಾ ‘ವಿದ್ಯಾಪತಿ’. ಚಿತ್ರದಲ್ಲಿ ಆ್ಯಕ್ಷನ್ ಜತೆಗೆ ಹಾಸ್ಯವೂ ಇರಲಿದೆ.

ಸದ್ಯ ಡಾಲಿ ಧನಂಜಯ್‌ ಕನ್ನಡದ ಜತೆಗೆ ತೆಲುಗಿನಲ್ಲಿಯೂ ನಟಿಸುತ್ತಿದ್ದಾರೆ. ಬಹು ನಿರೀಕ್ಷಿತ, ಅಲ್ಲು ಅರ್ಜುನ್‌-ರಶ್ಮಿಕಾ ಮಂದಣ್ಣ ನಟನೆಯ ʼಪುಷ್ಪ 2ʼ ಚಿತ್ರದಲ್ಲಿ ಧನಂಜಯ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಾಲಿ ರೆಡ್ಡಿ ಪಾತ್ರದಲ್ಲಿ ಅವರು ಮೋಡಿ ಮಾಡಲಿದ್ದು, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಡಿ. 5ರಂದು ತೆರೆಗೆ ಬರಲಿದೆ. ಇದರ ಜತೆಗೆ ಧನಂಜಯ್‌ ಹಲವು ಕನ್ನಡ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ʼಉತ್ತರಕಾಂಡʼ, ʼಅಣ್ಣ ಫ್ರಂ ಮೆಕ್ಸಿಕೊʼ, ʼನಾಡಪ್ರಭು ಕೆಂಪೇಗೌಡʼ ಮತ್ತು ʼಜಿಂಗೊʼ ಸಿನಿಮಾಗಳನ್ನು ಅವರು ಒಪ್ಪಿಕೊಂಡಿದ್ದಾರೆ.

ಇದರ ಜತೆಗೆ ಅವರು ತಾವು ಮದುವೆಯಾಗುತ್ತಿರುವ ಸುದ್ದಿಯನ್ನೂ ಘೋಷಿಸಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಡಾಲಿ ತನ್ನ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ. ಭಾವಿ ಪತ್ನಿ ಜೊತೆಗಿನ ಸುಂದರವಾದ ಫೋಟೊ ಹಾಗೂ ವಿಡಿಯೊ ಹಂಚಿಕೊಳ್ಳುವ ಮೂಲಕ ಧನಂಜಯ್‌ ಮದುವೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಡಾಲಿ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಧನ್ಯತಾ. ಅವರು ವೃತ್ತಿಯಲ್ಲಿ ಗೈನಕಾಲಾಜಿಸ್ಟ್. ಚಿತ್ರದುರ್ಗ ಮೂಲದ ಧನ್ಯತಾ ಅಪ್ಪಟ ಕನ್ನಡತಿ, ಓದಿದ್ದು ಮೈಸೂರಿನಲ್ಲಿ. ಫೆ. 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮತ್ತು ಧನ್ಯತಾ ಮದುವೆ ನಡೆಯಲಿದೆ.

ಇದನ್ನೂ ಓದಿ: Daali Dhananjaya: ಡಾಲಿ ಧನಂಜಯ್-ಸತ್ಯದೇವ್ ನಟನೆಯ ‘ಜೀಬ್ರಾ’ ಟೀಸರ್ ರಿಲೀಸ್; ಶಿವಣ್ಣ ಸಾಥ್‌