Wednesday, 11th December 2024

‘ವಿಶ್ವರೂಪಿಣಿ ಹುಲಿಗೆಮ್ಮ’ ಸಿನಿಮಾ ಚಿತ್ರೀಕರಣಕ್ಕೆ ಚಾಲನೆ

ಕೊಪ್ಪಳ: ತಾಲೂಕಿನ ಹುಲಿಗಿ ಹುಲಿಗೆಮ್ಮದೇವಿ ಸನ್ನಿಧಿಯಲ್ಲಿ ‘ವಿಶ್ವರೂಪಿಣಿ ಹುಲಿಗೆಮ್ಮ’ ಸಿನಿಮಾ ಚಿತ್ರೀಕರಣಕ್ಕೆ ಮುಹೂರ್ತ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.

ನಿರ್ದೇಶಕ ಓಂ ಸಾಯಿಪ್ರಕಾಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಮುಖ್ಯಪಾತ್ರ ನಿರ್ವಹಿಸಲಿದ್ದಾರೆ.

25 ವರ್ಷಗಳ ಸಿನಿ ಜರ್ನಿಯಲ್ಲಿ ಮೊದಲ ಬಾರಿಗೆ ಭಕ್ತಿ ಪ್ರಧಾನ ಚಿತ್ರದಲ್ಲಿ ನಟಿಸುತ್ತಿದ್ದು, ‘ಶಕ್ತಿ ದೇವತೆ ಹುಲಿಗೆಮ್ಮ’ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಹೊಸಪೇಟೆ ಬಿಜೆಪಿ ನಾಯಕಿ ಕವಿತಾ ಸಿಂಗ್ ಮುಹೂರ್ತಕ್ಕೆ ಚಾಲನೆ ನೀಡಿದರು.

ನಿರ್ದೇಶಕ ಓಂ ಸಾಯಿಪ್ರಕಾಶ್ ಮಾತನಾಡಿ, ಚಿತ್ರದ ಕುರಿತು ಸಾಕಷ್ಟು ನಿರೀಕ್ಷೆ ವ್ಯಕ್ತಪಡಿಸಿ ದರು. ಕನ್ನಡ ಚಿತ್ರರಂಗದಲ್ಲಿ ನಾನು ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ನನ್ನ ಬಹುತೇಕ ಚಿತ್ರಗಳನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರವು ಶಕ್ತಿ ದೇವತೆ ಹುಲಿಗೆಮ್ಮ ದೇವಿಯ ಮಹಾತ್ಮೆ ಸಾರುವ ಭಕ್ತಿಪೂರ್ವಕ ಚಿತ್ರ. ಅನುಭವಿ ಕಲಾವಿದರ ತಂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಭರವಸೆ ಇದೆ ಎಂದರು.

ನಟಿ ಪ್ರಿಯಾಂಕಾ ಉಪೇಂದ್ರ ಮಾತನಾಡಿ, ನಾನು ಚಿತ್ರರಂಗಕ್ಕೆ ಕಾಲಿಟ್ಟು ಇಪ್ಪತೈದು ವರ್ಷ ಕಳೆದಿವೆ. ಆದರೆ, ಭಕ್ತಿ ಪ್ರಧಾನ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು. ನಟನೆ ಸವಾಲು‌ ಎನಿಸುತ್ತಿದೆ. ಆದರೆ ಇದು ವಿಭಿನ್ನ ಪಾತ್ರವನ್ನೊಳಗೊಂಡ ಚಿತ್ರ.

ಕನ್ನಡಿಗರು ಈ ಚಿತ್ರವನ್ನು ಎಷ್ಟರ ಮಟ್ಟಿಗೆ ಯಶಸ್ವಿಗೊಳಿಸುತ್ತಾರೆ ಎಂಬ ಕುತೂಹಲ ಇದೆ. ತಾಯಿ ಹುಲಿಗೆಮ್ಮ ದೇವಿಯ ಆಶೀರ್ವಾದದಿಂದ ಚಿತ್ರ ಯಶಸ್ವಿಯಾಗಲಿದೆ ಎಂದರು.

ನಟಿ ಪ್ರಿಯಾಂಕರನ್ನು ನೋಡಲು ನೂರಾರು ಅಭಿಮಾನಿಗಳು ನೆರೆದಿದ್ದರು.