Saturday, 5th October 2024

ವಂಡರ್‌ಲಾದಲ್ಲಿ ಹೊಸ ರೈಡ್‌ಗೆ ಚಾಲನೆ ನೀಡಿದ ನಟ ಡಾರ್ಲಿಂಗ್‌ ಕೃಷ್ಣ

ಬೆಂಗಳೂರು: ಮನರಂಜನಾ ತಾಣವಾದ ವಂಡರ್‌ಲಾ ಜನರನ್ನು ಇನ್ನಷ್ಟು ರಂಜಿಸಲು ಹೊಸ ರೈಡ್‌ನನ್ನು ಪರಿಚಯಿಸಿದೆ.

ಗುರುವಾರ ನಟ ಡಾಲಿಂಗ್‌ ಕೃಷ್ಣ “ಟಾರಾಂಟುಲಾ” ಹೆಸರಿನ ಈ ಹೊಸ ರೈಡ್‌ನನ್ನು ಉದ್ಘಾಟಿಸಿ, ಒಂದು ಸುತ್ತಿನ ರೈಡ್‌ ನಡೆಸಿ ಅದರ ಅನುಭವ ಪಡೆದರು.

ಬಳಿಕ ಮಾತನಾಡಿದ ಅವರು, ವಂಡರ್‌ಲಾ ಪರಿಚಯಿಸಿರುವ ಹೊಸ ರೈಡ್‌ ಹೆಚ್ಚು ಮಜ ನೀಡಿತು. ಜನರಿಗೆ ಥ್ರಿಲ್‌ ನೀಡುವ ರೈಡ್‌ ಎಂದರೆ ಆಸಕ್ತಿ ಹೆಚ್ಚು. ಅದರಲ್ಲೂ ಬೇಸಿಗೆ ರಜೆಯಾದ್ದರಿಂದ ಮಕ್ಕಳು ಹೆಚ್ಚು ಖುಷಿಯಿಂದ ವಂಡರ್‌ ಲಾಗೆ ಭೇಟಿ ನೀಡುತ್ತಾರೆ.
ಅಂಥವರಿಗೆ ಈ ರೈಡ್‌ ಇಷ್ಟವಾಗಲಿದೆ ಎಂದರು.

ವಂಡರ್‌ಲಾ ಎಂಡಿ ಅರುಣ್‌ ಕೆ. ಚಿಟ್ಟಿಲಪಲ್ಲಿ ಮಾತನಾಡಿ, ಜನರಿಗೆ ಇಷ್ಟವಾಗುವ ರೀತಿ ಟಾರಾಂಟುಲಾ ರೈಡ್‌ನನ್ನು ವಿನ್ಯಾಸ ಗೊಳಿಸಿದ್ದು, ಜನರಿಗೆ ಖಂಡಿತ ಈ ಹೈ ಥ್ರಿಲ್ ರೈಡ್‌ ಇಷ್ಟವಾಗಲಿದೆ. ಏಪ್ರಿಲ್‌ 9 ರಿಂದ ಮೇ 31ರವರೆಗೆ “ಸಮ್ಮರ್‌ ಲಾ” ಉತ್ಸವ ವನ್ನು ವಂಡರ್‌ಲಾ ನಡೆಸುತ್ತಿದೆ. ವಂಡರ್‌ಲಾದಲ್ಲಿರುವ 62 ರೈಡ್‌ಗಳು ನಿಮ್ಮನ್ನು ಇನ್ನಷ್ಟು ಮನರಂಜಿಸಲಿದೆ ಎಂದರು.

ಹೊಸ ಗೇಮ್‌ನ ವಿಶೇಷತೆ ಏನು?: ಟಾರಾಂಟುಲಾ ಎಂದರೆ ಜೇಡರ ಬಲೆ, ಈ ಬಲೆಯಲ್ಲಿ ಸಿಲುಕಿದರೆ ಆಗುವ ಅನುಭವವನ್ನು ಟಾರಾಂಟುಲಾ ರೈಡ್‌ ನೀಡಲಿದೆ. ಈ ರೈಡ್ ಪೂರ್ಣವಾಗಿ ಪಿಎಲ್‌ಸಿ(ಪ್ರೋಗ್ರಾಮಬಲ್ ಲಾಜಿಕ್ ಕಂಟ್ರೋಲರ್) ನಿಯಂತ್ರಣ ದಲ್ಲಿದೆ ಮತ್ತು ಸೇಫ್ಟಿ ಬೆಲ್ಟ್‌ನೊಂದಿಗೆ ಸೇಫ್ಟಿ ಶೌಲ್ಡರ್ ಲಾಕ್‌ಗಳು ಸುರಕ್ಷಿತ ರೈಡ್ ನೀಡುತ್ತವೆ. ಇದು ಒಮ್ಮೆಲೆ ೩೨ ಜನರನ್ನು ಹೊತ್ತೊಯ್ಯಲಿದೆ.