Friday, 13th December 2024

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ನಟ ಯಶ್‌ ಭೇಟಿ

ಮಂಗಳೂರು: ಸ್ಯಾಂಡಲ್‌ವುಡ್‌ ನಟ ರಾಕಿಂಗ್ ಸ್ಟಾರ್ ಯಶ್ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಅವರು ಬಳಿಕ, ಧರ್ಮಾಧಿ ಕಾರಿ ಡಾ.ಡಿ.ವೀರೇಂದ್ರ ಹೆಗ್ಗೆಡೆ ಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಇದೇ ಏ.14ರಂದು ಬಿಡುಗಡೆಯಾಗಲಿರುವ ಕೆ.ಜಿ.ಎಫ್.2 ಚಿತ್ರದ ಹಿನ್ನೆಲೆ‌ ಮಂಜುನಾಥ ಸ್ವಾಮಿ ದರ್ಶನ ಪಡೆದು ಆಶೀರ್ವಾದ ಪಡೆದಿದ್ದಾರೆ.

ಯಶ್ ಜತೆ ಕೆ.ಜಿ.ಎಫ್.2 ನಿರ್ಮಾಪಕ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಂಗದೂರು ಇದ್ದರು. ಇತ್ತೀಚೆಗಷ್ಟೇ ಯಶ್ ಹಾಗೂ ಕೆ.ಜಿ.ಎಫ್.2 ಚಿತ್ರತಂಡ ದೇಶದ ಮುಂಬೈ, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ಭಾಗಗಳಿಗೆ ತೆರಳಿ ಪ್ರಚಾರ ಕಾರ್ಯ ನಡೆಸಿತ್ತು.

ಚಿತ್ರ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಆ ಹಿನ್ನೆಲೆಯಲ್ಲಿ ದೇಗುಲಗಳಿಗೆ ಭೇಟಿ‌ ನೀಡಿದ್ದಾರೆ.