Monday, 14th October 2024

Younes Zarou‌: ಬೆಂಗಳೂರಲ್ಲಿ ಬಂಧನವಾಗಿದ್ದ ಜರ್ಮನ್ ಯೂಟ್ಯೂಬರ್ ಯೂನೆಸ್‌ ಜರೂ, ಪುನೀತ್‌ ರಾಜ್‌ಕುಮಾರ್‌ ಅಭಿಮಾನಿ!

Puneeth Rajkumar

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಬಂಧನವಾಗಿದ್ದ ಜರ್ಮನಿಯ ಖ್ಯಾತ ಯೂಟ್ಯೂಬರ್ ಯೂನೆಸ್‌ ಜರೂ(Younes Zarou‌), ಕನ್ನಡದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಅಭಿಮಾನಿ ಎಂದು ತಿಳಿದುಬಂದಿದೆ. ಜನರಿಗೆ ವಿವಿಧ ಪ್ರಶ್ನೆಗಳನ್ನು ಕೇಳಿ, ಸರಿಉತ್ತರ ನೀಡಿದವರಿಗೆ ದುಬಾರಿ ಬೆಲೆಯ ಐಫೋನ್​ ಗಿಫ್ಟ್​ ನೀಡುತ್ತಿದ್ದ ಯ್ಯೂಟೂಬರ್, ಬೆಂಗಳೂರಿನ ಎಂಜಿ ರಸ್ತೆಗೆ ಇತ್ತೀಚೆಗೆ ಆಗಮಿಸಿದ್ದಾಗ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಫೋಟೊ ಬಿಡುಗಡೆ ಮಾಡಿದ್ದರು.

ಖ್ಯಾತ ಇನ್​ಸ್ಟಾಗ್ರಾಮ್ ಸ್ಟಾರ್, ಜರ್ಮನ್‌ ಕಂಟೆಂಟ್‌ ಕ್ರಿಯೇಟರ್‌ ಯೂನೆಸ್‌ ಜರೂ ಎಂಜಿ ರಸ್ತೆಗೆ ಬಂದಿದ್ದ ಹಿನ್ನೆಲೆಯಲ್ಲಿ ಆ ವಿಚಾರ ತಿಳಿದು ನೂರಾರು ಅಭಿಮಾನಿಗಳು ನಡು ರಸ್ತೆಯಲ್ಲಿಯೇ ಗುಂಪು ಸೇರಿದ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಅನುಮತಿ ಪಡೆಯದೆ ಜನರ ಗುಂಪು ಸೇರಿಸಿದ್ದ ಹಿನ್ನೆಲೆ ಯೂಟ್ಯೂಬರ್‌ನ ಅಶೋಕನಗರ ಪೊಲೀಸರು ವಶಕ್ಕೆ ಪಡೆದಿದ್ದರು.

ಪೊಲೀಸರು ವಶಕ್ಕೆ ಪಡೆದ ಬಳಿಕ ಹೊಯ್ಸಳ ವಾಹನದ ಒಳಗೆ ಕೂತು ವಿಡಿಯೊ ಮಾಡಿದ್ದ ಯೂನೆಸ್‌ ಜರೂ, ಸ್ಟೇಷನ್ ಒಳಗಿದ್ದ ಫೋಟೊ ಹಾಕಿ ತೊಂದರೆಯಲ್ಲಿದ್ದಿನಿ ಎಂದು ಮೆಸೇಜ್ ಕಳಿಸಿದ್ದರು. ಬಳಿಕ ಅವರಿಗೆ ಎಚ್ಚರಿಕೆ ನೀಡಿ ಪೊಲೀಸರು ಬಿಟ್ಟು ಕಳಿಸಿದ್ದರು.

ಯೂನೆಸ್ ಜರೂ, ಬೇರೆ ಬೇರೆ ದೇಶಗಳಿಗೆ ತೆರಳಿ ಜನರಿಗೆ ಸರ್ಪ್ರೈಸ್ ಗಿಫ್ಟ್​ಗಳನ್ನು ಕೊಡುತ್ತಾರೆ. ವಿವಿಧ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಸರಿಯಾದ ಉತ್ತರ ನೀಡಿದವರಿಗೆ ಬೆಲೆ ಬಾಳುವ ಗಿಫ್ಟ್‌ಗಳನ್ನು ನೀಡಿ, ಅದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡುತ್ತಾರೆ. ಇವರಿಗೆ ಇನ್‌ಸ್ಟಾಗ್ರಾಂನಲ್ಲಿ 15 ಮಿಲಿಯನ್‌(1.5 ಕೋಟಿ) ಫಾಲೋವರ್ಸ್‌ ಇದ್ದಾರೆ.