Monday, 14th October 2024

Zaid Khan: ಝೈದ್ ಖಾನ್‌ಗೆ ಜೋಡಿಯಾದ ರಚಿತಾ ರಾಮ್, ಮಲೈಕಾ; ‘ಕಲ್ಟ್’ ಚಿತ್ರಕ್ಕೆ ಚಾಲನೆ

ಬೆಂಗಳೂರು: ʼಬನಾರಸ್ʼ ಚಿತ್ರದ ನಂತರ ಝೈದ್ ಖಾನ್ (Zaid Khan) ನಾಯಕರಾಗಿ ನಟಿಸುತ್ತಿರುವ ಹಾಗೂ ಈ ವರ್ಷದ ಹಿಟ್ ʼಉಪಾಧ್ಯಕ್ಷʼ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ʼಕಲ್ಟ್ʼ (Cult) ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಗೌರಿಹಬ್ಬದಂದು ನೆರವೇರಿತು.

ಮೊದಲು ಬಿಡುಗಡೆಯಾದ ಪೋಸ್ಟರ್‌ನಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಬಗ್ಗೆ ನಿರೀಕ್ಷೆಯಿದೆ. ಝೈದ್ ಖಾನ್ ಅವರೊಂದಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ʼಉಪಾಧ್ಯಕ್ಷʼ ಖ್ಯಾತಿಯ ಮಲೈಕಾ ಈ ಚಿತ್ರದ ನಾಯಕಿಯರಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಅಚ್ಯುತ ಕುಮಾರ್, ಆಲ್‌ ಓಕೆ (ALL OK) ಮುಂತಾದವರು ತಾರಾಬಳಗದಲ್ಲಿದ್ದಾರೆ.

ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ದೇಶಕ ಅನಿಲ್ ಕುಮಾರ್ ಅವರ ಪತ್ನಿ ಆರಂಭ ಫಲಕ ತೋರಿದರು. ಝೈದ್ ಖಾನ್ ಅವರ ಅಜ್ಜಿ (ಸಚಿವ ಜಮೀರ್ ಅಹಮದ್ ಖಾನ್ ಅವರ ತಾಯಿ) ಕ್ಯಾಮೆರಾಕ್ಕೆ ಚಾಲನೆ ಮಾಡಿದರು. ಝೈದ್ ಖಾನ್, ರಚಿತಾ ರಾಮ್, ಮಲೈಕಾ‌,‌ ನಿರ್ದೇಶಕ ಅನಿಲ್ ಕುಮಾರ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಹಾಗೂ ಆಪ್ತರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ʼಕಲ್ಟಿಸಂʼ ಎಂಬ ಶಬ್ದವನ್ನು ಈಗಿನ ಯುವಜನತೆ ಕಲ್ಟ್ ಎಂದು ಹೆಚ್ಚಾಗಿ ಸಂಬೋಧಿಸುತ್ತಾರೆ. ಹಾಗಾಗಿ ಯವಜನತೆಗೆ ಹತ್ತಿರವಾಗಿರುವ ಕಥೆಯುಳ್ಳ ಈ ಚಿತ್ರಕ್ಕೆ ʼಕಲ್ಟ್ʼ ಎಂದು ಶೀರ್ಷಿಕೆಯಿಟ್ಟಿರುವುದಾಗಿ ನಿರ್ದೇಶಕ ಅನಿಲ್ ಕುಮಾರ್ ತಿಳಿಸಿದ್ದಾರೆ.

ಲೋಕಿ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದ್ದು. ಜೆ.ಎಸ್. ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಭೂಷಣ್-ಸಂತು ಮಾಸ್ಟರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

2022ರಲ್ಲಿ ತೆರೆಕಂಡ ʼಬನಾರಸ್‌ʼ ಕನ್ನಡ ಚಿತ್ರದ ಮೂಲಕ ಝೈದ್ ಖಾನ್ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಸೋನಲ್‌ ಮೊಂತೊರೇ ನಾಯಕಿಯಾಗಿದ್ದ ಈ ಚಿತ್ರವನ್ನು ಜಯತೀರ್ಥ ನಿರ್ದೇಶಿಸಿದ್ದರು. ಮೊದಲ ಸಿನಿಮಾದಲ್ಲೇ ಗಮನ ಸೆಳೆದ ಝೈದ್ ಖಾನ್ ಬಳಿಕ ಯಾವುದೇ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಸುಮಾರು 2 ವರ್ಷದ ಬಳಿಕ ಅವರ ಹೊಸ ಚಿತ್ರದ ಮುಹೂರ್ತ ನೆರೆವೇರಿದೆ.

ಸದ್ಯ ರಚಿತಾ ರಾಮ್‌ ಬ್ಯಾಕ್‌ ಟು ಬ್ಯಾಕ್‌ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ʼಸಂಜು ವೆಡ್ಸ್‌ ಗೀತಾ 2ʼ, ʼಶಬರಿ ಸರ್ಚಿಂಗ್‌ ಫಾರ್‌ ರಾವಣʼ, ʼಲವ್‌ ಮಿ ಆರ್‌ ಹೇಟ್‌ ಮಿʼ ಮುಂತಾದ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಜತೆಗೆ ʼಕಲ್ಟ್‌ʼ ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Subrahmanyaa Movie: ಆರ್ಮುಗಂ ರವಿಶಂಕರ್ ಪುತ್ರನಿಗೆ ಶಿವಣ್ಣ ಸಾಥ್; ಅದ್ವೈ ಚೊಚ್ಚಲ ಕನಸು ʼಸುಬ್ರಹ್ಮಣ್ಯʼ ಫಸ್ಟ್ ಲುಕ್ ರಿಲೀಸ್

ಈ ವರ್ಷಾರಂಭದಲ್ಲಿ ಬಿಡುಗಡೆಯಾದ ʼಉಪಾಧ್ಯಕ್ಷʼ ಸಿನಿಮಾ ಮೂಲಕ ಗಮನ ಸೆಳೆದವರು ಮಲೈಕಾ ವಸುಪಾಲ್‌. ಕಿರುತೆರೆಯಲ್ಲಿ ಮಿಂಚುತ್ತಿದ್ದಅವರು ಉಪಾಧ್ಯಕ್ಷ ಚಿಕ್ಕಣ್ಣನಿಗೆ ಜೋಡಿಯಾಗಿ ಕಾಣಿಸಿಕೊಂಡರು. ಇದೀಗ ಮತ್ತೊಂದು ಬಹು ನಿರೀಕ್ಷಿತ ಸಿನಿಮಾಕ್ಕೆ ನಾಯಕಿಯಾಗಿದ್ದಾರೆ.