Monday, 30th January 2023

ತೆಂಗಿನಕಾಯಿಯ ಜುಟ್ಟು, ಒಳಗೆ ಅವಿತಿದೆಯೊಂದು ಗುಟ್ಟು

ತಿಳಿರು ತೋರಣ

srivathsajoshi@yahoo.com

‘ನೀರಿಗೆ ನೈದಿಲೆ ಶೃಂಗಾರ, ಸಮುದ್ರಕೆ ತೆರೆಯೇ ಶೃಂಗಾರ, ನಾರಿಗೆ ಗುಣವೇ ಶೃಂಗಾರ, ಗಗನಕೆ ಚಂದ್ರಮನೇ ಶೃಂಗಾರ, ಕೂಡಲ ಸಂಗನ ಶರಣರ ನೊಸಲಿಗೆ ವಿಭೂತಿಯೇ ಶೃಂಗಾರ… ಎಂದ ಬಸವಣ್ಣನವರು ತನ್ನ ವಚನದಲ್ಲಿ ಇನ್ನೂ ಒಂದು ಉಪಮೆಗೆ ಅವಕಾಶವಿದ್ದಿದ್ದರೆ ‘ತೆಂಗಿನಕಾಯಿಗೆ ಜುಟ್ಟೇ ಶೃಂಗಾರ…’ ಎನ್ನುತ್ತಿದ್ದರೋ ಏನೋ.

ಅಮೆಜಾನ್‌ನಲ್ಲಿ ಅಥವಾ ಬೇರಾವುದೇ ಆನ್‌ಲೈನ್ ಗ್ರೋಸರಿ ಅಂಗಡಿಯ ವೆಬ್‌ಸೈಟ್‌ ನಲ್ಲಿ ನೀವು Pooja coconut ಎಂದು ಹುಡುಕಿದರೆ ನಿಮಗೆ ಪೂಜಾ ಬ್ರ್ಯಾಂಡ್ ತೆಂಗಿನ ಕಾಯಿ ಸಿಗುತ್ತದೆ. ಪೂಜಾ ಬ್ರ್ಯಾಂಡ್ ಅಂದರೆ ಅದೇ- ಜುಟ್ಟು ಇರುವ ತೆಂಗಿನ ಕಾಯಿ. ದೇವರಿಗೆ ಅರ್ಪಿಸಲಿಕ್ಕೆ ಯೋಗ್ಯವಾದುದು. ಬೆಲೆ ಎಷ್ಟಿರಬಹುದು ಅಂತೀರಾ? ಅಮೆರಿಕದಲ್ಲಾದರೆ ನಾಲ್ಕೈದು ಡಾಲರ್ ಇರಬಹುದು.

ಫ್ಲೋರಿಡಾ ಕೊಕೊನಟ್ಸ್ ಡಾಟ್ ಕಾಮ್ ಎಂಬ ವೆಬ್‌ಸೈಟಲ್ಲಿ ನೋಡಿದೆ, ಜುಟ್ಟಿರುವ ತೆಂಗಿನಕಾಯಿ ಬೆಲೆ ಬರೋಬ್ಬರಿ ಹದಿನೈದು ಡಾಲರ್ ಅಂತ ಇತ್ತು! ಅದಿರಲಿ, ನಾನೇನೂ ಈಗ ಜುಟ್ಟು ಇರುವ ತೆಂಗಿನಕಾಯಿ ಕೊಳ್ಳಲಿಕ್ಕೆ ಹೊರಟಿಲ್ಲ. ಹಾಗೂ ಬೇಕೆಂದರೆ ಇಲ್ಲಿ ನಮಗೆ ಪಟೇಲ್ ಬ್ರದರ್ಸ್ ಅಂಗಡಿಯಲ್ಲಿ ಯಥೇಚ್ಛ ಸಿಗುತ್ತವೆ. ಜುಟ್ಟಿದ್ದದ್ದಕ್ಕೆ ಎರಡೂ ವರೆ ಡಾಲರ್, ಜುಟ್ಟಿಲ್ಲದ್ದಕ್ಕೆ ಎರಡು ಡಾಲರ್. ಅಂದರೆ ಜುಟ್ಟಿನ ಬೆಲೆಯೇ ೫೦ ಸೆಂಟ್ಸ್‌ನಷ್ಟು ಅಂತಾಯ್ತು ಅನ್ನಿ!

ಇದನ್ನು ಈಗೇಕೆ ಪ್ರಸ್ತಾವಿಸಿದೆನೆಂದರೆ ತುಂಬಾ ಹಿಂದೆ- ಹದಿನೆಂಟು ವರ್ಷಗಳ ಹಿಂದೆ- ನನ್ನ ಅಮೆರಿಕ ಜೀವನದ ಆರಂಭಿಕ ವರ್ಷಗಳಲ್ಲಿ ಮತ್ತು ಅಂಕಣ ಬರವಣಿಗೆಯ ಆರಂಭಿಕ ದಿನಗಳಲ್ಲಿ, ‘ತೆಂಗಿನಕಾಯಿಗೆ ಜುಟ್ಟು ಶೃಂಗಾರ’ ಎಂಬ ತಲೆಬರಹವಿದ್ದ ಒಂದು ಹರಟೆ ಲಹರಿ ಹರಿಸಿದ್ದೆ. ಅದರಿಂದ ಆಯ್ದ ಕೆಲವು ಸ್ವಾರಸ್ಯಕರ ಅಂಶಗಳನ್ನು ಇಂದಿನ ಈ ಹರಟೆಯಲ್ಲೂ ಮರುಬಳಕೆ ಮಾಡುವವನಿದ್ದೇನೆ, ಆದರೆ ಮುಖ್ಯವಾಗಿ ನನ್ನ ಗಮನ ಸೆಳೆದದ್ದು ಈ ಭಾಗ: ‘ಇಲ್ಲಿ ಅಮೆರಿಕದಲ್ಲಿರುವ ಇಂಡಿಯನ್/ ಮೆಕ್ಸಿಕನ್/ ಕೊರಿಯನ್ ಗ್ರೋಸರಿ ಸ್ಟೋರ್‌ಗಳಲ್ಲಿ ಸುಲಿದಿಟ್ಟ ಇಡೀ ತೆಂಗಿನಕಾಯಿ ಧಾರಾಳ ವಾಗಿ ಸಿಗುತ್ತವೆ; ಅವು ಜುಟ್ಟು ಗಿಟ್ಟು ಇಲ್ಲದೆ ಬೋಳಾಗಿರುತ್ತವೆ.

ಒಂದೊಂದಕ್ಕೆ ೫೦ ಅಥವಾ ೬೦ ಸೆಂಟ್ಸ್ ಬೆಲೆ. ಆದರೆ ಜುಟ್ಟು ಇರುವ ತೆಂಗಿನಕಾಯಿ ಸಿಗಬೇಕಿದ್ದರೆ ಪಟೇಲ್ ಬ್ರದರ್ಸ್‌ನಂಥ ಪಕ್ಕಾ ಗುಜ್ಜು ಅಂಗಡಿಗಳಿಗೇ ಹೋಗಬೇಕು. ಅಲ್ಲಿ ದಿನಬಳಕೆಗಾಗಿ ಜುಟ್ಟುರಹಿತ ತೆಂಗಿನಕಾಯಿಗಳ ಬುಟ್ಟಿಯಂತೂ ಇದ್ದೇ ಇರುತ್ತದೆ, ಜೊತೆಯಲ್ಲೇ ವಿಶೇಷ ಬೇಡಿಕೆಯ ಮೇರೆಗೆ ಪ್ರೀಮಿಯಂ ದರದಲ್ಲಿ ಜುಟ್ಟಿರುವ ತೆಂಗಿನಕಾಯಿಯ ಲಭ್ಯತೆಯೂ ಇದೆ. ವಿದೌಟ್ ಜುಟ್ಟು ೬೦ ಸೆಂಟ್ಸ್ ಆದರೆ ವಿದ್ ಜುಟ್ಟು ಹತ್ತಿರಹತ್ತಿರ ಒಂದು ಡಾಲರ್ ಬೆಲೆ.

ಜುಟ್ಟಿನಿಂದಾಗಿ ತೆಂಗಿನಕಾಯಿಯ ಮೌಲ್ಯ ವೃದ್ಧಿಯಾಗುತ್ತದಾದರೆ ಜುಟ್ಟಿಗೇ ಬೆಲೆಯಿದೆ ಎಂದಾಯ್ತಲ್ಲ!’ ಇದರಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ, ಮತ್ತು ಒಂದಿಷ್ಟು ಸರಳ ಗಣಿತ ಅನ್ವಯಿಸಿದರೆ, ಅಮೆರಿಕದಲ್ಲಿ ಬೆಲೆಯೇರಿಕೆ ಎಷ್ಟು ಪ್ರಮಾಣದಲ್ಲಾಗಿದೆ ಎನ್ನು ವುದೂ ಗೊತ್ತಾಗುತ್ತದೆ (ಮತ್ತೆ ಇದಕ್ಕೂ ಮೋದಿ ರಾಜೀನಾಮೆ ಕೊಡಬೇಕು ಎನ್ನಬಹುದು ಮೂರ್ಕಾಸಿನ ಮೂರ್ಖ ಎಡಬಿಡಂಗಿ ಗಳೂ ಲದ್ದಿಜೀವಿಗಳೂ). ತೆಂಗಿನಕಾಯಿಯ ಬೆಲೆ ಸರಿಸುಮಾರು ನಾಲ್ಕು ಪಟ್ಟು ಆಗಿದ್ದರೆ ಜುಟ್ಟಿನ ಬೆಲೆ ಆ ಅನುಪಾತದಲ್ಲಿ ಹೆಚ್ಚಿಲ್ಲ. ಆಗಲೂ ಈಗಲೂ ೫೦ ಸೆಂಟ್ಸ್‌ನಲ್ಲೇ ನಿಂತಿದೆಯೆಂದು ತಿಳಿಯುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ, ಜುಟ್ಟಿನಿಂದಾಗಿ ತೆಂಗಿನಕಾಯಿಯು ಬೆಲೆ ಕಳೆದುಕೊಳ್ಳುವ ಒಂದು ಸನ್ನಿವೇಶವೂ ಇದೆ. ಇದನ್ನು ನಾನೋದಿದ್ದು ಕನ್ನಡ ದಿನಪತ್ರಿಕೆಗಳಲ್ಲಿ, ಕರ್ನಾಟಕ ಸರಕಾರವು ತೆಂಗು ಬೆಳೆಗಾರರಿಗೆ ಬೆಂಬಲ ಬೆಲೆ ನಿಗದಿಪಡಿಸುವಾಗಿನ ಷರತ್ತುಗಳ ಪಟ್ಟಿಯಲ್ಲಿ. ‘ಸುಲಿದ ತೆಂಗಿನಕಾಯಿಗಳು ಕಡು ಕಂದುಬಣ್ಣದ್ದಾಗಿರಬೇಕು; ಬಲಿತ ಸುಲಿದ ತೆಂಗಿನಕಾಯಿಗಳು
ಕಪ್ಪುಬಣ್ಣದ ಕವಚದೊಂದಿಗೆ ಮೂರು ಉದ್ದ ಗೆರೆಗಳನ್ನು ಹೊಂದಿರಬೇಕು.

ತೆಂಗಿನಕಾಯಿಯ ಮೂರು ಕಣ್ಣುಗಳು ಗಟ್ಟಿಯಾಗಿದ್ದು ಕಂದು ಅಥವಾ ಕಪ್ಪು ಬಣ್ಣದ್ದಾಗಿರಬೇಕು…’ ಅಂತೆಲ್ಲ ಇರುವ ಪಟ್ಟಿಯ ಕೊನೆಯ ಅಂಶ ವಿಶೇಷವಾಗಿ ನನ್ನ ಗಮನ ಸೆಳೆಯಿತು: ‘ಸುಲಿದ ತೆಂಗಿನಕಾಯಿಗಳು ಜುಟ್ಟನ್ನು ಹೊಂದಿರಬೇಕು, ಈ ಕಾಯಿಗಳ ತೂಕದ ಶೇ.೨ನ್ನು ಜುಟ್ಟಿನ ತೂಕವಾಗಿ ಪರಿಗಣಿಸಿ ಕಡಿತಗೊಳಿಸಲಾಗುವುದು.’ ಅಯ್ಯೋ ದೇವ್ರೇ ಜುಟ್ಟಿನಿಂದಾಗಿ ತೆಂಗಿನಕಾಯಿ ಯ ಮೌಲ್ಯ ವೃದ್ಧಿಯಾಗುತ್ತದೆಂದು ನಾನಂದುಕೊಂಡರೆ ಸರಕಾರದ ಲೆಕ್ಕಪ್ರಕಾರ ಜುಟ್ಟಿಗೆ ಬೆಲೆಯೇ ಇಲ್ಲ! ಅದೂ ಎಂಥ ಅನ್ಯಾಯ ನೋಡಿ.

ರೈತರು ಮಾರುವಾಗ ತೆಂಗಿನಕಾಯಿಗೆ ಜುಟ್ಟು ಇರಲೇಬೇಕಂತೆ. ಆದರೆ ಜುಟ್ಟಿನ ಬಾಬ್ತು ಒಟ್ಟು ಬೆಲೆಯಲ್ಲಿ ಕಡಿತ ಮಾಡ ಲಾಗುತ್ತದಂತೆ. ಅಂದರೆ ಏನರ್ಥ? ಕೆಲಸಕ್ಕೆ ಜುಟ್ಟು ಬೇಕು, ಸಂಭಾವನೆ ಇಲ್ಲ. ಇದೇ ಆಯ್ತಲ್ಲ ಜುಟ್ಟಿನ ಹಣೆಬರಹ! ಅದೇನೇ ಇರಲಿ. ತೆಂಗಿನಕಾಯಿಗೆ ಜುಟ್ಟು ಯಾವತ್ತಿಗೂ ಶೋಭೆ ಕೊಡುವಂಥದ್ದು ಎಂದು ನಮಗೆಲ್ಲ ಗೊತ್ತು. ‘ತೆಂಗಿನಕಾಯಿಗೆ ಜುಟ್ಟು ಶೃಂಗಾರ’ ಲೇಖನದಲ್ಲಿ ನಾನು ಅದೇ ತರ್ಕವನ್ನು ಮಂಡಿಸಿದ್ದೆ.

‘ನೀರಿಗೆ ನೈದಿಲೆ ಶೃಂಗಾರ, ಊರಿಗೆ ಅರಮನೆಯೇ ಶೃಂಗಾರ, ಸಮುದ್ರಕೆ ತೆರೆಯೇ ಶೃಂಗಾರ, ನಾರಿಗೆ ಗುಣವೇ ಶೃಂಗಾರ, ಗಗನಕೆ ಚಂದ್ರಮನೇ ಶೃಂಗಾರ, ಕೂಡಲಸಂಗನ ಶರಣರ ನೊಸಲಿಗೆ ವಿಭೂತಿಯೇ ಶೃಂಗಾರ… ಎಂದ ಬಸವಣ್ಣನವರು ತನ್ನ ವಚನದಲ್ಲಿ ಇನ್ನೂ ಒಂದು ಉಪಮೆಗೆ ಅವಕಾಶವಿದ್ದಿದ್ದರೆ ‘ತೆಂಗಿನಕಾಯಿಗೆ ಜುಟ್ಟೇ ಶೃಂಗಾರ…’ ಎನ್ನುತ್ತಿದ್ದರೋ ಏನೋ. ಯಾಕೆ? ಸ್ವಲ್ಪ ಯೋಚಿಸಿ. ವಿದ್ ಜುಟ್ಟು ವರ್ಸಸ್ ವಿದೌಟ್ ಜುಟ್ಟು ತೆಂಗಿನಕಾಯಿಗಳ ಪೈಕಿ ಯಾವುದರ ಬಗ್ಗೆ ನಮಗೆ ಹೆಚ್ಚು ಗೌರವ ಮೂಡುತ್ತದೆ? ಸತ್ಯನಾರಾಯಣ ಪೂಜೆಯಲ್ಲಿ ಕಲಶವಾಗಿ ಫಳಫಳ ಹೊಳೆಯುವ ಬೆಳ್ಳಿ ಅಥವಾ ತಾಮ್ರದ ತಂಬಿಗೆ, ಅದರಲ್ಲಿ ಪವಿತ್ರ ಜಲ, ಮೇಲೆ ಮಾವಿನ ಎಲೆಗಳು ಮತ್ತದರ ಮೇಲೆ ಊರ್ಧ್ವವಾಗಿ ಇರಿಸಿದ ‘ಜುಟ್ಟಿರುವ ತೆಂಗಿನಕಾಯಿ’ – ಅದೊಂದು ಪೂಜ್ಯ ಭಾವದ ದಿವ್ಯ ಸಂಕೇತವಲ್ಲವೇ? ಅದೇ ಜಾಗದಲ್ಲಿ ಜುಟ್ಟಿರದ ತೆಂಗಿನಕಾಯಿಯನ್ನು ಕಲ್ಪಿಸಲಿಕ್ಕೂ ಸಾಧ್ಯವಾಗದು.

ಅದು ಜಮ್ಮುಕಾಶ್ಮೀರವಿಲ್ಲದ ಭಾರತದ ನಕ್ಷೆಯಂತೆ ತೀರಾ ಆಭಾಸಕರವಾಗಿ ಕಾಣಬಹುದು. ಅಲ್ಲೇ ಇರೋದು ಜುಟ್ಟಿನ ಗತ್ತು, ಗಾಂಭೀರ್ಯ, ಗಮ್ಮತ್ತು, ಶ್ರೇಷ್ಠತೆ! ತೆಂಗಿನಕಾಯಿಗೆ ದೈವಿಕತೆಯನ್ನು, ಪಾವಿತ್ರ್ಯವನ್ನು ಕೊಡುವುದರಲ್ಲಿ ಜುಟ್ಟಿನ ಪಾತ್ರ ಪ್ರಮುಖವಾದುದು. ನಮ್ಮ ತಂದೆಯವರು ಹೇಳುತ್ತಿದ್ದರು (ಮತ್ತು ಹಾಗೆಯೇ ಆಚರಿಸುತ್ತಿದ್ದರು ): ನಮ್ಮ ಕರಾವಳಿಯಲ್ಲಿ ಭೂತಗಳಿಗೆ, ದೈವಗಳಿಗೆ, ಮತ್ತಿತರ ಪೈಶಾಚಿಕ ಶಕ್ತಿಗಳಿಗೆ ಕೋಲ ನೇಮ ಇತ್ಯಾದಿ ಸೇವೆಗಳಲ್ಲಿ ತೆಂಗಿನಕಾಯಿ ಅರ್ಪಿಸುವಾಗ ಅದಕ್ಕೆ ಜುಟ್ಟು ಇರಕೂಡದು.

ಆದರೆ ದೇವತಾಪೂಜೆಯಲ್ಲಿ ಜುಟ್ಟು ಇರದ ತೆಂಗಿನಕಾಯಿಯನ್ನು ಬಳಸಲೇಬಾರದು. ನೈವೇದ್ಯ ಸಮರ್ಪಣೆಗಾಗಿ ತೆಂಗಿನಕಾಯಿ ಯನ್ನು ಒಡೆಯುವವರೆಗೂ ಅದಕ್ಕೆ ಜುಟ್ಟು ಇರಬೇಕು. ಒಡೆದ ಮೇಲೆ ಮಾತ್ರ ಹೋಳನ್ನು ಜುಟ್ಟು ತೆಗೆದು ಇಡಬೇಕು. ಪೂಜೆ-ಪುರಸ್ಕಾರ-ಪುಣ್ಯಾಹವಾಚನಗಳಲ್ಲಿ, ಮದವೆ-ಮುಂಜಿ-ಗೃಹಪ್ರವೇಶವೇ ಮೊದಲಾದ ಶುಭಕಾರ್ಯಗಳಲ್ಲಿ, ಅಷ್ಟೇಕೆ ಫಲ ತಾಂಬೂಲವಾಗಲೀ ಬಾಗಿನವಾಗಲೀ ನೀಡಿ ಗೌರವ ಸಮರ್ಪಣೆಯಲ್ಲಿ ಸಹ ಜುಟ್ಟು ಇರುವ ತೆಂಗಿನಕಾಯಿಯೇ ಬೇಕು.

ಜುಟ್ಟಿದ್ದರಷ್ಟೇ ಸಾಲದು, ಆ ತೆಂಗಿನಕಾಯಿಯನ್ನು ವಿದ್ ರೆಸ್ಪೆಕ್ಟ್ ಟು ಜುಟ್ಟು (ಅಕ್ಷರಶಃ) ಹೇಗೆ ಹಿಡಿದುಕೊಳ್ಳಬೇಕು, ಹೇಗೆ ಇಡಬೇಕು ಅನ್ನೋದೂ ಇಂಪಾರ್ಟೆಂಟ್. ಬಾಗಿನ ಕೊಡುವ ಕ್ರಮವನ್ನೇ ತೆಗೆದುಕೊಳ್ಳಿ, ಬಾಗಿನವನ್ನು ನಾವು ಇನ್ನೊಬ್ಬರಿಗೆ ಕೊಡುವಾಗ ತೆಂಗಿನಕಾಯಿಯ ಜುಟ್ಟು (ಮತ್ತು ವೀಳ್ಯದೆಲೆಗಳ ತುದಿಗಳು) ನಮ್ಮ ಕಡೆಗೆ ಇರಬೇಕು. ಒಟ್ಟಿನಲ್ಲಿ ತೆಂಗಿನಕಾಯಿಗೆ ಜುಟ್ಟಿರುವುದಷ್ಟೇ ಮುಖ್ಯವಲ್ಲ, ಅದರ ಒರಿಯೆಂಟೇಶನ್ನೂ ಅಷ್ಟೇ ಮುಖ್ಯ.

ಮದುವೆಯಲ್ಲಿ, ವರನ ಕೈಯಲ್ಲಿ ಅಲಂಕೃತ ತೆಂಗಿನಕಾಯಿಯನ್ನಿಟ್ಟು ಮಂಟಪಕ್ಕೆ ಕರೆತರುವಾಗಲೂ ಅದೇ ಪದ್ಧತಿ. ಆದರೆ ಆ
ಸನ್ನಿವೇಶದಲ್ಲಿ ತೆಂಗಿನಕಾಯಿಯ ಜುಟ್ಟಿಗಿಂತಲೂ, ತನ್ನ ಬದುಕಿನ ಸರ್ವಸ್ವದ ಜುಟ್ಟು ಅಳಿಯ ಮಹಾಶಯನ ಹಿಡಿತಕ್ಕೆ ಸಿಗದಂತೆ ರಕ್ಷಿಸುವುದು ಕನ್ಯಾಪಿತೃವಿನ ಚಿಂತನೆಯಾದೀತು! ತನ್ನ ಜುಟ್ಟು ಈಗಿನ್ನು ಹೆಂಡತಿಯ ಕೈಲಿರುತ್ತದಲ್ಲ ಎಂದು ವರನ
ಯೋಚನೆಯಿರಬಹುದು!

ಜುಟ್ಟು ಇರುವ ತೆಂಗಿನಕಾಯಿಯನ್ನು ಮುಕ್ಕಣ್ಣ ಶಿವನೆಂದೇ ಪರಿಗಣಿಸಲಾಗುತ್ತದೆ. ತಮಿಳರು ಅದಕ್ಕೊಂದು ಪುರಾಣಕಥೆ ಯನ್ನೂ ಹೇಳುತ್ತಾರೆ. ತ್ರಿಪುರಸಂಹಾರಕ್ಕೆ ಹೊರಟ ಪರಶಿವನ ರಥದ ಚಕ್ರದ ಕೀಲು ಮುರಿಯಿತು. ನೆರವಿಗೆಂದು ಗಣೇಶನನ್ನು ಕರೆದಾಗ, ಆತ ಹೀಗೆನ್ನುತ್ತಾನೆ: ಯಾವುದೇ ಕಾರ್ಯದ ಆರಂಭದಲ್ಲಿ ಗಣೇಶನನ್ನು ಪೂಜಿಸಬೇಕೆಂದು ಲೋಕಕ್ಕೆಲ್ಲ ಅಪ್ಪಣೆ
ಕೊಡಿಸಿದ್ದು ನೀನು. ಆದರೆ ನೀನೇ ಅದನ್ನು ಪಾಲಿಸಲಿಲ್ಲ. ಹಾಗಾಗಿಯೇ ರಥದ ಚಕ್ರದ ಕೀಲು ಮುರಿಯಿತು.

ಸರಿ, ಅದಕ್ಕೀಗ ಪ್ರಾಯಶ್ಚಿತ್ತ ಏನು ಎಂದು ಪರಶಿವನು ಕೇಳಲಾಗಿ ಗಣೇಶನೆನ್ನುತ್ತಾನೆ: ನೀನು ಅಹಂಕಾರದಿಂದಲೇ ಹಾಗೆ ಮಾಡಿರಬೇಕು. ಇದಕ್ಕೆ ತಲೆದಂಡವೇ ಪ್ರಾಯಶ್ಚಿತ್ತ. ಅಷ್ಟುಹೊತ್ತಿಗೆ ಅಲ್ಲಿಗೆ ಪಾರ್ವತಿ ಬಂದಳು, ಶಿವನ ರಕ್ಷಣೆಗೆ. ಅಷ್ಟು ಘೋರ ಶಿಕ್ಷೆ ಸಲ್ಲದು, ಶಿವನ ತಲೆ ಹೋದರೆ ಆಮೇಲೆ ಲೋಕದ ಗತಿಯೇನು ಎಂದು ಎಚ್ಚರಿಸಿ ಬೇರೇನಾದರೂ ಉಪಾಯ ಹುಡುಕುವಂತೆ ಗಣೇಶನಿಗೆ ಹೇಳಿದಳು. ಆಗ ಗಣೇಶ ತೆಂಗಿನಕಾಯಿಯನ್ನು ಸೃಷ್ಟಿಸಿದನು.

ಶಿವನಂತೆಯೇ ಮೂರು ಕಣ್ಣುಗಳು, ಮತ್ತೊಂದು ಕುಡುಮಿ (ತಮಿಳಿನಲ್ಲಿ ಜುಟ್ಟು ಎಂದರ್ಥ). ಶಿವನ ತಲೆಯೋ ಎಂಬಂತೆ ಆ
ತೆಂಗಿನಕಾಯಿಯನ್ನು ಗಣೇಶ ಒಡೆದನು. ಆದ್ದರಿಂದಲೇ ತಮಿಳರು ಶಿವನಿಗೆ ಕುಡುಮಿ ದೇವರ್ ಎನ್ನುತ್ತಾರೆ. ಹತ್ತಿಪ್ಪತ್ತು ವರ್ಷಗಳ ಹಿಂದೆಯಾದರೆ ಇಲ್ಲಿ ಪಟೇಲ್ ಬ್ರದರ್ಸ್ ಅಂಗಡಿಯಲ್ಲಿ ಮಾತ್ರ ಜುಟ್ಟಿರುವ ತೆಂಗಿನಕಾಯಿ ಸಿಗುತ್ತಿದ್ದದ್ದು. ಆಸುಪಾಸಿ ನಲ್ಲಿ ಆ ರೀತಿಯ ಇಂಡಿಯನ್ ಗ್ರೋಸರಿ ಸ್ಟೋರ್ ಇಲ್ಲದ ಚಿಕ್ಕದೊಂದು ಪಟ್ಟಣದಲ್ಲಿದ್ದ (ಮತ್ತು ಈಗಿನಂತೆ ಅಮೆಜಾನ್ ಇತ್ಯಾದಿ ಆನ್‌ಲೈನ್ ಆರ್ಡರಿಂಗ್ ಸೌಕರ್ಯವೂ ಇಲ್ಲದಿದ್ದ ಸನ್ನಿವೇಶದಲ್ಲಿ) ಹಿರಿಯ ಅಮೆರಿಕನ್ನಡಿಗರೊಬ್ಬರು ಒಂದು ಉಪಾಯ ಕಂಡುಕೊಂಡಿದ್ದರಂತೆ.

ಅವರು ಸ್ವಲ್ಪ ಧರ್ಮಭೀರು ವ್ಯಕ್ತಿ. ಪೂಜೆಪುರಸ್ಕಾರಗಳೆಲ್ಲ ಶಾಸ್ತ್ರೋಕ್ತವಾಗಿ ಆಗಬೇಕೆಂದುಕೊಳ್ಳುವವರು. ಭಾರತದಿಂದ ಬರುವಾಗ ಒಂದು ತೆಂಗಿನಕಾಯಿಯ ಜುಟ್ಟನ್ನಷ್ಟೇ ತಂದು ಇಲ್ಲಿ ಮನೆಯಲ್ಲಿಟ್ಟುಕೊಂಡಿದ್ದರಂತೆ. ಸತ್ಯನಾರಾಯಣ ಪೂಜೆ ಅಥವಾ ವಿಶೇಷ ಧಾರ್ಮಿಕ ಕಾರ್ಯಗಳಲ್ಲಿ ಕಲಶವನ್ನಿಡಲಿಕ್ಕೆ ಇಲ್ಲಿ ಸಿಗುವ ಬೋಳು ತೆಂಗಿನಕಾಯಿಯನ್ನು ಕೊಂಡುತಂದು, ಅದಕ್ಕೆ ತಮ್ಮಲ್ಲಿದ್ದ ಜುಟ್ಟನ್ನು ತಾತ್ಕಾಲಿಕವಾಗಿ ಅಂಟಿಸುತ್ತಿದ್ದರಂತೆ. ಪೂಜೆ ಮುಗಿದ ಮೇಲೆ ತೆಂಗಿನಕಾಯಿಯ ಮಾಮೂಲು ವಿನಿಯೋಗ, ಜುಟ್ಟು ಮರಳಿ ಸೇಫ್‌ಲಾಕರ್‌ನಲ್ಲಿ!

ಇದನ್ನವರು ರಂಜನೆಗಾಗಿ ಕಪೋಲಕಲ್ಪಿತವಾಗಿ ಹೇಳಿದ್ದು ಖಂಡಿತ ಇರಲಿಕ್ಕಿಲ್ಲ. ಏಕೆಂದರೆ ಕ್ಯಾಲಿಫೋರ್ನಿಯಾದಲ್ಲಿರುವ ಇನ್ನೊಬ್ಬ ಸ್ನೇಹಿತ ರವಿ ಗೋಪಾಲರಾವ್ ಅವರು ಐದಾರು ವರ್ಷಗಳ ಹಿಂದೆ ಒಂದು ಲೇಖನದಲ್ಲಿ ಹೀಗೆ ಬರೆದುಕೊಂಡಿದ್ದರು: ‘ಜುಟ್ಟಿಲ್ಲದ ತೆಂಗಿನಕಾಯಿ ತಂದು ಅದೇನು ಕಲಶ ಇಡುತ್ತೀರೋ ನೀವು… ಹೀಗೆನಾ ನವರಾತ್ರಿ ಮಾಡೋದು? ಸಂಪ್ರದಾಯ-ಸಂಸ್ಕೃತಿ ಎಲ್ಲದರಲ್ಲೂ ಇಲ್ಲಿ ಎಡ್ಜಸ್ಟ್‌ಮೆಂಟ್ ಅಂತ ಹಬ್ಬದ ದಿನ ಗೊಣಗುಟ್ಟಿದರು ಅಮ್ಮ.

ಅವರು ಹೀಗೆ ಅಂದಿದ್ದರಲ್ಲಿ ಅಚ್ಚರಿ ಇಲ್ಲ. ಬೆಂಗಳೂರಿನಲ್ಲಿ ಹಬ್ಬದಂದು ತೆಂಗಿನ ನಾರು ಬಿಡಿಸುವಾಗ ಅಪ್ಪಿತಪ್ಪಿ ಜುಟ್ಟು ತೆಗೆದಿದ್ರೆ ಹಿಗ್ಗಾಮುಗ್ಗಾ ಬೈಸಿಕೊಳ್ಳುತ್ತಿದ್ದೆವು. ನಾನೂ ಮೆಲ್ಲಗೆ ‘ಇಲ್ಲಿ ಅಂಗಡಿಗೆ ಬರಬೇಕಾದ್ರೇನೇ ತೆಂಗಿನಕಾಯಲ್ಲಿ ಜುಟ್ಟಿರಲ್ಲ. ನಾವೇನು ಮಾಡಕ್ಕೆ ಆಗತ್ತೆ! ಎಲ್ಲಿಂದ ಬರುತ್ತೋ ಯಾರಿಗೆ ಗೊತ್ತು?’ ಎಂದು ಜಾರಿಕೊಂಡೆ.’ ಅಷ್ಟಾಗಿ, ರವಿ ಗೋಪಾಲರಾವ್ ಕ್ಯಾಲಿಫೋರ್ನಿಯಾದಲ್ಲಿ, ಮಿನಿ ಇಂಡಿಯಾ ಎಂದೇ ಅನಿಸುವ ಬೇ-ಏರಿಯಾದಲ್ಲಿರುವವರು.

ಅಲ್ಲಿ ಅವರಿಗೆ ಜುಟ್ಟಿರುವ ತೆಂಗಿನಕಾಯಿ ಸಿಗದಿದ್ದದ್ದು ಆಶ್ಚರ್ಯವೇ. ಇಲ್ಲಿ ನಾನಿರುವ ವಾಷಿಂಗ್ಟನ್ ಪ್ರದೇಶದಲ್ಲಾದರೆ ಇಂಡಿಯನ್ ಸ್ಟೋರ್ ನಲ್ಲಷ್ಟೇ ಅಲ್ಲ, ಈಗೀಗ ಕೊರಿಯನ್, ಮೆಕ್ಸಿಕನ್, ಮತ್ತು ಆಯ್ದ ಕೆಲವು ಅಮೆರಿಕನ್ ಗ್ರೋಸರಿ ಸ್ಟೋರ್‌ ಗಳಲ್ಲೂ ‘ಪೂಜಾ ಕೊಕೊನಟ್’ ಸಿಗುತ್ತವೆ!

ಬಹುಶಃ ಅವರಿಗೂ ಗೊತ್ತಾಗಿದೆ, ಜುಟ್ಟು ಇರುವ ತೆಂಗಿನಕಾಯಿಗಳು ಹೆಚ್ಚು ಬಾಳ್ವಿಕೆ ಬರುತ್ತವೆ, This side up ಚಿಹ್ನೆಯೆಂದು
ಪರಿಗಣಿಸಿ ಜುಟ್ಟು ಮೇಲೆ ಬರುವಂತೆ ಇಟ್ಟರೆ ತೆಂಗಿನಕಾಯಿ ಬೇಗ ಹಾಳಾಗುವುದಿಲ್ಲ ಎಂದು. ಅಂದಹಾಗೆ ಪೂಜೆಗಷ್ಟೇ ಅಲ್ಲ, ‘ದೃಷ್ಟಿ ತೆಗೆಯುವುದು’ ಅಂದರೆ ನಿವಾಳಿಸುವುದು ಎಂಬ ವಿಧಿಗೂ ಜುಟ್ಟಿರುವ ತೆಂಗಿನಕಾಯಿಯೇ ಬೇಕು. ದೃಷ್ಟಿ ತೆಗೆಯುವವರು ತೆಂಗಿನಕಾಯಿಯನ್ನು ತಮ್ಮ ಅಂಗೈಯಲ್ಲಿ ಹಿಡಿದು ದೃಷ್ಟಿ ತೆಗೆಯಬೇಕಾದ ವ್ಯಕ್ತಿಯ ಎದುರು ನಿಂತುಕೊಳ್ಳಬೇಕು.

ತೆಂಗಿನ ಕಾಯಿಯ ಜುಟ್ಟು ದೃಷ್ಟಿತೆಗೆಯಬೇಕಾಗಿರುವ ವ್ಯಕ್ತಿಯ ಕಡೆಗೆ ಇರಬೇಕು. ದೃಷ್ಟಿ ತೆಗೆಯಬೇಕಾದ ವ್ಯಕ್ತಿಯು ತೆಂಗಿನ ಕಾಯಿಯ ಜುಟ್ಟಿನ ಕಡೆಗೆ ನೋಡಬೇಕು. ದೃಷ್ಟಿ ತೆಗೆಯಬೇಕಾದ ವ್ಯಕ್ತಿಯ ಕಾಲಿನಿಂದ ತಲೆಯವರೆಗೆ ಗಡಿಯಾರದ ಮುಳ್ಳುಗಳ ದಿಶೆಗೆ ವರ್ತುಲಾಕಾರ ಪದ್ಧತಿಯಲ್ಲಿ ತೆಂಗಿನಕಾಯಿಯನ್ನು ಮೂರು ಸಲ ತಿರುಗಿಸಬೇಕು. ಅನಂತರ ಆ ವ್ಯಕ್ತಿಯ ಸುತ್ತಲೂ ಮೂರು ಸುತ್ತು ಹಾಕಬೇಕು. ಆ ತೆಂಗಿನಕಾಯಿಯನ್ನು ಮೂರು ರಸ್ತೆಗಳು ಸೇರುವ ಸ್ಥಳದಲ್ಲಿ ಅಥವಾ ಮಾರುತಿಯ ದೇವಸ್ಥಾನ ದಲ್ಲಿ ಒಡೆಯಬೇಕು.

ದೃಷ್ಟಿಯು ಮಧ್ಯಮ ಪ್ರಮಾಣದಲ್ಲಿ ತಾಗಿದ್ದರೆ ತೆಂಗಿನಕಾಯಿ ಒಡೆದಾಗ ಅದರಲ್ಲಿನ ನೀರು ವೇಗದಿಂದ ಮೇಲೆ ಚಿಮ್ಮುತ್ತದೆ.
ತೆಂಗಿನಕಾಯಿ ಕೆಟ್ಟು ಹೋಗಿರುವುದು ಗೊತ್ತಾಗುತ್ತದೆ. ದೃಷ್ಟಿಯು ತೀವ್ರವಾಗಿ ತಾಗಿದ್ದರೆ, ತೆಂಗಿನಕಾಯಿಯು ಉದ್ದಕ್ಕೆ ಸೀಳುತ್ತದೆ.
ತೆಂಗಿನಕಾಯಿ ಒಡೆದ ಮೇಲೆ ಒಂದೋ ಅದರದು ತುಂಬ ತುಂಡುಗಳಾಗುತ್ತವೆ ಅಥವಾ ತೆಂಗಿನಕಾಯಿಯು ಬೇಗನೆ ಒಡೆಯು ವುದೇ ಇಲ್ಲ… ಎಂಬ ವಿವರಣೆಯಿದೆ ಜುಟ್ಟಿರುವ ತೆಂಗಿನಕಾಯಿ ಬಳಸಿ ದೃಷ್ಟಿ ತೆಗೆಯುವ ಬಗೆಗೆ.

ತೆಂಗಿನಕಾಯಿಯಿಂದ ಬೇರ್ಪಟ್ಟ ಜುಟ್ಟು ಸಹ ಅಮೂಲ್ಯವೇ, ಅಟ್‌ಲೀಸ್ಟ್ ಕರ್ನಾಟಕದ ಕರಾವಳಿಯಲ್ಲಂತೂ ಹೌದು. ಟೆಫ್ಲಾನ್
ನಾನ್‌ಸ್ಟಿಕ್ ಕಾವಲಿಗಳಿನ್ನೂ ಚಾಲ್ತಿಯಲ್ಲಿರದಿದ್ದ ಹಿಂದಿನಕಾಲದ ದಿನಗಳಲ್ಲಿ, ದೋಸೆಯ ಕಾವಲಿಗೆ ಎಣ್ಣೆಪಸೆ ಹರಡಲಿಕ್ಕೆ ನಮ್ಮೂರ ಮನೆಗಳಲ್ಲಿ ಅಮ್ಮ ಅಜ್ಜಿಯಂದಿರು ತೆಂಗಿನಕಾಯಿಯ ಜುಟ್ಟನ್ನು ಬಳಸುತ್ತಿದ್ದುದು ನನಗೆ ನೆನಪಿದೆ. ನೈಸರ್ಗಿಕ ಬಣ್ಣಗಳನ್ನಷ್ಟೇ ಉಪಯೋಗಿಸಿ ಪೈಂಟಿಂಗ್ ಮಾಡುವ ಕಲಾವಿದರೊಬ್ಬರು ನನಗೆ ಗೊತ್ತು. ಅವರ ಕುಂಚವೂ ನೈಸರ್ಗಿಕವೇ- ತೆಂಗಿನಕಾಯಿಯ ಜುಟ್ಟು! ಹಾಗೆಯೇ ಮೊನ್ನೆ ಯುಟ್ಯೂಬ್‌ನಲ್ಲೊಂದು ವಿಡಿಯೊ ನೋಡಿದೆ.

ತೆಂಗಿನ ಜುಟ್ಟುಗಳನ್ನು, ಒಣದ್ರಾಕ್ಷೆ ಮತ್ತು ಏಲಕ್ಕಿಯನ್ನೂ ಜಜ್ಜಿ ಬಿಸಿನೀರಿನಲ್ಲಿ ಕುದಿಸಿ ಶೋಧಿಸಿ ಚಹದ ಹಾಗೆ ಕುಡಿದರೆ ಗ್ಯಾಸ್ಟ್ರಿಕ್ ತೊಂದರೆ, ಹೊಟ್ಟೆಯುಬ್ಬರ, ಬಿಕ್ಕಳಿಕೆಗೆಲ್ಲ ರಾಮಬಾಣ ಅಂತೆ. ಆ ವಿಡಿಯೊ ನಿರೂಪಕಿಗೆ ಸ್ವಲ್ಪ ಆ-ಹಾಕಾರ
ಸಮಸ್ಯೆ ಅಂತ ಕಾಣುತ್ತದೆ. ಏಲಕ್ಕಿ ಎನ್ನಲಿಕ್ಕೆ ಹೇಲಕ್ಕಿ ಎಂದಳು. ಅಂಥ ರಾಮಬಾಣ ನನಗೇನೂ ಬೇಕಾಗಿಲ್ಲ ಎಂದುಕೊಂಡು
ವಿಡಿಯೊ ಆಫ್ ಮಾಡಿದೆ.

ಕೊನೆಯಲ್ಲಿ, ತೆಂಗಿನಕಾಯಿಯ ಜುಟ್ಟಿನ ಹಿಂದೆ ಅವಿತಿರುವ ಗುಟ್ಟು ಏನೆಂದು ತಿಳಿಸುತ್ತೇನೆ. ಇದನ್ನು ಮೊನ್ನೆ ಭಟ್ ಏಂಡ್
ಭಟ್ ಯುಟ್ಯೂಬ್ ಚಾನೆಲ್‌ನ ಲೇಟೆಸ್ಟ್ ವಿಡಿಯೊದಲ್ಲೂ ಹೇಳಿದ್ದಾರೆ. ಹದಿನೆಂಟು ವರ್ಷಗಳ ಹಿಂದೆ ನಾನು ಬರೆದಿದ್ದ
ಜುಟ್ಟುಪುರಾಣದಲ್ಲೂ ದಾಖಲಿಸಿದ್ದೆ. ಏನೆಂದರೆ, ತೆಂಗಿನಕಾಯಿಯನ್ನು ಎರಡು ಪರ್ಫೆಕ್ಟ್ ಹೋಳುಗಳಾಗಿ ಒಡೆಯೋದಕ್ಕೆ ಒಂದು ಸುಲಭ ಸೂತ್ರವಿದೆ. ಆ ಸೂತ್ರ ಸುಲಭವಾಗಿ ಗೊತ್ತಾಗದಂತೆ ಮುಚ್ಚಿಟ್ಟು ರಕ್ಷಿಸಲಿಕ್ಕೇ ತೆಂಗಿನಕಾಯಿಗೆ ಜುಟ್ಟು ಇರೋದು!

ತೆಂಗಿನಕಾಯಿಯ ಜುಟ್ಟು ತೆಗೆದಾಗ ಅಲ್ಲಿ ಅದರ ಮೂರು ಕಣ್ಣುಗಳು ಇರುತ್ತವಲ್ಲ, ನೀವು ಸೂಕ್ಷ್ಮವಾಗಿ ಗಮನಿಸಿದರೆ ಅವು ಗಳಲ್ಲಿ ಎರಡು ಕಣ್ಣುಗಳು ಸ್ವಲ್ಪ ಅಂತರ್ಮುಖಿಯಾಗಿಯೂ ಮೂರನೆಯದು ಸ್ವಲ್ಪ ಉಬ್ಬಿದ್ದೂ ಇರುತ್ತದೆ. ಮೂರೂ
ಕಣ್ಣುಗಳಿಂದ ಒಂದೊಂದು ಗೆರೆ ಹೊರಟು ತೆಂಗಿನಕಾಯಿಗೆ ಒಟ್ಟು ಮೂರು ಗೆರೆಗಳು ಇರುತ್ತವೆ. ಮೂರನೆಯ ಅಂದರೆ
ಉಳಿದೆರಡಕ್ಕಿಂತ ತುಸು ಭಿನ್ನವಾಗಿ ಉಬ್ಬಿರುವ ಕಣ್ಣಿನಿಂದ ಹೊರಡುವ ಗೆರೆ(ಅದು ಸಮಾನ ಕಣ್ಣುಗಳೆರಡರ ನಡುವಿನ ದಾಗಿರುತ್ತದೆ ಎಂದು ಗೊತ್ತಿರಲಿ) ಗುರುತಿಸಿ ಅದರ ಮಧ್ಯಬಿಂದುವಿನ ಮೇಲೆ ನಿಮ್ಮ ಕತ್ತಿಯ ಪ್ರಹಾರ ಬಿತ್ತೋ, ಒಂದೇ ಏಟಿಗೆ ಕಾಯಿ ಎರಡು ಹೋಳಾಗುತ್ತದೆ!

ತೆಂಗಿನಕಾಯಿಯ ಮರ್ಮಸ್ಥಾನ ಆ ಬಿಂದು! ಭಟ್ ಏಂಡ್ ಭಟ್ ಚಾನೆಲ್‌ನವರಂತೂ ಕತ್ತಿಯ ಅಗತ್ಯವೂ ಇಲ್ಲದೆ, ತೆಂಗಿನ ಕಾಯಿಯ ಆ ಬಿಂದುವನ್ನು ಕಡೆಯುವ ಕಲ್ಲಿಗೋ ಬೇರಾವುದೋ ಬಂಡೆಗೋ ಹೊಡೆದರೆ ಸಮಪ್ರಮಾಣದ ಎರಡು ಹೋಳಾಗು ವುದನ್ನು ತೋರಿಸಿದರು. ಇದಕ್ಕೆ ಸಂಬಂಧಿಸಿದಂತೆಯೇ ನಮ್ಮಕಡೆ ಒಂದು ಜನಪದ ನಂಬಿಕೆ ಅಥವಾ ಆಚರಣೆಯೂ ಇದೆ.

ಮದುವೆಯಂದು ಸಂಜೆ ವಧುವನ್ನು ಮನೆತುಂಬಿಸಿಕೊಳ್ಳುವಾಗ ವರನು ವಧುವಿನೊಡಗೂಡಿ ದೇವರ ಪೂಜೆ ಮಾಡಬೇಕು.
ನೈವೇದ್ಯಕ್ಕೆ ತೆಂಗಿನಕಾಯಿ ಒಡೆಯುವಾಗ, ಜುಟ್ಟು ತೆಗೆಯದೆಯೇ ಅಂದರೆ ಕಣ್ಣುಗಳ ಮತ್ತು ಗೆರೆಗಳ ಲೆಕ್ಕಾಚಾರ ಇಲ್ಲದೇನೇ, ಕತ್ತಿಯ ಒಂದೇ ಏಟಿಗೆ ತೆಂಗಿನಕಾಯಿ ಸಮಪ್ರಮಾಣದ ಹೋಳುಗಳಾಗಬೇಕು. ಅದು ಮುಂದೆ ಶೋಭನರಾತ್ರಿಗೆ ಶುಭಶಕುನ. ಅವನ ಗಂಡಸುತನದ ಪ್ರತಿಫಲನ. ಜುಟ್ಟು ಬಿಟ್ಟುಕೊಡದಿರುವುದರ ಗುಟ್ಟು!

error: Content is protected !!