Friday, 13th December 2024

Money Tips: CIBIL Score Vs CIBIL Report; ಸಾಲ ಪಡೆಯಲು ಯಾವುದು ಮುಖ್ಯ?

Money Tips

ಬೆಂಗಳೂರು: ಆಧುನಿಕ ಕಾಲಘಟ್ಟದಲ್ಲಿ ಜೀವನ ವೆಚ್ಚ ದುಬಾರಿಯಾಗಿದ್ದು, ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಕೃಷಿ ಚಟುವಟಿಕೆ, ಮನೆ ನಿರ್ಮಾಣ, ಶಿಕ್ಷಣ, ವಾಹನ ಖರೀದಿ, ಮದುವೆ ಹೀಗೆ ಜೀವನದ ಕೆಲವೊಂದು ಪ್ರಮುಖ ಘಟ್ಟಗಳಲ್ಲಿ ಸಾಲ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ. ಅದಕ್ಕೆ ತಕ್ಕಂತೆ ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಲಭ್ಯವಿದೆ. ಬ್ಯಾಂಕ್‌ ಸಾಲ ಪಡೆಯಲು ಸಿಬಿಲ್‌ ಸ್ಕೋರ್‌ (CIBIL Score) ಮತ್ತು ಸಿಬಿಲ್‌ ರಿಪೋರ್ಟ್‌ (CIBIL Report) ಮುಖ್ಯವಾಗುತ್ತದೆ (CIBIL Score Vs CIBIL Report). ಹಾಗಾದರೆ ಏನಿದು ಸಿಬಿಲ್‌ ಸ್ಕೋರ್‌ ಮತ್ತು ಸಿಬಿಲ್‌ ರಿಪೋರ್ಟ್‌? ಸಾಲ ಹೊಂದಲು ಯಾವುದು ಮುಖ್ಯ? ಇದನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ? ಮುಂತಾದ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Money Tips).

Cibil Score

ಏನಿದು ಸಿಬಿಲ್‌ ಸ್ಕೋರ್‌?

ಯಾವುದೇ ಬ್ಯಾಂಕ್‌ನಿಂದ ಸಾಲ ಪಡೆಯಲು ಸಿಬಿಲ್‌ (ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್-CIBIL) ಸ್ಕೋರ್‌ ಮುಖ್ಯವಾಗುತ್ತದೆ. ಅಂದರೆ ಉತ್ತಮ ಸಿಬಿಲ್ ಸ್ಕೋರ್ ಅನ್ನು ಹೊಂದಿದ್ದರೆ ಸುಲಭವಾಗಿ ಸಾಲ ಪಡೆಯಬಹುದು. 300ರಿಂದ 900ರ ನಡುವೆ ಇರುವ ಸಿಬಿಲ್ ಸ್ಕೋರ್ ಹೆಚ್ಚಾದಷ್ಟೂ ಒಳ್ಳೆಯದು. ಅದರಲ್ಲಿಯೂ ಸಿಬಿಲ್ ಸ್ಕೋರ್‌ ಅನ್ನು 750ಕ್ಕಿಂತ ಹೆಚ್ಚು ಕಾಯ್ದುಕೊಳ್ಳುವುದು ಅನಿವಾರ್ಯ. ನೀವು ಮೊದಲೇ ಯಾವುದಾದರೂ ಸಾಲ ಪಡೆದುಕೊಂಡಿದ್ದರೆ ಅದರ ಪಾವತಿ, ನಿಮ್ಮ ಬ್ಯಾಂಕ್‌ ಟ್ರಾನ್ಸಾಕ್ಷನ್‌ ಆಧಾರದ ಮೇಲೆ ಸಿಬಿಲ್‌ ಸ್ಕೋರ್‌ ಅನ್ನು ನಿರ್ಣಯಿಸಲಾಗುತ್ತದೆ. ಅಂದರೆ ಸಕಾಲಕ್ಕೆ ಸಾಲ ಮರುಪಾವತಿ, ಸಾಲ ಬಳಕೆಯ ಪ್ರಮಾಣ, ಯಾವೆಲ್ಲ ಉದ್ದೇಶಗಳಿಗೆ ಸಾಲ ಪಡೆಯಲಾಗಿದೆ ಎನ್ನುವುದನ್ನು ಪರಿಗಣಿಸಿ ಸಿಬಿಲ್‌ ಸ್ಕೋರ್‌ ಅನ್ನು ನಿರ್ಧರಿಸಲಾಗುತ್ತದೆ. ಕ್ರೆಡಿಟ್ ಕಾರ್ಡ್ ಬಿಲ್‌ ಮತ್ತು ಬಾಕಿ ಇರುವ ಸಾಲಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದರಿಂದ ಸಿಬಿಲ್‌ ಸ್ಕೋರ್‌ ಹೆಚ್ಚಿಸಬಹುದು. ಒಂದು ವೇಳೆ ನೀವು ಹಿಂದಿನ ಸಾಲವನ್ನು ಸಮರ್ಪಕವಾಗಿ ಪಾವತಿಸದಿದ್ದರೆ ಸಿಬಿಲ್‌ ಸ್ಕೋರ್‌ ಕಡಿಮೆಯಾಗಿ ಹೊಸ ಸಾಲ ಮಂಜೂರಾತಿಗೆ ಅಡ್ಡಿಯಾಗುತ್ತದೆ.

Cibil Report

ಏನಿದು ಸಿಬಿಲ್‌ ರಿಪೋರ್ಟ್‌?

ಸಾಲ ಪಡೆದ ಮತ್ತು ಅದನ್ನು ಮರುಪಾವತಿಸಿದ ವಿವರವಾದ ವರದಿಯನ್ನು ಸಿಬಿಲ್‌ ರಿಪೋರ್ಟ್‌ ಎಂದು ಕರೆಯಲಾಗುತ್ತದೆ. ಸದ್ಯ ಚಾಲ್ತಿಯಲ್ಲಿರುವ ಸಾಲ ಮತ್ತು ಹಿಂದೆ ಪಡೆದ, ತೀರಿಸಿದ ಅಥವಾ ಬಾಕಿ ಇರುವ ಸಾಲ ಸೇರಿದಂತೆ ಎಲ್ಲಾ ವಿವರಗಳನ್ನು ಇದು ಒಳಗೊಂಡಿರುತ್ತದೆ. ಇದರಲ್ಲಿ ನಿಮ್ಮ ಹೆಸರು, ವಿಳಾಸ, ಉದ್ಯೋಗ ಮತ್ತು ಪ್ಯಾನ್‌ ವಿವರಗಳೂ ಇರುತ್ತವೆ. ಸಿಬಿಲ್ ಸ್ಕೋರ್ ಅನ್ನು ಆಧರಿಸಿ ಸಿಬಿಲ್ ರಿಪೋರ್ಟ್‌ತಯಾರಿಸಲಾಗುತ್ತದೆ. ಪ್ರಸ್ತುತ ನೀವು ಹೊಂದಿರುವ ಸಿಬಿಲ್‌  ಸ್ಕೋರ್‌ಗೆ ಕಾರಣವೇನು ಎನ್ನುವುದನ್ನು ಸಿಬಿಲ್‌ ರಿಪೋರ್ಟ್‌ ವಿಶ್ಲೇಷಿಸುತ್ತದೆ.

ವ್ಯತ್ಯಾಸಗಳೇನು?

  • ಸಂಕ್ಷಿಪ್ತ  ಮತ್ತು ವಿವರವಾದ ಮಾಹಿತಿ:  ಸಿಬಿಲ್ ಸ್ಕೋರ್ ನಿಮ್ಮ ಸಾಲದ ಕುರಿತಾದ ವಿವರಗಳ ಸಾರಾಂಶವಾಗಿದ್ದರೆ, ಸಿಬಿಲ್ ರಿಪೋರ್ಟ್‌ ಸಮಗ್ರ ನೋಟವನ್ನು ನೀಡುತ್ತದೆ.
  • ಸಂಖ್ಯಾತ್ಮಕ ಮತ್ತು ವಿವರಣಾತ್ಮಕ: ಸಿಬಿಲ್‌ ಸ್ಕೋರ್ ಒಂದು ಸಾಲದ ಮಾಹಿತಿಯಾಗಿದ್ದರೆ ಸಿಬಿಲ್‌ ರಿಪೋರ್ಟ್‌ ವಿವಿಧ ಸಾಲಗಳು ಮತ್ತು ಮರುಪಾವತಿ ನಡವಳಿಕೆಯ ಬಗ್ಗೆ ವಿವರ ಒದಗಿಸುತ್ತದೆ.
  • ತಕ್ಷಣದ ತೀರ್ಪು ಮತ್ತು ಸಮಗ್ರ ವಿಶ್ಲೇಷಣೆ: ಸಿಬಿಲ್‌ ಸ್ಕೋರ್‌ ಎನ್ನುವುದು ಆ ಕ್ಷಣಕ್ಕೆ ವ್ಯಕ್ತಿಯ ಸಾಲ ಮರುಪಾವತಿಯ ಸಾಮರ್ಥ್ಯ ಪರಿಶೀಲಿಸಲು ಬಳಸುವ ಅಂಕಿ ಅಂಶ. ಇನ್ನು ಬ್ಯಾಂಕ್‌ಗಳು ಸಾಲ ನೀಡುವ ಮೊದಲು ಅರ್ಜಿದಾರರ ಸಂಪೂರ್ಣ ದಾಖಲಾತಿಗಳನ್ನು ಪರಿಶೀಲಿಸಲು ಸಿಬಿಲ್‌ ರಿಪೋರ್ಟ್‌ ಮೊರೆ ಹೋಗುತ್ತವೆ. ಅದನ್ನು ಆಧರಿಸಿ ಸಾಲದ ಮೊತ್ತ ಮತ್ತು ಮಿತಿ ನಿರ್ಧರಿಸಲಾಗುತ್ತದೆ.

ಯಾವುದು ಮುಖ್ಯ?

  • ಆರಂಭಿಕ ಪರಿಶೀಲನೆ: ಸಾಲ ಪ್ರಕ್ರಿಯೆಯ ಆರಂಭಿಕ ಹಂತಗಳಲ್ಲಿ, ಸಾಲದಾತರು ಅರ್ಜಿದಾರರ ಹಿನ್ನಲೆ ಪರೀಕ್ಷಿಸಲು ಸಿಬಿಲ್ ಸ್ಕೋರ್ ಅನ್ನು ಬಳಸುತ್ತಾರೆ. ಹೆಚ್ಚಿನ ಸ್ಕೋರ್‌ ಸಾಲ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತದೆ. ಕಡಿಮೆ ಸ್ಕೋರ್‌ ಅರ್ಜಿ ತಿರಸ್ಕಾರಕ್ಕೆ ಅಥವಾ ನಿಕಟ ಪರಿಶೀಲನೆಗೆ ಕಾರಣವಾಗಬಹುದು.
  • ವಿವರವಾದ ಮೌಲ್ಯಮಾಪನ: ಹೆಚ್ಚಿನ ಸಾಲದ ಮೊತ್ತಕ್ಕಾಗಿ ಅಥವಾ ಅರ್ಜಿದಾರರ ಸಿಬಿಲ್ ಸ್ಕೋರ್ ಕಡಿಮೆ ಇದ್ದಾಗ ಸಾಲದಾತರು ಸಿಬಿಲ್ ರಿಪೋರ್ಟ್‌ ಪರಿಶೀಲಿಸುತ್ತಾರೆ. ರಿಪೋರ್ಟ್‌ ಪಾವತಿ ಮಾದರಿ, ಬಳಸಿದ ಸಾಲದ ಪ್ರಕಾರ ಮತ್ತು ಇತ್ತೀಚಿನ ಕ್ರೆಡಿಟ್ ವಿಚಾರಣೆಗಳ ಬಗ್ಗೆ ಸಮಗ್ರ ಒಳನೋಟಗಳನ್ನು ಒದಗಿಸುವುದೇ ಇದಕ್ಕೆ ಕಾರಣ. ಸಾಲದಾತರು ಸಾಲ ನೀಡುವುದಕ್ಕೆ ಸಂಬಂಧಿಸಿದ ಅಪಾಯವನ್ನು ನಿರ್ಣಯಿಸಲು ಈ ಮಾಹಿತಿಯನ್ನು ಬಳಸುತ್ತಾರೆ.
  • ಸಮಾಲೋಚನೆ:  ಸಿಬಿಲ್ ರಿಪೋರ್ಟ್‌ನಲ್ಲಿ ಸಂದೇಹ ಕಂಡು ಬಂದರೆ ಸಾಲದಾತರು ಅರ್ಜಿದಾರರಿಂದ ಹೆಚ್ಚುವರಿ ದಾಖಲೆಗಳನ್ನು ಕೇಳಬಹುದು ಅಥವಾ ಹೆಚ್ಚಿನ ಬಡ್ಡಿದರದಲ್ಲಿ ಸಾಲವನ್ನು ನೀಡಬಹುದು. ಉತ್ತಮ ಸ್ಕೋರ್‌ ಇದ್ದರೆ ಬಡ್ಡಿ ಪ್ರಮಾಣವೂ ಕಡಿಮೆ ಇರುತ್ತದೆ.

ಒಟ್ಟಿನಲ್ಲಿ ಸಾಲ ವಿತರಣೆ ಪ್ರಕ್ರಿಯೆಯಲ್ಲಿ ಸಿಬಿಲ್ ಸ್ಕೋರ್ ಮತ್ತು ಸಿಬಿಲ್ ರಿಪೋರ್ಟ್‌ ಎರಡೂ ಮುಖ್ಯ. ಆರಂಭಿಕ ತಪಾಸಣೆ ಮತ್ತು ತ್ವರಿತ ನಿರ್ಧಾರಗಳಿಗೆ ಸಿಬಿಲ್ ಸ್ಕೋರ್ ನಿರ್ಣಾಯಕವಾಗಿದ್ದರೆ ಅರ್ಜಿದಾರರ ಕ್ರೆಡಿಟ್ ಇತಿಹಾಸದ ಆಳವಾದ ತಿಳುವಳಿಕೆಗೆ ಸಿಬಿಲ್ ರಿಪೋರ್ಟ್‌ ಅತ್ಯಗತ್ಯ. ಅಂತಿಮವಾಗಿ ಸಾಲದಾತರು ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಎರಡನ್ನೂ ಅವಲಂಬಿಸುತ್ತಾರೆ.

ಈ ಸುದ್ದಿಯನ್ನೂ ಓದಿ: Money Tips: ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ ಅಂಶ ತಿಳಿದಿರಲಿ