Boss Wallah: ಫ್ರೀಡಂ ಅಪ್ಲಿಕೇಶನ್ ಸ್ವಾಧೀನಪಡಿಸಿಕೊಂಡ ಶಶಿ ರೆಡ್ಡಿಯ ಬಾಸ್ ವಲ್ಲಾ
ಹೂಡಿಕೆದಾರ ಮತ್ತು ಸರಣಿ ಉದ್ಯಮಿ ಶಶಿ ರೆಡ್ಡಿ ಅವರು ಸ್ಥಾಪಿಸಿದ ಬಾಸ್ ವಲ್ಲಾ ಸಂಸ್ಥೆ ಫ್ರೀಡಂ ಆ್ಯಪ್ ಅನ್ನು ಖರೀದಿಸಲು ಸುವಿಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ನೊಂದಿಗೆ ಔಪಚಾರಿಕ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.


ಬೆಂಗಳೂರು: ಜನಪ್ರಿಯ ಅಪ್ಲಿಕೇಷನ್ ಫ್ರೀಡಂ ಆ್ಯಪ್ (Ffreedom App) ಅನ್ನು ಉದ್ಯಮಿ ಶಶಿ ರೆಡ್ಡಿ (Sashi Reddi) ಅವರ ಕಂಪನಿ ಬಾಸ್ ವಲ್ಲಾ (Boss Wallah) ಸ್ವಾಧೀನಪಡಿಸಿಕೊಂಡಿದೆ. ಹೂಡಿಕೆದಾರ ಮತ್ತು ಸರಣಿ ಉದ್ಯಮಿ ಶಶಿ ರೆಡ್ಡಿ ಅವರು ಸ್ಥಾಪಿಸಿದ ಬಾಸ್ ವಲ್ಲಾ ಸಂಸ್ಥೆ ಫ್ರೀಡಂ ಆ್ಯಪ್ ಅನ್ನು ಖರೀದಿಸಲು ಸುವಿಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ನೊಂದಿಗೆ ಔಪಚಾರಿಕ ಒಪ್ಪಂದವನ್ನು ಮಾಡಿಕೊಂಡಿದೆ. ಪರ್ಸನಲ್ ಫೈನಾನ್ಸ್ ಕೋರ್ಸ್ ಒದಗಿಸುವ ಫ್ರೀಡಂ ಆ್ಯಪ್ ಜತೆ ಸೇರಿ ಬಾಸ್ ವಲ್ಲಾ ಇನ್ನುಮುಂದೆ ಅನೇಕ ವ್ಯವಹಾರಗಳಿಗೆ ಸಾವಿರಾರು ತಜ್ಞರಿಗೆ ನೆರವು, ಮಾರ್ಗದರ್ಶನ ನೀಡಲಿದೆ. ಇದು ಶ್ರೇಣಿ 2 ಮತ್ತು ಶ್ರೇಣಿ 3 ಪಟ್ಟಣಗಳ ಮಹತ್ವಾಕಾಂಕ್ಷೆಯ ಉದ್ಯಮಿಗಳಿಗೆ ಎದುರಾಗುವ ಮಾರುಕಟ್ಟೆಯಲ್ಲಿನ ಸವಾಲುಗಳನ್ನು ಎದುರಿಸಲು ಸಹಾಯ ಮಾಡಲಿದೆ.
"ಜೆಇಇ ಮತ್ತು ಸರ್ಕಾರಿ ಪರೀಕ್ಷೆಗಳಿಗೆ ನೆರವಾಗುವ ಹಲವು ಫ್ಲಾಟ್‌ಫಾರ್ಮ್‌ಗಳಿವೆ. ಆದರೆ ಭಾರತಕ್ಕೆ ಅಗತ್ಯವಾದ ಉದ್ಯೋಗವನ್ನು ಒದಗಿಸುವ ಮತ್ತು ಆದಾಯವನ್ನು ಗಳಿಸುವ ವ್ಯವಹಾರಗಳನ್ನು ನಡೆಸಲು ಬಯಸುವ ಜನರಿಗೆ ಸೂಕ್ತ ಕೋರ್ಸ್‌ನ ಕೊರತೆ ಇದೆ. ಬಾಸ್ ವಲ್ಲಾ ಫ್ಲಾಟ್‌ಫಾರ್ಮ್ ಆ ಕೊರತೆಯನ್ನು ನೀಗುತ್ತಿದೆ" ಎಂದು ಬಾಸ್ ವಲ್ಲಾ ಸಂಸ್ಥಾಪಕರೂ ಆದ ಸಿಇಒ ಶಶಿ ರೆಡ್ಡಿ ಹೇಳಿದ್ದಾರೆ.
ಶಶಿ ರೆಡ್ಡಿ ಮತ್ತು ಸಹವರ್ತಿಗಳಿಂದ 7 ಮಿಲಿಯನ್ ಡಾಲರ್ (60 ಕೋಟಿ ರೂ.) ಆರಂಭಿಕ ಹೂಡಿಕೆಯೊಂದಿಗೆ, ಬಾಸ್ ವಲ್ಲಾ ಸಾವಿರಾರು ಉದ್ಯಮಿಗಳಿಗೆ ಕೌಶಲ್ಯಗಳನ್ನು ಒದಗಿಸಲು ಮತ್ತು ಅಗತ್ಯ ಸಲಹೆಗಳನ್ನು ನೀಡಲು ಸಮಗ್ರ ವೇದಿಕೆಯನ್ನು ಒದಗಿಸುವ ನಿರೀಕ್ಷೆ ಇದೆ.
ಡಿಜಿಟಲ್ ವ್ಯವಹಾರಗಳು, ಮನೆ ಆಧಾರಿತ ವ್ಯವಹಾರಗಳು, ಸಣ್ಣ ಪ್ರಮಾಣದ ಉತ್ಪಾದನೆ, ಕರಕುಶಲ ವಸ್ತುಗಳು, ಕೃಷಿ, ಪಶುಸಂಗೋಪನೆ, ಚಿಲ್ಲರೆ ವ್ಯಾಪಾರ ಮತ್ತು ಆಹಾರ ವ್ಯವಹಾರಗಳು ಸೇರಿದಂತೆ 10ಕ್ಕೂ ಅಧಿಕ ವಿಭಾಗಗಳಿಗೆ ಈ ವೇದಿಕೆ ತನ್ನನ್ನು ವಿಸ್ತರಿಸಿಕೊಳ್ಳಲಿದೆ. ಈ ರೀತಿಯ ವ್ಯವಹಾರಗಳನ್ನು ಹೆಚ್ಚಿನ ಬಂಡವಾಳ ಹೂಡಿಕೆಯಿಲ್ಲದೆ ನಿರ್ವಹಿಸಬಹುದು. ತಮ್ಮ ವ್ಯವಹಾರವನ್ನು ಮೆಟ್ರೋ ನಗರಗಳಿಗೆ ಸ್ಥಳಾಂತರಿಸದೆ ಸಣ್ಣ ಪಟ್ಟಣದಲ್ಲಿ ನಡೆಸಬಹುದು ಕಂಪನಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Tata Avinya: ಅಮೆರಿಕದ ಟೆಸ್ಲಾ ಕಾರಿಗೆ ಟಾಟಾದ ಅವಿನ್ಯಾ ಸವಾಲ್!
ಯಾರು ಈ ಶಶಿ ರೆಡ್ಡಿ?
ಶಶಿ ರೆಡ್ಡಿ ಫಿಲಡೆಲ್ಫಿಯಾ ಮೂಲದ ಆರಂಭಿಕ ಹಂತದ ಸಾಹಸೋದ್ಯಮ ಬಂಡವಾಳ ಸಂಸ್ಥೆ ಎಸ್‌ಆರ್‌ಐ ಕ್ಯಾಪಿಟಲ್‌ನ ಸ್ಥಾಪಕ ಮತ್ತು ವ್ಯವಸ್ಥಾಪಕ ಪಾಲುದಾರರು. ಅವರು ವೆಸ್ಟ್ ಬ್ರಿಡ್ಜ್ ಕ್ಯಾಪಿಟಲ್‌ನ ಸಲಹೆಗಾರರೂ ಹೌದು. ಈ ಹಿಂದೆ ಶಶಿ ವಿಶ್ವದ ಅತಿದೊಡ್ಡ ಸ್ವತಂತ್ರ ಸಾಫ್ಟ್‌ವೇರ್ ಪರೀಕ್ಷಾ ಕಂಪನಿ ಆ್ಯಪ್‌ಲ್ಯಾಬ್ಸ್‌ನ ಸ್ಥಾಪಕ ಮತ್ತು ಸಿಇಒ ಆಗಿದ್ದರು. ಇದು ಭಾರತ, ಅಮೆರಿಕ ಮತ್ತು ಇಂಗ್ಲೆಂಡ್‌ನಲ್ಲಿ ಕಾರ್ಯಾಚರಣೆಗಳನ್ನು ಹೊಂದಿದೆ. ಆ್ಯಪ್‌ಲ್ಯಾಬ್ಸ್‌ಗೆ ವೆಸ್ಟ್ ಬ್ರಿಡ್ಜ್ ಕ್ಯಾಪಿಟಲ್ ಮತ್ತು ಸಿಕ್ವೊಯಾ ಕ್ಯಾಪಿಟಲ್ ಇಂಡಿಯಾ ಧನಸಹಾಯ ನೀಡಿವೆ. ಸಿಎಸ್‌ಸಿ (ಈಗ ಡಿಎಕ್ಸ್‌ಸಿ) ಆ್ಯಪ್‌ಲ್ಯಾಬ್ಸ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಚೆನ್ನೈ ಮೂಲದ 60 ವರ್ಷದ ಶಶಿ ರೆಡ್ಡಿ ಅಮೆರಿಕದಲ್ಲಿ ನೆಲೆಸಿದ್ದಾರೆ.