Saturday, 14th December 2024

Stock Market : ಷೇರು ಮಾರುಕಟ್ಟೆಯಲ್ಲಿ ‘ರಕ್ತಪಾತ’, ಹೂಡಿಕೆದಾರರಿಗೆ 5 ಲಕ್ಷ ಕೋಟಿ ರೂ. ನಷ್ಟ

Stocks Market

ಬೆಂಗಳೂರು : ಅಮೆರಿಕದಲ್ಲಿ ಉದ್ಯೋಗ ಕಡಿತದ ಬಿಸಿಯ ಹಿನ್ನೆಲೆಯಲ್ಲಿ ಜಾಗತಿಕ ಷೇರು ಮಾರುಕಟ್ಟೆಯಲ್ಲಿ (Stock Market) ರಕ್ತಪಾತ ಉಂಟಾಗಿದೆ. ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಸೋಮವಾರ ತೀವ್ರ ಕುಸಿತ ಎದುರಿಸಿದವು. ಮಧ್ಯಾಹ್ನದ ವೇಳೆ ಬಿಎಸ್ಇ ಸೆನ್ಸೆಕ್ಸ್ 1,070.69 ಪಾಯಿಂಟ್ಸ್ ಕುಸಿದು 81,130.47 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ 50 314.10 ಪಾಯಿಂಟ್ಸ್ ಕುಸಿದು 24,831 ಕ್ಕೆ ತಲುಪಿದೆ. ಸಣ್ಣ ಮತ್ತು ಮಿಡ್‌ಕ್ಯಾಪ್‌ ಷೇರುಗಳು ಸೇರಿದಂತೆ ಇತರ ಮಾರುಕಟ್ಟೆ ಸೂಚ್ಯಂಕಗಳು ತೀವ್ರವಾಗಿ ಕುಸಿದವು. ಸೂಚ್ಯಂಕ ಚಂಚಲತೆಯು 8% ಕ್ಕಿಂತ ಹೆಚ್ಚಾಗಿತ್ತು.

ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ (ಬಿಎಸ್ಇ) ಪಟ್ಟಿ ಮಾಡಲಾದ ಎಲ್ಲಾ ಕಂಪನಿಗಳ ಮಾರುಕಟ್ಟೆ ಬಂಡವಾಳ ಸುಮಾರು 5 ಲಕ್ಷ ಕೋಟಿ ರೂ.ಗಳ ನಷ್ಟ ಅನುಭವಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಎಲ್ &ಟಿ, ಇನ್ಫೋಸಿಸ್, ಐಟಿಸಿ, ಎಚ್ಸಿಎಲ್ ಟೆಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಸೂಚ್ಯಂಕದ ಕುಸಿತದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.

ರಿಲಯನ್ಸ್ ಷೇರುಗಳು ಶೇಕಡಾ 1.8 ಕ್ಕಿಂತ ಹೆಚ್ಚು ಕುಸಿದರೆ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಸ್‌ಬಿಐನಂತ ಬ್ಯಾಂಕಿಂಗ್ ಷೇರುಗಳು ತೀವ್ರವಾಗಿ ಕುಸಿದಿವೆ. ದೇಶದ ಅತಿದೊಡ್ಡ ಸಾರ್ವಜನಿಕ ಬ್ಯಾಂಕಿನ ಷೇರುಗಳನ್ನು ಮಾರಾಟ ಮಾಡಲು ಗೋಲ್ಡ್ಮನ್ ಸ್ಯಾಚ್ಸ್ ಮುಂದಾದ ಹಿನ್ನೆಲೆಯಲ್ಲಿ ಎಸ್ಬಿಐ ಷೇರುಗಳ ಮೌಲ್ಯ 4% ಕ್ಕಿಂತ ಹೆಚ್ಚು ಕುಸಿತ ಕಂಡಿತು. ನಿಫ್ಟಿ 50ರಲ್ಲಿ ಎಚ್‌ಸಿ ಎಲ್ಟೆಕ್, ಟಾಟಾ ಮೋಟಾರ್ಸ್, ಐಟಿಸಿ, ಎನ್ಟಿಪಿಸಿ ಮತ್ತು ಬಿಪಿಸಿಎಲ್ ಹೆಚ್ಚು ನಷ್ಟ ಅನುಭವಿಸಿದ ಇತರ ಷೇರುಗಳಾಗಿವೆ.

ಮಾರುಕಟ್ಟೆ ಕುಸಿತದ ಹಿಂದಿನ ಕಾರಣವೇನು?

ಅಮೇರಿಕದಲ್ಲಿ ಉದ್ಯೋಗ ವರದಿಗೆ ಮುಂಚಿತವಾಗಿ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ. ಇದು ಬಡ್ಡಿದರ ಕಡಿತಕ್ಕೆ ಫೆಡರಲ್ ರಿಸರ್ವ್‌ನ ವಿಧಾನದ ಮೇಲೆ ಪರಿಣಾಮ ಬೀರಲಿದೆ. ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರ ಇತ್ತೀಚಿನ ಹೇಳಿಕೆಗಳು ಕಾರ್ಮಿಕ ಮಾರುಕಟ್ಟೆ ದುರ್ಬಲಗೊಳ್ಳುತ್ತಿರುವ ಬಗ್ಗೆ ಕಳವಳ ಉಂಟು ಮಾಡಿದೆ. ಇದು ಸೆಪ್ಟೆಂಬರ್‌ನಲ್ಲಿ ಸಂಭಾವ್ಯ ದರ ಕಡಿತಕ್ಕೆ ಕಾರಣವಾಗಿದೆ. ವಿಶ್ಲೇಷಕರು 165,000 ಹೊಸ ಉದ್ಯೋಗಗಳ ಹೆಚ್ಚಳ ಮತ್ತು ನಿರುದ್ಯೋಗ ದರವು 4.2% ಕ್ಕೆ ಇಳಿಯುತ್ತದೆ ಎಂದು ನಿರೀಕ್ಷಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Stock Market: ಷೇರುಪೇಟೆಯಲ್ಲಿ ಮುಂದುವರಿದ ತಲ್ಲಣ; ಸೆನ್ಸೆಕ್ಸ್‌ 700 ಪಾಯಿಂಟ್‌ ಕುಸಿತ

ಭಾರತೀಯ ಈಕ್ವಿಟಿ ಮಾರುಕಟ್ಟೆಗಳಲ್ಲಿನ ಕುಸಿತವು ಬ್ಯಾಂಕ್ ಷೇರುಗಳ ಕುಸಿತಕ್ಕೆ ಕಾರಣವಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ಅಂಕಿ ಅಂಶವು ಠೇವಣಿಗಳಲ್ಲಿ 11.7% ಮತ್ತು ಸಾಲದಲ್ಲಿ 15% ಹೆಚ್ಚಳವನ್ನು ತೋರಿಸಿದೆ. ಇವೆರಡರ ನಡುವಿನ ಅಂತರವನ್ನು ಹೆಚ್ಚಿಸಿರುವುದು ಕೂಡ ಆತಂಕಕ್ಕೆ ಕಾರಣವಾಗಿದೆ.