Monday, 5th December 2022

ಕನ್ನಡ, ನಾಡಗೀತೆ ವಿಚಾರದಲ್ಲಿ ಬದ್ಧತೆ ತೋರಿದ್ದೇವೆ

ಸಂದರ್ಶನ: ಪ್ರದೀಪ್‌ ಕುಮಾರ್‌ ಎಂ.

ಕನ್ನಡ ಕಡ್ಡಾಯಕ್ಕೆ ಶಾಸನ ಬಲ, ನಾಡಗೀತೆ ರಾಗ ಸಂಯೋಜನೆ 

ಯಾರನ್ನೋ ಮೆಚ್ಚಿಸುವ ಉದ್ದೇಶದಿಂದ ಈ ಕೆಲಸ ಮಾಡಿಲ್ಲ

ರಾಜ್ಯ ಬಿಜೆಪಿ ಸರಕಾರ ಕಳೆದ ಒಂದು ವಾರದಲ್ಲಿ ಕನ್ನಡ ಭಾಷೆ ಮತ್ತು ನಾಡಗೀತೆಗೆ ಸಂಬಂಧಿಸಿದಂತೆ ಎರಡು ಮಹತ್ವದ
ನಿರ್ಧಾರಗಳನ್ನು ಕೈಗೊಂಡಿದೆ. ಮೊದಲನೆಯದ್ದು ಕನ್ನಡವನ್ನು ಅಧಿಕೃತ ಭಾಷೆಯಾಗಿ ಆಡಳಿತ ಸೇರಿದಂತೆ ಎಲ್ಲಾ ಹಂತ ಗಳಲ್ಲಿ ಅನುಷ್ಠಾನಗೊಳಿಸಲು ಶಾಸನಾತ್ಮಕ ಬಲ ನೀಡುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022’ಅನ್ನು ವಿಧಾನಸಭೆ ಯಲ್ಲಿ ಮಂಡಿಸಿದ್ದು ಮತ್ತು ಸುಮಾರು 18 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಾಡಗೀತೆ ಧಾಟಿಯ ಗೊಂದಲಕ್ಕೆ ತೆರೆ ಎಳೆದು ಮೈಸೂರು ಅನಂತಸ್ವಾಮಿ ಸ್ವರ ಸಂಯೋಜನೆ ಯನ್ವಯ 2.30 ನಿಮಿಷದಲ್ಲಿ ನಾಡಗೀತೆ ಹಾಡಬೇಕು ಎಂಬ ಆದೇಶ ಹೊರಡಿಸಿರು ವುದು.

ಇವೆರಡೂ ದಶಗಳ ಬೇಡಿಕೆಯಾಗಿದ್ದರೂ ಕಳೆದ ಮೂರು ವರ್ಷ ಮೌನವಾಗಿದ್ದು, ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಇರುವಾಗ ಇಂತಹ ಪ್ರಮುಖ ತೀರ್ಮಾನ ಗಳನ್ನು ಕೈಗೊಂಡಿರುವುದು ರಾಜಕೀಯ ಉದ್ದೇಶದಿಂದ ಎಂಬ ಟೀಕೆಯೂ ವ್ಯಕ್ತ ವಾಗಿದೆ. ಈ ಎರಡೂ ವಿಚಾರಗಳ ಕುರಿತು ಸರಕಾರ ಕೈಗೊಂಡಿರುವ ನಿರ್ಧಾರ ಮತ್ತು ಅದಕ್ಕೆ ಕಾರಣಗಳನ್ನು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ.ಸುನೀಲ್ ಕುಮಾರ್ ‘ವಿಶ್ವವಾಣಿ’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಈ ನಿರ್ಧಾರಗಳು ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಇರುವ ಬಿಜೆಪಿಯ ಬದ್ಧತೆಗಳ ದ್ಯೋತಕವೇ ಹೊರತು ಬೇರೇನೂ ಅಲ್ಲ ಎಂದು ಹೇಳಿದ್ದಾರೆ. ಸುನೀಲ್ ಕುಮಾರ್ ಅವರ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ ಎಂಬ ಕಾರಣಕ್ಕೆ ಬಿಜೆಪಿ ಸರಕಾರಕ್ಕೆ ಕನ್ನಡ ಭಾಷೆ ಮತ್ತು ನಾಡಗೀತೆಯ ಬಗ್ಗೆ ದಿಡೀರ್ ಪ್ರೀತಿ ಬಂದಿದ್ದೇ?
ಕೆಲವರು ಹಾಗೆ ಭಾವಿಸಿರಬಹುದು. ಆದರೆ, ನಮ್ಮ ಸರಕಾರ ಹಿಂದೆಯೇ ಈ ಬಗ್ಗೆ ಯೋಚಿಸಿತ್ತು. ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇದೀಗ ಎಲ್ಲವೂ ಒಂದು ಹಂತಕ್ಕೆ ಬಂದು ನಿಂತಿದೆ. ಅದರಂತೆ ಸರಕಾರ ತೀರ್ಮಾನ ಕೈಗೊಂಡಿದೆ. ಇದು
ಬಿಜೆಪಿಯ ಬದ್ಧತೆಯಾಗಿತ್ತು.

ಒಂದು ರಾಜ್ಯದ ಭಾಷೆಯನ್ನು ಆಡಳಿತ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕಡ್ಡಾಯಗೊಳಿಸಲು ಕಾನೂನು ಬೇಕಾಗಿತ್ತೇ? ಕರ್ನಾಟಕ ಏಕೀಕರಣ, ಗೋಕಾಕ್ ಚಳವಳಿ ಇವೆಲ್ಲವೂ ಕರ್ನಾಟಕವನ್ನು ಒಗ್ಗೂಡಿಸುವ, ಕರ್ನಾಟಕಕ್ಕೆ ಪ್ರತ್ಯೇಕ ಅಸ್ಮಿತೆ ಕೊಡುವ ಕೆಲಸ ಮಾಡಿತ್ತು. ಕನ್ನಡ ಎಂದರೆ ಕೇವಲ ಭಾಷೆ ಅಲ್ಲ. ಅದರಲ್ಲಿ ಅಸ್ಮಿತೆ, ಭಾವನೆ, ಸಂಸ್ಕೃತಿ ಇದೆ. ಭಾಷೆ, ಸಂಸ್ಕೃತಿ, ನಡವಳಿಕೆಗಳು ಒಂದಕ್ಕೊಂದು ಪೂರಕ ಎಂದು ನಂಬಿದವನು ನಾನು. ಆಡಳಿತದಲ್ಲಿ ಕನ್ನಡ ಬಳಕೆ ಕುರಿತಂತೆ ಇದುವರೆಗಿನ ಸರಕಾರಗಳು ಆಯಾ ಸಂದರ್ಭಕ್ಕೆ ತಕ್ಕಂತೆ 180ಕ್ಕೂ ಸುತ್ತೋಲೆಗಳನ್ನು ಹೊರಡಿಸಿವೆ. ಆದರೂ ಕನ್ನಡ ಪರಿಣಾಮಕಾರಿಯಾಗಿ ಅನುಷ್ಠಾನ ಆಗುತ್ತಿಲ್ಲ ಎಂಬ ಕೊರಗು ಇದೆ. ಇದೆಲ್ಲವನ್ನೂ ಅರ್ಥ ಮಾಡಿಕೊಂಡು ಕನ್ನಡ ಭಾಷೆಯನ್ನು ಎಲ್ಲಾ ಹಂತಗಳಲ್ಲಿ ಪರಿಣಾಕಾರಿಯಾಗಿ ಜಾರಿಗೆ ತರಬೇಕು ಎಂಬ ಹಿನ್ನೆಲೆಯಲ್ಲಿ ಶಾಸನ ರೂಪಿಸಲು ವಿಧೇಯಕ ಮಂಡಿಸಿದ್ದೇವೆ.

ಸುತ್ತೋಲೆ, ಆದೇಶಗಳಿಂದ ಆಗದ ಕನ್ನಡ ಬಳಕೆ ಕಡ್ಡಾಯ ಕಾಯಿದೆಯಿಂದ ಆಗುತ್ತದೆಯೇ?
ಖಂಡಿತವಾಗಿಯೂ ಆಗುತ್ತದೆ. ಹಿಂದೆಲ್ಲಾ ಸುತ್ತೋಲೆ ಹೊರಡಿಸಿದರೂ ಜಾರಿಗೆ ತರಲು ಅದರದ್ದೇ ಆದ ಕೊರತೆಗಳಿದ್ದವು. ಕೇವಲ ನೋಟಿಸ್ ಕೊಡಬಹುದಿತ್ತೇ ಹೊರತು ಶಿಸ್ತು ಕ್ರಮಕ್ಕೆ ನಿಯಮಗಳಲ್ಲಿ ಅವಕಾಶ ಇರಲಿಲ್ಲ. ಈಗ ಕಾಯಿದೆ ರೂಪಿಸಿ ರಾಜ್ಯ ಮಟ್ಟದಲ್ಲಿ ಆಯೋಗ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಮತ್ತು ತಾಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿಗಳ ಮಟ್ಟದ ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಗಿದೆ. ಈ ಸಮಿತಿಗಳು ಒಂದು ಕೊಡಿಯಾಗಿ ಕೆಲಸ ಮಾಡಬೇಕು. ಅಷ್ಟೇ ಅಲ್ಲ, ಇದರ ನಿರ್ವಹಣೆಗೆ 75 ಅಧಿಕಾರಿಗಳನ್ನು ನೇಮಿಸಲು ಯೋಚನೆ ಮಾಡಿದ್ದೇವೆ.

ಕನ್ನಡ ಬಳಕೆ ಮಾಡದೇ ಇದ್ದರೆ ದಂಡ, ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪ ವಿಧೇಯಕದಲ್ಲಿದೆ. ಎಲ್ಲಾ ಜಾಹೀರಾತು ಫಲಕಗಳು, ಟೆಂಡರ್ ಸೇರಿದಂತೆ ಸರಕಾರಿ ಜಾಹೀರಾತು ಗಳು ಕನ್ನಡದಲ್ಲಿರಬೇಕು. ಸರಕಾರದ ಸಬ್ಸಿಡಿ, ಸಹಾಯ ಪಡೆಯುವ ಉದ್ಯಮಗಳು ಇಂತಿಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ನೀಡಬೇಕು ಎಂಬ ನಿಯಮ ಮಾಡಿದ್ದೇವೆ. ಇದೆಲ್ಲದರ ಪರಿಣಾಮ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಒಟ್ಟಾಗಿ ತೆಗೆದು ಕೊಂಡು ಹೋಗಲು ಸಾಧ್ಯವಾಗುತ್ತದೆ.

ಆಡಳಿತದಲ್ಲಿ ಕನ್ನಡ ಅನುಷ್ಠಾನದಲ್ಲಿ ಸಮಸ್ಯೆ ಇರುವುದು ಐಎಎಸ್, ಐಪಿಎಸ್, ಐಎಫಎಸ್ ಹಂತದಲ್ಲಿ. ಅದನ್ನು ಹೇಗೆ ನಿಭಾಯಿಸುತ್ತೀರಿ?
ಐಎಎಸ್ ಅಧಿಕಾರಿಗಳು ಕನ್ನಡ ಕಲಿಯಬೇಕು ಎಂಬ ನಿಯಮ ಈಗಾಗಲೇ ಇದೆ. ಈ ವಿಧೇಯಕದಲ್ಲಿ ಕನ್ನಡದಲ್ಲೇ ಕಡತ
ಮಂಡಿಸಬೇಕು. ಸ್ಥಳೀಯ ನ್ಯಾಯಾಲಯಗಳ ತೀರ್ಪು ಕನ್ನಡದಲ್ಲಿರಬೇಕು, ಸರಕಾರಿ ವ್ಯವಹಾರಗಳು ಕನ್ನಡದಲ್ಲಿರಬೇಕು ಎಂದು
ಇದೆ. ಹಾಗಾಗಿ ಈ ಹಂತದ ಅಧಿಕಾರಿಗಳು ಕನ್ನಡ ಕಡ್ಡಾಯ ಕಾನೂನಿಗೆ ಹೊರತಾಗಿರುವುದಿಲ್ಲ. ನಿಯಮಗಳನ್ನು ರೂಪಿಸುವಾಗ
ಅದೆಲ್ಲವನ್ನೂ ಸ್ಪಷ್ಟವಾಗಿ ಹೇಳುತ್ತೇವೆ.

ಈ ಶಾಸನದಿಂದ ಸಾರ್ವಜನಿಕ ವಲಯದಲ್ಲಿ ಕನ್ನಡ ಬಳಕೆ ಹೇಗೆ ಕಡ್ಡಾಯಗೊಳಿಸಲು ಸಾಧ್ಯ?
15 ವರ್ಷ ಯಾರು ಕರ್ನಾಟಕದಲ್ಲಿ ನೆಲೆಸಿರುತ್ತಾನೋ ಅವನನ್ನು ಕನ್ನಡಿಗ ಎನ್ನುತ್ತೇವೆ. ಕನ್ನಡಿಗ ಎಂದ ಮೇಲೆ ಕನ್ನಡ ಓದು, ಬರಹ ತಿಳಿದಿರಬೇಕು. ಹಾಗೆಂದು ಇದು ಕೇವಲ ಕಾನೂನಿನಿಂದ ಬರುವಂತಹದ್ದಲ್ಲ. ಸರಕಾರ ಮತ್ತು ಸಮಾಜ ಒಟ್ಟಾಗಿ ಈ ಕೆಲಸ ಮಾಡಬೇಕು. ಇದು ಸಮಾಜದ ಕರ್ತವ್ಯವೂ ಹೌದು. ಕನ್ನಡ ಸಂಘಟನೆಗಳು, ಸಾಹಿತಿಗಳು. ಸಂಘ ಸಂಸ್ಥೆಗಳು ಎಲ್ಲರೂ ಕೂಡ ಕನ್ನಡೇತರರಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿ ಕಲಿಸುವ ಕೆಲಸ ಮಾಡಬೇಕು. ಸರಕಾರದ ಕಡೆಯಿಂದ ಮುಂದಿನ ದಿನಗಳಲ್ಲಿ ಅದಕ್ಕೆ ಬೇಕಾದ ಕಾರ್ಯಕ್ರಮಗಳನ್ನು ನೀಡಲಾಗುವುದು.

ನಾಡಗೀತೆಗೆ ದಾಟಿ ಮತ್ತು ಸಮಯ ಅಂತಿಮಗೊಳಿಸುವ ವಿಚಾರದಲ್ಲಿ ಅಪಾಯ ಮೈಮೇಲೆ ಎಳೆದುಕೊಂಡಿದ್ದೀರಾ?
ಹಾಗೇನೂ ಇಲ್ಲ. ಮೈಸೂರು ಅನಂತಸ್ವಾಮಿ ಮತ್ತು ಸಿ.ಅಶ್ವತ್ಥ್ ಅವರ ರಾಗಸಂಯೋಜನೆಯಲ್ಲಿ ಯಾವುದನ್ನು ಅಂತಿಮ ಗೊಳಿಸಬೇಕು ಎಂಬ ಗೊಂದಲವಿತ್ತು. ಆದರೆ, ಅವರಿಬ್ಬರ ಮಧ್ಯೆ ಯಾವುದೇ ವೈರುಧ್ಯವಿಲಿಲ್ಲ. ಅವರಿಬ್ಬರ ಹೆಸರು ಹೇಳಿ ಕೊಂಡು ಮಾತನಾಡುವವರ ಮಧ್ಯೆ ವೈರುಧ್ಯವಿದ್ದರೆ ಅದಕ್ಕೆ ನಾವು ಜವಾಬ್ದಾರರಲ್ಲ. 18 ವರ್ಷಗಳಿಂದ ಚರ್ಚೆಯ ಹಂತದಲ್ಲೇ ಇತ್ತು. ಸರಕಾರಿ ಕಾರ್ಯಕ್ರಮಗಳಲ್ಲಿ ಹಲವು ಬಾರಿ 7 ನಿಮಿಷದವರೆಗೆ ನಾಡಗೀತೆ ಹಾಡಿದ್ದೂ ಇದೆ. ಇದರಿಂದ ಇರುಸು ಮುರುಸು ಉಂಟಾಗಿತ್ತು. ವಿವಾದವಿದೆ ಎಂಬ ಕಾರಣಕ್ಕೆ ನಿರ್ಧಾರ ಕೈಗೊಳ್ಳದೆ ಎಷ್ಟು ವರ್ಷ ಎಂದು ಕಾಯಲು ಸಾಧ್ಯ. ನಾಡಗೀತೆಗೆ ಅದರದ್ದೇ ಆದ ಗೌರವ ಇದೆ. ಅದನ್ನು ಉಳಿಸಲು ನಾವು ನಿರ್ಧಾರ ಕೈಗೊಂಡಿದ್ದೇವೆ.

ಮೈಸೂರು ಅನಂತಸ್ವಾಮಿ ರಾಗಸಂಯೋಜನೆ ಅಂತಿಮಗೊಳಿಸಿದ ಹಿಂದಿನ ಉದ್ದೇಶವೇನು?
ನಾಡಗೀತೆಗೆ ರಾಗಸಂಯೋಜನೆಗೆ ಸಂಬಂಧಿಸಿದಂತೆ 2005ರಲ್ಲಿ ವಸಂತ ಕನಕಾಪುರೆ ನೇತೃತ್ವದ ಸಮಿತಿ ಹಾಗೂ ನಂತರದಲ್ಲಿ ಡಾ.ಚನ್ನವೀರ ಕಣವಿ ನೇತೃತ್ವದ ಎರಡು ಸಮಿತಿಗಳನ್ನು ರಚಿಸಿ ವರದಿ ಪಡೆಯಲಾಗಿತ್ತು. ಎರಡೂ ವರದಿಗಳಲ್ಲಿ ಏಕಾಭಿ ಪ್ರಾಯ ಇರಲಿಲ್ಲ. ನಂತರ ರಚಿಸಿದ ಎಚ್.ಆರ್. ಲೀಲಾವತಕಿ 18 ಜನರ ಸಮಿತಿ ಮೈಸೂರು ಅನಂತಸ್ವಾಮಿ ರಾಗ
ಸಂಯೋಜನೆಯನ್ನು ನಾಡಗೀತೆಗೆ ಅಳವಡಿಸುವ ಬಗ್ಗೆ ಏಕಾಭಿಪ್ರಾಯ ಕೊಟ್ಟಿದೆ. ಅದರಂತೆ ಸರಕಾರ ನಿರ್ಧಾರ ಕೈಗೊಂಡಿದೆ.

ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿ ಕನ್ನಡ ವಿರೋಧಿ ಎಂಬ ಆರೋಪದಿಂದ ಮುಕ್ತವಾಗಲು ಕನ್ನಡ ಕಡ್ಡಾಯ ಮತ್ತು ನಾಡಗೀತೆ ರಾಗ ಸಂಯೋಜನೆ ವಿಚಾರದಲ್ಲಿ ನಿರ್ಧಾರ ಕೈಗೊಂಡಿದ್ದೀರಾ?
ಬಿಜೆಪಿ ಯಾವತ್ತೂ ಕನ್ನಡ ವಿರೋಧಿ ಆಗಿರಲಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಕನ್ನಡಕ್ಕೆ ಸಿಕ್ಕಿದ ಗೌರವ ಇತರರ ಕಾಲದಲ್ಲಿ ಸಿಕ್ಕಿಲ್ಲ. ಕೆಲವರು ಕನ್ನಡ ಭಾಷೆ, ಸಂಸ್ಕೃತಿ ವಿಚಾರದಲ್ಲಿ ಭಾಷಣ ಹೇಳಿಕೆಗಳಿಗಷ್ಟೇ ಸೀಮಿತವಾಗಿದ್ದರು. ಅಧಿಕಾರ ಇದ್ದರೂ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಇಚ್ಛಾಶಕ್ತಿ ತೋರಿಸಿರಲಿಲ್ಲ. ಆದರೆ, ನಾವು ಮಾತಿಗೆ ಸೀಮಿತವಾಗದೆ ಇಚ್ಛಾಶಕ್ತಿ ಮತ್ತು ಬದ್ಧತೆ ತೋರಿದ್ದೇವೆ. ಕಾನೂನು ರೂಪಿಸುತ್ತಿದ್ದೇವೆ. ಯಾರನ್ನೋ ಮೆಚ್ಚಿಸಲು ಈ ಕೆಲಸ ಮಾಡಿಲ್ಲ. ಇದು ನಮ್ಮ ಬದ್ಧತೆಯಾಗಿತ್ತು.

ಇದು ಬಿಜೆಪಿಯ ಬದ್ಧತೆಯೋ? ಸುನೀಲ್ ಕುಮಾರ್ ಅವರ ಬದ್ಧತೆಯೋ?
ಬಿಜೆಪಿಯ ಬದ್ಧತೆಯೂ ಹೌದು, ವೈಯಕ್ತಿಕ ಬದ್ಧತೆಯೂ ಹೌದು, ಸರಕಾರದ ಬದ್ಧತೆಯೂ ಹೌದು. ಎಲ್ಲವೂ ಒಂದೇ ಕಾಲದಲ್ಲಿ, ಒಂದೇ ಬಾರಿ ಆಗುವಂತಹದ್ದಲ್ಲ. ಮೊದಲಿನಿಂದಲೂ ಈ ಬಗ್ಗೆ ಚರ್ಚೆಯಾಗುತ್ತಿತ್ತು. ನಾನು ಸಚಿವನಾಗಿ ಬಂದ ಮೇಲೆ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಅಂತಿಮ ರೂಪ ನೀಡಲಾಗಿದೆ. ಇದು ಬಿಜೆಪಿ ಸರಕಾರದ ಬದ್ಧತೆ.