Friday, 18th June 2021

ಸೋಂಕಿನಲ್ಲಿ ಭಾರಿ ಇಳಿಕೆ: ಕೋವಿಡ್‌ ಸೆಂಟರ್‌ಗಳು ಖಾಲಿ, ಖಾಲಿ

೪೪೯ ಗ್ರಾಮಗಳು ಕರೋನಾ ಮುಕ್ತ

೪೧೭ ಗ್ರಾಮಗಳಲ್ಲಿ ಐದಕ್ಕಿಂತ ಕಡಿಮೆ ಪ್ರಕರಣ

ವಿಶೇಷ ವರದಿ: ಅನಂತ ಪದ್ಮನಾಭ ರಾವ್ ಹೊಸಪೇಟೆ

ಕಳೆದ ಹಲವು ದಿನಗಳಿಂದ ಕರೋನಾ ಅಬ್ಬರದಿಂದ ಕಂಗೆಟ್ಟಿದ್ದ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಜನತೆಗೆ ಒಳ್ಳೆಯ ಸುದ್ದಿಯೊಂದು ಬಂದಿದೆ.

ಎರಡು ಜಿಲ್ಲೆಗಳ ೪೪೯ ಗ್ರಾಮಗಳು ಕರೋನಾ ಮುಕ್ತವಾಗಿವೆ. ೬೬ ಗ್ರಾಮಗಳಲ್ಲಿ ೧೦ಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ೧೧೧ ಗ್ರಾಮಗಳಲ್ಲಿ ೧೦ಕ್ಕಿಂತ ಕಡಿಮೆ ಹಾಗೂ ಐದಕ್ಕಿಂತ ಹೆಚ್ಚು ಸೋಂಕಿತರಿದ್ದಾರೆ. ೪೧೭ ಗ್ರಾಮಗಳಲ್ಲಿ ಐದಕ್ಕಿಂತ ಕಡಿಮೆ ಪ್ರಕರಣಗಳಿವೆ. ಇದು ಖುದ್ದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಕರೋನಾ ಪ್ರಭಾವ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದರ ಜೊತೆಯಲ್ಲಿಯೇ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಸುಮಾರು ೪೪೯ ಗ್ರಾಮಗಳು ಕರೋನಾ ಸೋಂಕಿನಿಂದ ಮುಕ್ತವಾಗಿವೆ. ಸದ್ಯ ಎರಡು ಜಿಲ್ಲೆಗಳ ೬೬ ಗ್ರಾಮಗಳಲ್ಲಿ ೧೦ಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ.

ಎಲ್ಲಿ, ಏನು?: ಗ್ರಾಮೀಣ ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಕರೋನಾ ಸೋಂಕು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸುಮಾರು ೨೩೭ ಗ್ರಾಮ ಪಂಚಾಯತ್‌ಗಳಿದ್ದು ೧,೦೪೩ ಗ್ರಾಮಗಳಿವೆ. ಈವರೆಗೂ ೧೫,೪೨೧ ಕರೋನಾ ಸೋಂಕಿತರು ಇದ್ದರು. ಇದೀಗ ಕೇವಲ ೨,೬೮೭ ಸಕ್ರಿಯ ಪ್ರಕರಣಗಳಿವೆ. ಕಂಪ್ಲಿ ಹಾಗೂ ಕೊಟ್ಟೂರು ತಾಲೂಕಿನಲ್ಲಿ ಸಾವಿರ ಕರೋನಾ ಸೋಂಕಿತರ ಸಂಖ್ಯೆ ಇದ್ದು ಉಳಿದೆಲ್ಲಾ ತಾಲೂಕುಗಳಲ್ಲಿ ಸೋಂಕಿತರ ಸಂಖ್ಯೆ ಸಾವಿರದ
ಗಡಿ ದಾಟಿತ್ತು.

ಸದ್ಯ ಉಭಯ ಜಿಲ್ಲೆಗಳ ೬೬ ಗ್ರಾಮಗಳಲ್ಲಿ ಹತ್ತಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಅಂದಾಜು ೧೧೧ ಗ್ರಾಮಗಳಲ್ಲಿ ಹತ್ತಕ್ಕಿಂತ ಕಡಿಮೆ ಹಾಗೂ ಐದಕ್ಕಿಂತ ಹೆಚ್ಚು ಸೋಂಕಿತರಿದ್ದಾರೆ. ೪೧೭ ಗ್ರಾಮಗಳಲ್ಲಿ ಐದಕ್ಕಿಂತ ಕಡಿಮೆ ಪ್ರಕರಣಗಳಿವೆ.

ಕರೋನಾ ಸೋಂಕು ಇಳಿಮುಖ ಹಿನ್ನೆಲೆಯಲ್ಲಿ ಹೊಸಪೇಟೆ ಸರಕಾರಿ ನೂರು ಹಾಸಿಗೆ ಆಸ್ಪತ್ರೆ ಸೋಂಕಿತ ಗರ್ಭಿಣಿಯರ ಹೆರಿಗೆ ಮಾತ್ರ ಮಾಡಲಾಗುತ್ತಿದೆ. ಉಳಿದಂತೆ ಕರೋನಾ ವಿಭಾಗ ಬಂದ್‌ಮಾಡಲಾಗಿದ್ದು ಸದ್ಯ ನಗರದ ಹೃದಯ ಭಾಗದಲ್ಲಿನ ೬೬ ಬೆಡ್‌ಗಳ ಹಳೆಯ ಆಸ್ಪತ್ರೆ ಆವರಣದಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಯಲ್ಲಿ ಭಾರಿ ಇಳಿಕೆಯಾದ ಹಿನ್ನೆಲೆಯಲ್ಲಿ ನಗರದ ಹೊರ ವಲಯದ ಜಂಬುನಾಥ್ ರಸ್ತೆಯ ಕೋವಿಡ್ ಕೇರ್ ಸೆಂಟರ್ ಸೇರಿದಂತೆ ಹಲವು ಕಡೆಗಳಲ್ಲಿನ ಕೋವಿಡ್ ಸೆಂಟರ್ ಗಳಲ್ಲಿ ಬೆಡ್‌ಗಳು ಖಾಲಿಯಾಗಿವೆ. ಎರಡು ಜಿಲ್ಲೆಗಳ ೪೦ ಕೋವಿಡ್ ಕೇರ್ ಸೆಂಟರ್‌ಗಳಲ್ಲಿನ ೩,೧೭೦ ಬೆಡ್‌ಗಳ ಪೈಕಿ ೨೯೩೨ ಬೆಡ್‌ಗಳು ಖಾಲಿ ಇವೆ.

***

ಕರೋನಾ ಪ್ರಕರಣಗಳು ಕಡಿಮೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿಯೂ ಇಳಿಕೆಯಾಗಿದೆ. ಸದ್ಯ ಹಳೆಯ ಆಸ್ಪತ್ರೆಯ ೬೬ ಬೆಡ್‌ಗಳಲ್ಲಿ ಮಾತ್ರ ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಕಡಿಮೆಯಾದರೂ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. ಸರಕಾರ ತಿಳಿಸಿದ ಸೂಚನೆಗಳನ್ನು ಪಾಲಿಸಬೇಕು.
-ಡಾ.ಭಾಸ್ಕರ್ ತಾಲೂಕು ವೈದ್ಯಾಧಿಕಾರಿ

Leave a Reply

Your email address will not be published. Required fields are marked *