Friday, 7th October 2022

ಕರೋನಾ ನಿಯಮ ಉಲ್ಲಂಘನೆ: ಖಾಕಿ ಥಳಿತಕ್ಕೆ ಯುವಕನ ಸಾವು

ಲಕ್ನೋ: ಕರೋನಾ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯಗಳು ಕಟ್ಟುನಿಟ್ಟಿನ ಲಾಕ್​ಡೌನ್​ ಘೋಷಣೆ ಮಾಡಿವೆ.

ಲಾಕ್​ಡೌನ್​ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಪೊಲೀಸ್​ ಇಲಾಖೆ ಸಿಬ್ಬಂದಿ ದೌರ್ಜನ್ಯ ನಡೆಸುತ್ತಿರುವ ಪ್ರಕರಣಗಳು ಅನೇಕ ರಾಜ್ಯಗಳಲ್ಲಿ ವರದಿಯಾಗಿದೆ. ಇದೇ ರೀತಿ 17 ವರ್ಷದ ಯುವಕನನ್ನು ಪೊಲೀಸರು ಲಾಠಿಯಿಂದ ಥಳಿಸಿದ ಹಿನ್ನಲೆ ಆತ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್​ ಕಾನ್ಸ್​ಟೇಬಲ್​ ಮತ್ತು ಒಬ್ಬರು ಹೋಮ್​ಗಾರ್ಡ್​ ಅನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

ಲಕ್ನೋದ ಬಟ್​ಪುರಿ ಪ್ರದೇಶದ ಬಂಗರ್ಮನ್​ ನಲ್ಲಿ ಯುವಕ ಮನೆ ಮುಂದೆ ತರಕಾರಿ ಮಾರಾಟ ಮಾಡುತ್ತಿದ್ದ. ಈ ವೇಳೆ ಕರೋನಾ ಕರ್ಫ್ಯೂ ನಿಯಮ ಉಲ್ಲಂಘಿಸಿದ ಎಂದು ಪೊಲೀಸರು ಹಲ್ಲೆ ನಡೆಸಿದ್ದರು. ಬಳಿಕ ಆತನನ್ನು ಪೊಲೀಸ್​ ಠಾಣೆಗೆ ಕರೆದೊಯ್ಯಲಾಗಿದೆ. ಈ ವೇಳೆ ಆತನ ಆರೋಗ್ಯ ಗಂಭೀರಗೊಂಡಿದೆ. ಅನಾರೋಗ್ಯಗೊಂಡ ಆತನನ್ನು ತಕ್ಷಣಕ್ಕೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪೊಲೀಸರ ಈ ದುರ್ವತನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಲಕ್ನೋದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ಪ್ರಕರಣ ಸಂಬಂಧ ಕಾನ್ಸಟೇಬಲ್​ ವಿಜಯ್​ ಚೌಧರಿಯನ್ನು ತಕ್ಷಣಕ್ಕೆ ಅಮಾನತು ಮಾಡಲಾಗಿದೆ.

ಕಳೆದೆರಡು ದಿನಗಳ ಹಿಂದೆ ಮಧ್ಯ ಪ್ರದೇಶದಲ್ಲಿ ಕೂಡ ಮಾಸ್ಕ್​ ಹಾಕಿಲ್ಲ ಎಂಬ ಒಂದೇ ಕಾರಣಕ್ಕೆ ಮಹಿಳೆಯ ಮೇಲೆ ಅಮಾನುಷವಾಗಿ ನಡುರಸ್ತೆಯಲ್ಲಿ ಪೊಲೀಸರು ಎಳೆದಾಡಿರುವ ಘಟನೆ ನಡೆದಿತ್ತು.