Friday, 24th September 2021

ಕರೋನಾ ವೈರಸ್ V/S ಕರೋನಾ ವೈರಸ್

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

drhsmohan@gmail.com

ಭಸ್ಮಾಸುರನ ಕತೆ ಹೆಚ್ಚಿನವರಿಗೆ ತಿಳಿದಿದೆ ಎಂದು ಭಾವಿಸುತ್ತೇನೆ. ಈಶ್ವರನ ಭಸ್ಮದಿಂದ ಜನಿಸಿದ ಆತ ಈಶ್ವರನಿಂದಲೇ ಉರಿ ಹಸ್ತವನ್ನು ವರವಾಗಿ ಪಡೆದ. ಅದನ್ನು ದುರುಪಯೋಗ ಪಡಿಸಿಲು ಆರಂಭಿಸಿದಾಗ ಆ ಉರಿಹಸ್ತವೇ ಕೊನೆಗೆ ಶತ್ರುವಾಗಿ ಪರಿಣಮಿಸಿ ತನ್ನನ್ನು ತಾನೇ ಕೊಂದುಕೊಂಡ.

ಹಾಗೆಯೇ ಪ್ರಾಣಿಗಳ ಪ್ರಪಂಚದಲ್ಲಿ ಒಂದು ವಿಚಾರವಿದೆ. ಮೀಡಿಯಂ ಸೈಜಿನ ಪ್ರಾಣಿ ತನ್ನದೇ ಜಾತಿಯ ಸಣ್ಣ ಪ್ರಾಣಿಯನ್ನು ಭಕ್ಷಿಸುತ್ತದೆ. ಇನ್ನೂ ದೊಡ್ಡ ಪ್ರಾಣಿ ಮೀಡಿಯಂ ಸೈಜಿನ ಪ್ರಾಣಿಯನ್ನು ತಿಂದು ತೇಗುತ್ತದೆ. ಈ ವಿಷಯ ವೈರಸ್‌ಗಳ ವಿಷಯದಲ್ಲಿಯೂ  ಹಲವೊಮ್ಮೆ ನಿಜವಾಗುತ್ತದೆ. ಈ ಸರ್ವಕಾಲಿಕ ಸತ್ಯವನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಜೀವಶಾಸ ಜ್ಞರು ಉಪಯೋಗಿಸಿ ಕರೋನಾ ವೈರಸ್ ನ, (SARS CoV2)) ಪರಾವಲಂಬಿ (Parasites) ಅನ್ನು ಲ್ಯಾಬ್‌ನಲ್ಲಿ ಹುಟ್ಟು ಹಾಕಿದ್ದಾರೆ. ಈ ಪರಾವಲಂಬಿಯು ಕೋವಿಡ್ ಕಾಯಿಲೆಯ ಚಿಕಿತ್ಸೆಯಾಗಿ ಪರಿಣಮಿಸಬಹುದು ಎಂದು ಅವರ ನಂಬಿಕೆ. ಈ ವಿಷಯದ ತಾಂತ್ರಿಕತೆ ಸ್ವಲ್ಪ ಕ್ಲಿಷ್ಟವಾಗಿದೆ.

ಆದರೆ ಸಾಧ್ಯವಾದಷ್ಟು ಸರಳ ಮಾಡಲು ಪ್ರಯತ್ನಿಸುತ್ತೇನೆ. ತಮ್ಮ ಜೀನೋಮ್ ಅಥವಾ ಜೆನೆಟಿಕ್ ಅಂಶವನ್ನು ಮನುಷ್ಯನ ಜೀವಕೋಶಗಳಿಗೆ ವರ್ಗಾಯಿಸಿ ಕರೋನಾ ವೈರಸ್ ತಮ್ಮ ಯಥಾ ಪ್ರತಿಯನ್ನು ಹುಟ್ಟು ಹಾಕುತ್ತವೆ. ಆಗ ಸೋಂಕಿತ ಜೀವಕೋಶವು ವೈರಸ್‌ನ ಜೀನೋಮ್ ಅನ್ನು ನಕಲು ಮಾಡುತ್ತದೆ, ಅದರೊಳಗಿನ ಎಲ್ಲಾ ಪ್ರೋಟೀನ್ ಅಂಶಗಳನ್ನು ಮಥಿಸುತ್ತದೆ ಅಥವಾ ಒಟ್ಟುಗೂಡಿಸುತ್ತದೆ. ನಂತರ ಇದರ ಸಹಾಯದಿಂದ ಹೊಸ ವೈರಸ್ ತುಣುಕುಗಳನ್ನು ನಿರ್ಮಾಣ ಮಾಡುತ್ತದೆ. ಇವು ವ್ಯಕ್ತಿಯ ಜೀವಕೋಶಗಳಿಂದ ಹೊರಗೆ ಬಂದು ಬೇರೆಯ ಜೀವಕೋಶಗಳಿಗೆ ಸೋಂಕು ಉಂಟು ಮಾಡುತ್ತವೆ. ಆದರೆ ಕೆಲವೊಮ್ಮೆ ಯಥಾ ಪ್ರತಿ ನಕಲು ಮಾಡುವಾಗ ಸ್ವಲ್ಪ ಏರು ಪೇರಾಗುತ್ತದೆ ಅಥವಾ ತಪ್ಪಾಗುತ್ತದೆ. ಆಗ ಮೂಲ ವೈರಸ್‌ನ ಸಣ್ಣ ಜೀನೋಮ್ ಹುಟ್ಟಿಕೊಳ್ಳುತ್ತದೆ.

ವೈರಸ್ ಪ್ರೋಟೀನ್ ಗೆ ಅಗತ್ಯವಾಗಿ ಬೇಕಾದ ಕೆಲವು ಜೀನ್‌ಗಳು ಇದರಲ್ಲಿ ಇರುವುದಿಲ್ಲ. ಈ ರೀತಿ ತಪ್ಪಾದ ಜೀನೋಮ್‌ಗೆ ಹೊಸ ವೈರಸ್ ಹುಟ್ಟು ಹಾಕಲು ಸಾಧ್ಯವಿಲ್ಲ. ಹಾಗಾಗಿ ಈ ಸಣ್ಣ ಜೀನೋಮ್ ಗಳಿಗೆ ಬೇರೆಯ ಜೀವಕೋಶಗಳಿಗೆ ಸೋಂಕು ಉಂಟು ಮಾಡಲು ಸಾಧ್ಯವಿಲ್ಲ. ಅದೇ ರೀತಿಯ ವೈರಲ್ ಜೀನೋಮ್ ನೊಂದಿಗೆ ಅದು ಸರಿ ಇರುವ ಜೀವಕೋಶಗಳೊಂದಿಗೆ ಜೀನ್‌ಗಳನ್ನು ಹಂಚಿಕೊಳ್ಳಲು ಸಾಧ್ಯ ವಾದರೆ ಅದು ಅಲ್ಲಿನ ಬೇರೆಯ ಜೀನ್‌ಗಳ ಸಹಕಾರದಿಂದ ವೈರಸ್ ಯಥಾ ಪ್ರತಿ ನಕಲು ಮಾಡಿ ಅಥವಾ ಉತ್ಪತ್ತಿ ಮಾಡಿ ಬೇರೆಯ ಜೀವಕೋಶಗಳಿಗೆ ಸೋಂಕು ತರಬಲ್ಲದು. ಈ ರೀತಿ ತಪ್ಪಾಗಿ ಹುಟ್ಟಿ ಬಂದ ಜೀನೋಮ್‌ಗಳು ಸಣ್ಣ ಗಾತ್ರದಲ್ಲಿರುವುದರಿಂದ ಅವು ಮೂಲ ವೈರಸ್ ಜೀನೋಮ್‌ಗಳಿಗಿಂತ ವೇಗವಾಗಿ ಯಥಾ ಪ್ರತಿ ಹುಟ್ಟು ಹಾಕಿ ವೃದ್ಧಿಗೊಳ್ಳುತ್ತವೆ. ಹಾಗೆಯೇ ಮೂಲ ವೈರಸ್‌ನ ಯಥಾ ಪ್ರತಿ ಉಂಟುಮಾಡುವ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುತ್ತದೆ. ಅದನ್ನು ವಿಜ್ಞಾನಿಗಳು Defective Interfering ಜೀನೋಮ್ ಗಳೆಂದು ಕರೆಯುತ್ತಾರೆ. ಸುಲಭವಾಗಿ ನಾವು ಇದನ್ನು ಈಐ ಜೀನೋಮ್‌ಗಳೆಂದು ಹೇಳಬಹುದು.

ಸಿಂಥೆಟಿಕ್ ಕರೋನಾ: ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಜೀವಶಾಸದ ವಿಜ್ಞಾನಿಗಳು ಕರೋನಾ ವೈರಸ್‌ನ ಈ ಐ ಜೀನೋಮ್‌ಗಳನ್ನು ಹುಟ್ಟು ಹಾಕಿದರು. ಅವರು ಅದನ್ನು ಸಿಂಥೆಟಿಕ್ ಕರೋನಾ ಎಂದು ಕರೆದರು. ಇದು ಮೂಲ ಕರೋನಾ ವೈರಸ್ ಗಿಂತ ಶೇ.90ರಷ್ಟು ಸಣ್ಣದು. ಮೊದಲೇ ತಿಳಿಸಿದಂತೆ ಹೀಗೆ ಅವರು ಉತ್ಪಾದಿಸಿದ ವೈರಸ್, ಮೂಲ ವೈರಸ್ ನ ಎಲ್ಲಾ ಪ್ರೋಟೀನ್‌ಯುಕ್ತ ಜೀನ್‌ಗಳನ್ನು ಹೊಂದಿಲ್ಲ. ಆದರೂ ಅದು ಹೊಸ ವೈರಸ್‌ನಂತೆ ರೂಪುಗೊಳ್ಳಲು ಎಲ್ಲಾ ಮಾಹಿತಿಗಳನ್ನು ಹೊಂದಿರುತ್ತದೆ.

ನಂತರ ಸಂಶೋಧಕರು ಈ ಜೀನೋಮ್ ಅನ್ನು ಲ್ಯಾಬ್ ಕಲ್ಚರ್‌ನಲ್ಲಿ ಬೆಳವಣಿಗೆಗಿಟ್ಟ ಆಫ್ರಿಕಾದ ಹಸಿರು ಮಂಗದ ಜೀವಕೋಶಗಳಿಗೆ ಸೇರಿಸಿದರು. ಆನಂತರ ಈ ಜೀವಕೋಶಗಳಿಗೆ ಕರೋನಾ ವೈರಸ್ (SARS CoV2) ಇಂಜೆಕ್ಟ್ ಮಾಡಿ ಸೋಂಕು ಬರುವಂತೆ ಮಾಡಿದರು. ಅವರಿಗೆ ಬಂದ ಫಲಿತಾಂಶ ಎಂದರೆ ಈ ಐ ಜೀನೋಮ್ 3.3 ಪಟ್ಟು ವೇಗವಾಗಿ ಪುನರುತ್ಪತ್ತಿ (Replication) ಮಾಡಿತು. ಅಲ್ಲದೆ ಮೂಲ ಕರೋನಾ ವೈರಸ್‌ನ ಯಥಾ ಪ್ರತಿ ಉಂಟು ಮಾಡುವ ಕ್ರಿಯೆಯನ್ನು ವಿಫಲಗೊಳಿಸಿತು. ಆಗ ಸೋಂಕಿತ ಜೀವಕೋಶಗಳಲ್ಲಿ ವೈರಸ್‌ಗಳ ಸಂಖ್ಯೆ 24 ಗಂಟೆಗಳಲ್ಲಿ ಅರ್ಧಕ್ಕರ್ಧ ಕಡಿಮೆ ಆಯಿತು. ಇದರಲ್ಲಿನ ಮತ್ತೊಂದು ಸ್ವಾರಸ್ಯ ಎಂದರೆ ಮೂಲ ನಾ ವೈರಸ್, ಈ ಸಿಂಥೆಟಿಕ್ ಕರೋನಾ ವೈರಸ್ ನ ನಕಲು ಮಾಡುವ ಕ್ರಿಯೆ ಮತ್ತು ಹೆಚ್ಚಾಗುವಿಕೆಯನ್ನು ಪ್ರೋತ್ಸಾಹಿಸು ತ್ತದೆ. ಅದರ ಪರಿಣಾಮ ಎಂದರೆ ಮೂಲ ಕರೋನಾ ವೈರಸ್‌ಗೆ ಹಿನ್ನಡೆಯಾಗುತ್ತದೆ.

ಅಂದರೆ ಅದರ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತದೆ. ಮೂಲ ಕರೋನಾ ವೈರಸ್ ತನ್ನ ನಾಶವನ್ನು ತಾನೇ ತಂದುಕೊಳ್ಳುತ್ತದೆ. (ಆರಂಭದಲ್ಲಿ ತಿಳಿಸಿದ ಭಸ್ಮಾಸುರನ ಕತೆಯಂತೆ ) ಈ ಸಂಶೋಧನೆಯ ನೇತೃತ್ವವನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಜೀವಶಾಸ್ತ್ರದ ಪ್ರೊಫೆಸರ್ ಡಾ.ಮಾಕೋರ್ ಆರ್ಚೆಟ್ಟಿ ವಹಿಸಿದ್ದಾರೆ. ಈ ರೀತಿಯ ಸಿಂಥೆಟಿಕ್ ವೈರಸ್ ಅನ್ನು ಕೋವಿಡ್ 19 ಕಾಯಿಲೆಯ ಚಿಕಿತ್ಸೆಯಾಗಿ ಬಳಸಬಹುದು ಎಂದು ಅವರ ಅಭಿಪ್ರಾಯ. ಈ ಸಂಶೋಧನೆಯ ವಿವರಗಳು Peer J ಎಂಬ ಜರ್ನಲ್‌ನಲ್ಲಿ ಜುಲೈ ಮೊದಲ ವಾರದಲ್ಲಿ ಪ್ರಕಟವಾಗಿದೆ.

ಈ ಸಂಶೋಧನಾ ಪೇಪರ್ ಪ್ರಕಟಿಸಿದ ವಿಜ್ಞಾನಿಗಳ ಪ್ರಕಾರ- ಸಿಂಥೆಟಿಕ್ ಜೀನೋಮ್ ಅನ್ನು ಪ್ರತಿಕೃತಿ ಅಥವಾ ನಕಲು ಮಾಡಲು ಮೂಲ ಕರೋನಾ ವೈರಸ್ ಅವಕಾಶ ಕೊಟ್ಟರೆ ಅದರ ಗೋರಿ ಅದೇ ಕಟ್ಟಿಕೊಂಡಂತೆ. ಆನಂತರ ಅವರು ಹಸಿರು ಮಂಗಗಳ ವೈರಸ್ ಲೋಡ್‌ನಲ್ಲಿ ಶೇ.50 ಕಡಿಮೆಯಾದುದನ್ನು ಗಮನಿಸಿ ದ್ದಾರೆ. ಆದರೆ ಅದು ಚಿಕಿತ್ಸೆಯ ದೃಷ್ಟಿಯಿಂದ ಸಾಕಾಗುವುದಿಲ್ಲ ಎಂದೂ ಅವರಿಗೆ ಗೊತ್ತಿದೆ. ಅವರ ಪ್ರಕಾರ ಸಿಂಥೆಟಿಕ್ ವೈರಸ್‌ನ ಪ್ರಮಾಣ ಜಾಸ್ತಿ ಯಾದಂತೆ ಕಾಲಕ್ರಮೇಣ ಆರಂಭದ ಕಾರ್ಯಕ್ಷಮತೆಯು (Efficacy) ಜಾಸ್ತಿಯಾಗುತ್ತದೆ. ಅಲ್ಲದೆ ಆರಂಭದ ಈ ಕಾರ್ಯಕ್ಷಮತೆ ಜಾಸ್ತಿ ಮಾಡಲು ವಿಶೇಷ ವಾಹಕ (Vector) ವನ್ನು ಉಪಯೋಗಿಸಬೇಕಾಗುತ್ತದೆ. ಹಾಗೆಯೇ ಸಿಂಥೆಟಿಕ್ ವೈರಸ್‌ನ ಸುಧಾರಿತ ಮಾದರಿಯನ್ನು ಉಪಯೋಗಿಸಬೇಕು.

ಇದರ ಮುಂದಿನ ಹಂತ ಎಂದರೆ ಈ ಪ್ರಯೋಗವನ್ನು ಕರೋನಾ ವೈರಸ್‌ನಿಂದ ಸೋಂಕಿತ ವ್ಯಕ್ತಿಯ ಶ್ವಾಸಕೋಶದ ಅಂಗಾಂಶಗಳ ಮೇಲೆ ಪುನಃ ಮಾಡಿ
ಪರಿಶೀಲಿಸುವುದು. ಇಲ್ಲಿ ಒಂದು ಸಂದೇಹವನ್ನು ಸಂಶೋಧನೆಯಲ್ಲಿ ಸೇರಿರದ ಬೇರೆ ವಿಜ್ಞಾನಿಗಳು ವ್ಯಕ್ತಪಡಿಸಿದರು. ಈ ಸಿಂಥೆಟಿಕ್ ವೈರಸ್, ತೀವ್ರ ಪ್ರಮಾಣದ ಕೋವಿಡ್ ರೋಗಿಗಳಲ್ಲಿ ಕಂಡು ಬರುವ ಸೈಟೋಕೈನ್ ಸ್ಟಾಮರ್ರ‍್ ರೀತಿಯ ತೀವ್ರ ಪ್ರತಿರೋಧ ಪ್ರಕ್ರಿಯೆಯನ್ನು ಹೆಚ್ಚಿಸುವುದೇ ಎಂದು. ದೇಹದ ಹೊರಗಿನ RNA ಗೆ ಯಾವಾಗಲೂ ಒಂದು ರೀತಿಯ ಪ್ರತಿರೋಧ ಇದ್ದೇ ಇರುತ್ತದೆ. ಆದರೆ ದೇಹದೊಳಗೆ ಸೇರಿದ ಕರೋನಾ ವೈರಸ್‌ನ RNA ಉಂಟುಮಾಡುವ ತೀವ್ರ ರೀತಿಯ ಪರಿಣಾಮದಷ್ಟು ಇದರ ಪರಿಣಾಮ ಇರುವುದಿಲ್ಲ ಎಂದು ಸಂಶೋಧಕರ ಅಭಿಮತ.

ಹಾಗಲ್ಲದೆ ಸೋಂಕಿನ ಆರಂಭದಲ್ಲಿಯೇ ಈ ಚಿಕಿತ್ಸೆ ಆರಂಭಿಸಿದರೆ ಪರಿಣಾಮ ಉತ್ತಮವಾಗುತ್ತದೆ ಎನ್ನಲಾಗಿದೆ. ಈ ಚಿಕಿತ್ಸೆಯ ಇನ್ನೊಂದು ಮುಖವೂ ಇದೆ
ಎಂದು ಕೆಲವು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಫಿಲಡೆಲ್ಫಿಯಾದ ಪಶುಸಂಗೋಪನಾ ಕಾಲೇಜಿನ ಮೈಕ್ರೋಬಯಾಲಜಿ ಮತ್ತು ಇಮ್ಯುನಾಲಜಿಯ
ಅಸೋಸಿಯೇಟ್ ಪ್ರೊಫೆಸರ್ ಡಾ ಕರೋಲಿನಾ ಲೋಪೆಟ್ ಅವರು ದೋಷಪೂರಿತ RNA ಜೀನೋಮ್‌ಗಳು ಮತ್ತು ವೈರಸ್ ವಿರುದ್ಧದ ಚಿಕಿತ್ಸೆ ಬಗ್ಗೆ ಈಗಾಗಲೇ ಪ್ರಬಂಧ ಬರೆದಿದ್ದಾರೆ. ಅವರ ಪ್ರಕಾರ ಈ ರೀತಿಯ ಪ್ರಕ್ರಿಯೆ ಅಂದರೆ ಸಿಂಥೆಟಿಕ್ ವೈರಸ್ ಮತ್ತು ವ್ಯಕ್ತಿಯಲ್ಲಿನ ಸೋಂಕಿತ ವೈರಸ್ ಗಳ ನಡುವೆ ನಡುವಿನ ವಿರುದ್ಧ ಕ್ರಿಯೆಗಳು ನಡೆಯುವುದು ಕರೋನಾ ವೈರಸ್ ಅಲ್ಲದೆ ಇನ್ನೂ ಹಲವು ವೈರಸ್‌ಗಳ ಸಂದರ್ಭದಲ್ಲಿಯೂ ಆಗುವುದು ಕಂಡು ಬಂದಿದೆ.

ಈ ವಿಚಾರ ವೈರಸ್ ಬಗೆಗಿನ ತಜ್ಞರಿಗೆ ಈಗಾಗಲೇ ತಿಳಿದ ವಿಚಾರ. ಆದರೆ ಇದು ವೈರಸ್ ನಿರ್ಮೂಲನಾ ಪ್ರಕ್ರಿಯೆ ಅಲ್ಲ. ದೇಹದೊಳಗೆ ಪ್ರವೇಶಿಸಿದ ಮೂಲ ಕರೋನಾ ವೈರಸ್ ಅನ್ನು ಸಂಪೂರ್ಣವಾಗಿ ಹೊರಗೆ ಹಾಕುವುದಿಲ್ಲ. ಹಾಗಾಗಿ ಕೆಲವು ಸಮಯಗಳ ನಂತರ ಈ ಮೂಲ ಕರೋನಾ ವೈರಸ್ ತನ್ನ ಎಂದಿನ
ಪ್ರಕ್ರಿಯೆಯನ್ನು ಪುನಃ ಆರಂಭಿಸುತ್ತದೆ, ಮತ್ತು ಸೋಂಕನ್ನು ಹರಡುತ್ತದೆ.

ವಿಜ್ಞಾನಿಗಳು ಹುಟ್ಟು ಹಾಕಿದ ಸಿಂಥೆಟಿಕ್ ವೈರಸ್‌ಗೆ ವೃದ್ಧಿಸಲು ಅಥವಾ ಸಂತತಿ ಜಾಸ್ತಿ ಮಾಡಲು ಮೂಲ ಕರೋನಾ ವೈರಸ್‌ನ ಪ್ರೋಟೀನ್ ಅಗತ್ಯವಾಗಿ ಬೇಕೇ ಬೇಕು. ಮೂಲ ಕರೋನಾ ವೈರಸ್‌ನ ಪ್ರೋಟೀನ್ ಲಭ್ಯವಾಗದಿದ್ದಾಗ ದೋಷಪೂರಿತ ವೈರಸ್ ಅಥವಾ ಸಿಂಥೆಟಿಕ್ ವೈರಸ್ ಅವಸಾನವಾಗುತ್ತದೆ. ಪರಿಣಾಮ ಎಂದರೆ ದೇಹದಲ್ಲಿನ ಮೂಲ ಕರೋನಾ ವೈರಸ್ ಪುನಃ ವೃದ್ಧಿಸಲು ಆರಂಭಿಸುತ್ತದೆ. ಈ ಎಲ್ಲಾ ಪ್ರಕ್ರಿಯೆಗಳಿಂದ ದೇಹದಲ್ಲಿನ ವೈರಸ್
ಅಮೂಲಾಗ್ರವಾಗಿ ನಿರ್ಮೂಲನಗೊಳ್ಳುವುದಿಲ್ಲ.

ವ್ಯತಿರಿಕ್ತವಾಗಿ ಮೂಲ ಕರೋನಾ ವೈರಸ್ ಮತ್ತೆ ತನ್ನ ಸಂತತಿ ಜಾಸ್ತಿ ಮಾಡಿಕೊಳ್ಳುತ್ತದೆ. ಹಾಗಾಗಿ ಒಂದು ಸಮಸ್ಯೆ ಪರಿಹರಿಸಲು ಹೋಗಿ ಮತ್ತೊಂದು ಸಮಸ್ಯೆ ಬರಬಹುದೇ? ಆದರೆ ಇದು ಒಂದು ಸಾಧ್ಯತೆ ಮಾತ್ರ. ಯಾವುದಕ್ಕೂ ಈ ಬಗೆಗಿನ ಸಂಶೋಧನೆ ಮುಂದುವರಿಯಬೇಕು ಹಾಗೂ ಅದು ನಿಜ ಜೀವನ ದಲ್ಲಿ ಸಾಕಾರಗೊಳ್ಳುವಂತೆ ನಮಗೆ ಲಭ್ಯವಾಗಬೇಕು ಎಂದು ಡಾ.ಕರೋಲಿನಾ ಲೋಪೆಟ್‌ರ ಅಭಿಪ್ರಾಯ.

ಹೊಸ ಪೀಳಿಗೆಯ ಲಸಿಕೆಗಳು: ಎಲ್ಲರಿಗೆ ಗೊತ್ತಿರುವಂತೆ ಕೋವಿಡ್ ಕಪಿಮುಷ್ಟಿಯಲ್ಲಿ ಜಗತ್ತು ನರಳುತ್ತಿದೆ. ಮುಗಿಯದ ಅಲೆಗಳ ರೀತಿ ಕರೋನಾ ವೈರಸ್ ಹೊಸ ಹೊಸ ಪ್ರಬೇಧಗಳನ್ನು ಹುಟ್ಟಿಸಿ ಕಾಡಿಸುತ್ತಿದೆ. ಜತೆಯಲ್ಲಿ ಲಸಿಕೆಗಳ ಕೊರತೆಯೂ ಆತಂಕ ಹುಟ್ಟಿಸುತ್ತಿದೆ. ಈ ದಿಸೆಯಲ್ಲಿ ಔಷಧ ಕಂಪನಿಗಳು ಈಗ ಲಭ್ಯವಿರುವ ರೀತಿಯ ಜತೆಗೆ ಹೊಸ ರೀತಿಯ ಲಸಿಕೆಗಳನ್ನು ತರಲು ಪ್ರಯತ್ನಿಸುತ್ತಿವೆ.

ಉಪಯೋಗಿಸಲು ಸುಲಭ ವಾಗುವ, ಸಾಗಾಟ ಮತ್ತು ದಾಸ್ತಾನು ಮಾಡಲು ಅನುಕೂಲವಾಗುವ ರೀತಿಯ ಲಸಿಕೆಗಳನ್ನು ಹೊರತರಲು ಔಷಧ ಕಂಪನಿಗಳು ಉತ್ಸುಕವಾಗಿವೆ. ಈಗಿನ ಇಂಜೆಕ್ಷನ್ ರೀತಿಯ ಲಸಿಕೆಗಳೇ ಅಲ್ಲದೆ ಮಾತ್ರೆ ಮತ್ತು ನೇಸಲ್ ಸ್ಪ್ರೇ (ಮೂಗಿನ ಮೂಲಕ ಸೇವಿಸುವ) ರೀತಿಯ ಹೊಸ ಲಸಿಕೆಗಳೂ ಹಲವು ಬರಲಿವೆ. ಕಾಲಕ್ರಮೇಣ ಲಸಿಕೆಗಳ ಪ್ರತಿರೋಧ ಶಕ್ತಿಯ ಅವಧಿ ಕಡಿಮೆ ಯಾಗುವುದರಿಂದ ಲಸಿಕೆಗಳಿಂದ ಉತ್ಪತ್ತಿಯಾಗುವ ಆಂಟಿಬಾಡಿಗಳು ಹೆಚ್ಚು ದಿನಗಳ ಕಾಲ ಮನುಷ್ಯ ದೇಹದಲ್ಲಿರಲು ಈ ಹೊಸ ಲಸಿಕೆಗಳಲ್ಲಿ ಪ್ರಯತ್ನಿಸಲಾಗುತ್ತಿದೆ.

ಜಗತ್ತಿನಾದ್ಯಂತ 82 ಲಸಿಕೆ ತಯಾರಿಸುವ ಔಷಧ ಕಂಪನಿಗಳು ತಮ್ಮ ಲಸಿಕೆಗಳನ್ನು ಹೊರ ತರಲು ತರಾತುರಿಯ ಸ್ಪರ್ಧೆಯಲ್ಲಿದ್ದಾರೆ. ಭಾರತದಲ್ಲಿಯೇ
5 ಕಂಪನಿಗಳ ಲಸಿಕೆಗಳು ಕ್ಲಿನಿಕಲ್ ಟ್ರಯಲ್‌ನ ವಿವಿಧ ಹಂತಗಳಲ್ಲಿವೆ. ಜಗತ್ತಿನ ವಿವಿಧೆಡೆ ಔಷಧ ಕಂಪನಿಗಳಾದ ಸನೋಫಿ, ಜಿಎಸ್‌ಕೆ, ನೋವಾವ್ಯಾಕ್ಸ್, ಕ್ಯೂರ್ ವ್ಯಾಕ್, ವಲ್ನೇವಾಗಳು ಕರೋನಾ ವೈರಸ್‌ನ ಇತ್ತೀಚಿನ ಮ್ಯುಟೇಷನ್ ಹಾಗೂ ಪ್ರಬೇಧಗಳ ವಿರುದ್ಧ ಸೆಣೆಸಲು ಹೆಚ್ಚು ಪರಿಣಾಮಕಾರಿಯಾದ ಲಸಿಕೆಗಳನ್ನು ಅಭಿವೃದ್ಧಿ ಪಡಿಸಲು ಯತ್ನಿಸುತ್ತಿವೆ.

ಮುಖ್ಯ ಲಸಿಕೆಗಳು- ನೋವಾವ್ಯಾಕ್ಸ್’ನ CoV2373, ಕ್ಯೂಬಾದ Abdala GICB, ಮೆಡಿಕ್ಯಾಗೋ, Vaxxinity, ಇಮ್ಯುನಿಟಿ ಬಯೋ, ಇನೋವಿಯೋ.

ಭಾರತದಲ್ಲಿನ ಕ್ಲಿನಿಕಲ್ ಟ್ರಯಲ್‌ನ ವಿವಿಧ ಹಂತಗಳಲ್ಲಿರುವ ಲಸಿಕೆಗಳು: 
೧. ಕೆಡಿ ಹೆಲ್ತ್‌ಕೇರ್: ಅಹಮದಾಬಾದ್ ನಲ್ಲಿರುವ ಕೆಡಿಲ್ಲಾ ZyCoV- ಈ ಲಸಿಕೆ ಕ್ಲಿನಿಕಲ್ ಟ್ರಯಲ್‌ನ 3ನೇ ಹಂತದಲ್ಲಿದೆ. ಈ ಲಸಿಕೆ ಹೊರಬಂದರೆ ಭಾರತವು DNA ಆಧಾರಿತ ಲಸಿಕೆಯನ್ನು ಹೊರತಂದ ಪಂಚದಲ್ಲಿನ ಮೊದಲ ದೇಶವಾಗಲಿದೆ.

೨. ಬಯಲಾಜಿಕಲ್ E: ಹೈದರಾಬಾದ್ ಮೂಲದ ಬಯಲಾಜಿಕಲ್ E ಕಂಪನಿಯು ತನ್ನ Corbevax  ಲಸಿಕೆಯನ್ನು 3ನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ಪರೀಕ್ಷಿಸುತ್ತಿದೆ. ಇದು adjuvant protein subunit ಲಸಿಕೆ.

೩. ಭಾರತ್ ಬಯೋಟೆಕ್‌ನ ಮೂಗಿನ ಮೂಲಕ ಕೊಡುವ ಲಸಿಕೆ: ಕೋವ್ಯಾಕ್ಸೀನ್ ಲಸಿಕೆ ಉತ್ಪಾದಿಸಿದ ಈ ಕಂಪನಿ ಮೂಗಿನಿಂದ ಕೊಡಬಹುದಾದ Adeno & Intranasa ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ.

೪. Gennova ಬಯೋ-ರ್ಮಾಸುಟಿಕಲ್ಸ: ಮಹಾರಾಷ್ಟ್ರದ ಪುಣೆಯ ಮೂಲದ ಈ ಕಂಪನಿ ತನ್ನ m-RNA ಲಸಿಕೆಯನ್ನು ೨ನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿ ಪರೀಕ್ಷಿಸುತ್ತಿದೆ.

೫. ಗುರಗಾಂವ್ ಹರ್ಯಾಣದ Genique Life Sciences ಕಂಪನಿಯ ವೈರಸ್ ರೀತಿಯ ಕಣಗಳ ಲಸಿಕೆ ಕ್ಲಿನಿಕಲ್ ಟ್ರಯಲ್ ಗಿಂತ ಪೂರ್ವದ ಹಂತದಲ್ಲಿದೆ.

Leave a Reply

Your email address will not be published. Required fields are marked *