ಮೈಸೂರು: ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆ ಹಿನ್ನೆಲೆಯಲ್ಲಿ ಮೈಸೂರು ನಗರಕ್ಕೆ ಆಗಮಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದರು.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದರು. ಇದೇ ವೇಳೆ, ಮಠದಲ್ಲಿರುವ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಈ ವೇಳೆ ಸುತ್ತೂರು ಮಠದಲ್ಲಿ ಸಿಎಂಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.
ದಸರಾ ದೀಪಾಲಂಕಾರ ವಿಸ್ತರಣೆಗೆ ಬೇಡಿಕೆ ಹೆಚ್ಚಾಗಿದೆ. ನಾಡಿನ ಮೂಲೆ ಮೂಲೆಗಳಿಂದ ಹೆಚ್ಚು ಜನ ಬಂದು ದೀಪಾಲಂಕಾರ ವೀಕ್ಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಒಂಬತ್ತು ದಿನಗಳ ಕಾಲ ದೀಪಾ ಲಂಕಾರ ವಿಸ್ತರಣೆ ಮಾಡುವುದಾಗಿ ಘೋಷಣೆ ಮಾಡಿದರು.
ಜಂಬೂಸವಾರಿ ಮೆರವಣಿಗೆ ಹಿನ್ನೆಲೆಯಲ್ಲಿ ಮಧ್ಯಾಹ್ನ 2:30ಕ್ಕೆ ಚಿನ್ನದ ಅಂಬಾರಿ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಸತತ ಎರಡನೇ ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಲು ಕ್ಯಾಪ್ಟನ್ ಅಭಿಮನ್ಯು ಸಜ್ಜಾಗಿದ್ದು, ಈತನಿಗೆ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ಚೈತ್ರಾ ಸಾಥ್ ನೀಡಲಿವೆ. ಉಳಿದಂತೆ ನಿಶಾನೆ ಆನೆಯಾಗಿ ಧನಂಜಯ್, ನೌಪತ್ ಆನೆಯಾಗಿ ಗೋಪಾಲಸ್ವಾಮಿ, ಸಾಲಾನೆಗಳಾಗಿ ಅಶ್ವತ್ಥಾಮ ಭಾಗಿಯಾಗಲಿವೆ.