Thursday, 1st December 2022

ವಿಜಯನಗರ ಉತ್ಸವ’ ಮತ್ತು ‘ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ

ಇಂದು ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆ

ವಿಜಯನಗರ: ವಿಜಯನಗರ ಜಿಲ್ಲೆಯ ಅಧಿಕೃತ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.

ವಿಜಯನಗರ ಜಿಲ್ಲಾ ಉದ್ಘಾಟನಾ ಹಾಗೂ ವಿಜಯನಗರ ಉತ್ಸವ ಸಮಾರಂಭ ಶನಿವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ನಡೆಯ ಲಿದ್ದು ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.

ಸ್ಥಳೀಯ ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯಾರಣ್ಯ ವೇದಿಕೆಯನ್ನು ಸಿದ್ಧಗೊಳಿಸ ಲಾಗಿದೆ. ವೇದಿಕೆ ಮೇಲೆ ಹಂಪಿ ಮಾತಂಗ ಪರ್ವತ ಹಾಗೂ ವಿರೂಪಾಕ್ಷೇಶ್ವರ ಗೋಪುರ ಸುಂದರವಾಗಿ ನಿರ್ಮಿಸಲಾಗಿದ್ದು ನೋಡಗರ ಮನಸೆಳೆಯುತ್ತದೆ.

ವಿದ್ಯುತ್ ದೀಪಗಳಿಂದ ವೇದಿಕೆ ಝಗಮಗಿಸುತ್ತಿದೆ. ಕ್ರೀಡಾಂಗಣದ ಸುತ್ತಲೂ ಹಂಪಿ ಕಲಾತ್ಮಕ ಚಿತ್ರಗಳನ್ನು ಅಳಪಡಿಸಲಾಗಿದೆ. ಉದ್ಘಾಟನೆ ಕಾರ್ಯಕ್ರಮದ ಸಂದರ್ಭದಲ್ಲಿ 464 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಮತ್ತು ಶಂಕು ಸ್ಥಾಪನೆ ಕಾರ್ಯವನ್ನು ಸಿಎಂ ನೆರವೇರಿಸಲಿದ್ದಾರೆ.

ಸಂಜೆ 4ಕ್ಕೆ ವಡಕರಾಯ ದೇವಸ್ಥಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ವಿಜಯನಗರ ವೈಭವ ಮೆರವಣಿಗೆ ನಡೆಯಲಿದೆ. ಈ ಕಲಾತಂಡಗಳ ಜೊತೆಗೆ ಆಳ್ವಾಸ್ ಸಂಸ್ಥೆಯ 25 ಕಲಾವಿದರು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಪ್ರಧಾನ ವೇದಿಕೆಗೆ ವಿದ್ಯಾರಣ್ಯರ ಹೆಸರಿಡಲಾಗಿದೆ.

ಖ್ಯಾತ ಡ್ರಮ್ಮರ್ ಶಿವಮಣಿ, ರಾಜೇಶ್ ವೈದ್ಯ ಮತ್ತು ಪ್ರವೀಣ್ ಗೋಡ್ಖಿಂಡಿ ಅವರು ರಾತ್ರಿ 10ಕ್ಕೆ ವಾದ್ಯ ಸಂಗೀತದ ರಸದೌತಣ ಉಣ ಬಡಿಸಲಿದ್ದಾರೆ. ಅಲ್ಲದೇ, ಸೋಜುಗದ ಸೂಜಿಮಲ್ಲಿಗೆ ಖ್ಯಾತಿಯ ಗಾಯಕಿ ಅನನ್ಯ ಭಟ್, ಕಲಾವಿದರಾದ ಕಲಾವತಿ ದಯಾನಂದ, ಶಹನಾಜ್‍ ಅಖ್ತರ್ ಮುಂತಾದವರು ಕಾರ್ಯಕ್ರಮ ನೀಡಲಿದ್ದಾರೆ.