Saturday, 14th December 2024

Indian Medical Association: ನೈಟ್‌ ಡ್ಯೂಟಿ ವೇಳೆ ಬಹುತೇಕ ವೈದ್ಯರು ಸುರಕ್ಷಿತರಾಗಿಲ್ಲ; ಸಮೀಕ್ಷಾ ವರದಿಯಲ್ಲಿದೆ ಬೆಚ್ಚಿಬೀಳಿಸುವ ಅಂಶ

Indian Medical Association

ನವದೆಹಲಿ: ಕೋಲ್ಕತ್ತಾ ಆರ್‌.ಜಿ. ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (RG Kar Medical College and Hospital)ಯಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಮಾತ್ರವಲ್ಲ ಕರ್ತವ್ಯ ನಿರತ ವೈದ್ಯರ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ಇದೀಗ ಹೊರ ಬಂದ ಸಮೀಕ್ಷಾ ವರದಿಯೊಂದು ಬೆಚ್ಚಿ ಬೀಳಿಸುವ ಅಂಶಗಳನ್ನು ಬಹಿರಂಗಪಡಿಸಿದೆ. ಇಂಡಿಯನ್‌ ಮೆಡಿಕಲ್‌ ಅಸೋಸಿಯೇಷನ್‌ (Indian Medical Association) ನಡೆಸಿದ ಸಮೀಕ್ಷೆಯಲ್ಲಿ ದೇಶದ ವೈದ್ಯರ ಪೈಕಿ ಮೂವರಲ್ಲಿ ಒಬ್ಬರು ಕರ್ತವ್ಯದ ಸ್ಥಳದಲ್ಲಿ ಅಸುರಕ್ಷಿತರಾಗಿದ್ದಾರೆ ಅಥವಾ ತೀವ್ರ ಅಸುರಕ್ಷಿತರಾಗಿದ್ದಾರೆ. ಆ ಪೈಕಿ ಮಹಿಳಾ ವೈದ್ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಕಂಡುಕೊಳ್ಳಲಾಗಿದೆ. ಈ ಪೈಕಿ ಕೆಲವರು ಸ್ವಯಂ ರಕ್ಷಣೆಗಾಗಿ ಆಯುಧ ಕೊಂಡೊಯ್ಯುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದಾರೆ.

ರಾತ್ರಿ ಶಿಫ್ಟ್‌ ವೇಳೆ ಸುಮಾರು ಶೇ. 45ರಷ್ಟು ಮಂದಿಗೆ ಡ್ಯೂಟಿ ರೂಮ್‌ ಕೂಡ ಲಭ್ಯವಿಲ್ಲ ಎನ್ನುವ ಮಾಹಿತಿಯೂ ಬಹಿರಂಗಗೊಂಡಿದೆ. ಇತ್ತೀಚೆಗೆ ದೇಶದಲ್ಲಿ ವೈದ್ಯರ ಸುರಕ್ಷತೆ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಆನ್‌ಲೈನ್‌ ಮೂಲಕ ಐಎಂಎ ಈ ಸಮೀಕ್ಷೆಯನ್ನು ಕೈಗೊಂಡಿತ್ತು. ಈ ಸಮೀಕ್ಷೆಯಲ್ಲಿ 3,885 ವೈದ್ಯರು ಪಾಲ್ಗೊಂಡಿದ್ದರು.

ʼʼ22 ರಾಜ್ಯಗಳ ವೈದ್ಯರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಪೈಕಿ ಶೇ. 85ರಷ್ಟು ಮಂದಿ 35 ವರ್ಷದೊಳಗಿನವರು, ಶೇ. 61 ರಷ್ಟು ಮಂದಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆʼʼ ಎಂದು ಐಎಂಎ ಮೂಲಗಳು ಮಾಹಿತಿ ನೀಡಿವೆ. ʼʼಕೆಲವು ಎಂಬಿಬಿಎಸ್‌ ಕೋರ್ಸ್‌ಗಳಲ್ಲಿ ಶೇ. 63ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ವೈದ್ಯರ ಪೈಕಿ ಶೇ. 24.1ರಷ್ಟು ಮಂದಿ ಅಸುರಕ್ಷಿತರಾಗಿದ್ದೇವೆ ಎಂದು ಹೇಳಿದರೆ ಶೇ. 11.4ರಷ್ಟು ಮಂದಿ ಸುರಕ್ಷತೆಯ ಬಗ್ಗೆ ತೀವ್ರವಾಗಿ ಕಳವಳಗೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಈ ಪೈಕಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆʼʼ ಎಂದು ಸಮೀಕ್ಷಾ ವರದಿ ಹೇಳಿದೆ.

ಶೇ. 45ರಷ್ಟು ಕಡೆಗಳಲ್ಲಿ ಮಹಿಳಾ ವೈದ್ಯರ ಸುರಕ್ಷತೆ ಮೇಲೆ ಹೆಚ್ಚು ಪರಿಣಾಮಕಾರಿಯಾಗಿರುವ ಡ್ಯೂಟಿ ರೂಮ್‌ ಲಭ್ಯವಿಲ್ಲ ಎನ್ನುವುದು ತೀವ್ರ ಕಳವಳವನ್ನುಂಟು ಮಾಡಿದೆ. ಇನ್ನು ಲಭ್ಯವಿರುವ ಡ್ಯೂಟಿ ರೂಮ್‌ ಪೈಕಿ ಬಹುತೇಕ ಕಡೆ ಅಧಿಕ ಜನ ಸಂದಣಿ ಕಂಡು ಬರುತ್ತಿದೆ, ಖಾಸಗಿತಕ್ಕೆ ಧಕ್ಕೆ ಉಂಟಾಗುತ್ತಿದೆ. ಜತೆಗೆ ರೂಮ್‌ಗಳಿಗೆ ಲಾಕ್‌ ಸೌಲಭ್ಯವಿಲ್ಲ. ಹಲವು ಕಡೆ ಡ್ಯೂಟಿ ರೂಮ್‌ಗೆ ಅಟ್ಯಾಚ್‌ ಬಾತ್‌ರೂಮ್‌ ಕೂಡ ಲಭ್ಯವಿಲ್ಲ. ಜತೆಗೆ ಹಲವೆಡೆ ಸೂಕ್ತ ಲೈಟ್‌ ಸೌಲಭ್ಯ ಮತ್ತು ಸಿಸಿ ಟಿವಿ ಕ್ಯಾಮೆರಾ ಕೂಡ ಲಭ್ಯವಿಲ್ಲ ಎಂಬ ಆತಂಕಕಾರಿ ಅಂಶಗಳೂ ವರದಿಯಲ್ಲಿ ಬಹಿರಂಗಗೊಂಡಿದೆ.