Saturday, 14th December 2024

ಫಿಟ್‌ನೆಸ್ ಪ್ರಮಾಣ ಪತ್ರವಿಲ್ಲದೆ ವಾಹನ ಓಡಿಸಿದರೆ 10 ಸಾವಿರವರೆಗೆ ದಂಡ !

ನವದೆಹಲಿ: ಫಿಟ್‌ನೆಸ್ ಪ್ರಮಾಣಪತ್ರವಿಲ್ಲದ ಸಾರಿಗೆ ವಾಹನಗಳ ಮಾಲೀಕರು ಮತ್ತು ಚಾಲಕರು 10,000 ರೂ.ವರೆಗೆ ದಂಡ ಮತ್ತು ಜೈಲು ಶಿಕ್ಷೆಗೆ ಅರ್ಹರಾಗುತ್ತಾರೆ ಎಂದು ದೆಹಲಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಮೋಟಾರು ವಾಹನಗಳ (ಎಂವಿ) ಕಾಯ್ದೆ ಉಲ್ಲಂಘಿಸಿ ಮಾನ್ಯ ಫಿಟ್‌ನೆಸ್ ಪ್ರಮಾಣ ಪತ್ರವಿಲ್ಲದೆ ಇಂತಹ ಹಲವು ವಾಹನಗಳು ರಸ್ತೆಯಲ್ಲಿ ಸಂಚರಿಸು ತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಇಲಾಖೆ ಈ ಕ್ರಮ ಕೈಗೊಂಡಿದೆ. ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ರಸ್ತೆಗಳಲ್ಲಿ ಅಂತಹ ವಾಹನಗಳ ಹುಡುಕಾಟ ಮುಂದುವರಿಸಲು ನಮ್ಮ ತಂಡಗಳಿಗೆ ತಿಳಿಸಲಾಗಿದೆ. ಹೀಗಾಗಿ ನಿಮಯ ಉಲ್ಲಂಘಿಸುವವರನ್ನು ಹಿಡಿಯುವ ಕೆಲಸವನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಇಲಾಖೆ ಇತ್ತೀಚೆಗೆ ಹೊರಡಿಸಿದ ಸಾರ್ವಜನಿಕ ಪ್ರಕಟಣೆಯಲ್ಲಿ “ಸರಕಾರಿ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವ ಜನಿಕ ವಲಯದ ಘಟಕಗಳಿಗೆ ಸೇರಿದ ಸಾರಿಗೆ ವಾಹನಗಳು ಸೇರಿದಂತೆ ಅನೇಕ ಮಾಲೀಕರು ಅಥವಾ ಚಾಲಕರು ಫಿಟ್‌ನೆಸ್ ಪ್ರಮಾಣ ಪತ್ರವಿಲ್ಲದೆ ವಾಹನ ಚಲಾಯಿಸುತ್ತಿರುವುದು ಸಾರಿಗೆ ಇಲಾಖೆಯಿಂದ ಗಮನಿಸಲ್ಪಟ್ಟಿದೆ,” ಎಂದು ಹೇಳುತ್ತದೆ. ಇದು ಮೋಟಾರು ವಾಹನಗಳ ಕಾಯಿದೆ, 1988 ರ ಸಂಪೂರ್ಣ ಉಲ್ಲಂಘನೆಯಾಗಿದೆ.

ಸಾರ್ವಜನಿಕ ಸೇವಾ ವಾಹನಗಳು, ಸರಕು ವಾಹನಗಳು, ಬಸ್‌ಗಳು ಮತ್ತು ಶಾಲಾ ಕಾಲೇಜುಗಳ ಕ್ಯಾಬ್‌ಗಳನ್ನು ಬಳಸುವ ಎಲ್ಲಾ ವಾಹನ ಮಾಲೀಕರು ಮತ್ತು ಚಾಲಕರು ಮಾನ್ಯವಾದ ವಾಹನ ಫಿಟ್‌ನೆಸ್ ಪ್ರಮಾಣಪತ್ರವನ್ನು ಹೊಂದಿರಬೇಕು.